Back To Top

 ನನಗೂ ನಿಮ್ಮೊಂದಿಗಿರುವ ಆಸೆ | ಮಾರುತಿ ಎಂ. ಸಿ

ನನಗೂ ನಿಮ್ಮೊಂದಿಗಿರುವ ಆಸೆ | ಮಾರುತಿ ಎಂ. ಸಿ

ನನಗೂ ನಿಮ್ಮೊಂದಿಗಿರುವ ಆಸೆ,
ನಿಮ್ಮ ಏಸು-ರಾಮ-ರಹೀಮ
ಬುದ್ಧ-ಮಹಾವೀರರೊಂದಿಗೆ.
ದೂರದಿರಿ ನನ್ನ,
ನಿಮ್ಮ ಜಾತಿ-ಧಮ೯- ದಾರಿದ್ರ್ಯದ
ಸಂಕೋಲೆಯ ಹೆಸರಿನಲಿ.

ನನಗೂ ಆಸೆಯಿದೆ,
ನಿಮ್ಮೆದೆಯ ಕತ್ತಲೆಯ ಚರ್ಚಿನೊಳಗೆ
ಏಸುವಿನ ಕಾರುಣ್ಯದ ಮೇಣ ಹೊತ್ತಿಸಲು,
ಕಪ್ಪು ಕವಿದ ಗುಡಿಯೊಳಗೆ
ಜಾತಿ ಧರ್ಮದ ಗಡಿಯೊಳಗೆ
ದೀಪವನೊತ್ತಿಸಲು,
ಮಸೀದಿ-ಮಂದಿರ-ಚೈತ್ಯಾಲಯದಲ್ಲಿ
ಮಹಾವೀರನ ಸೈರಣೆಯ ಜ್ಯೋತಿಯನು ಬೆಳಗಿಸಲು.

ನನಗೂ ತವಕವಿದೆ,
ಭಾವ-ಬಂಧದ ಬೆಳಕನಿಂದ,
ಮನುಷ್ಯತ್ವದ ನಂಟಿನಿಂದ
ಬೆಸುಗೆ ಬೆಸೆಯಲು,
ಒಬ್ಬರನ್ನೊಬ್ಬರು ನಿರ್ಭಯವಾಗಿ
ನೋಡಿ-ಕೂಡಿ-ಬೆಳೆಯಲು.
ನಿಮ್ಮ ಕಣ್ಣಗಳಲ್ಲೆನ್ನ ಕಂಡು,
ನನ್ನ ಕಣ್ಣುಗಳನ್ನು ಕನ್ನಡಿಯಾಗಿಸಿಕೊಳ್ಳಲು.

ಭಾವ ಬೆಳಕಿನಲಿ ನಿಮ್ಮ ಕಣ್ಣೀರೊರೆಸಿ,
ನಿಮ್ಮ ನಗೆಯ ಕೂಡೆ ಬದುಕುವ ಬಯಕೆ ನನಗೆ.
ಈ ದೇಹದ ಬೆಳಕು ನಂದುವವರೆಗೆ.
ದೂರದಿರಿ ನನ್ನ,
ನಿಮ್ಮ ಮತ-ಪಂಥ ಗ್ರಂಥದ ಚೌಕಟ್ಟಿನ ಹೆಸರಿನಲಿ.

ಗುಡಿ-ಗುಮ್ಮಟ-ಚರ್ಚು-ಮಂದಿರಗಳೆಂಬ
ಆಲಯಗಳಾಚೆ,
ಬಯಲೆಂಬ ಬಯಲಿನಲಿ ನಿಮ್ಮನು ಸಂಧಿಸಿ.
ನಾನು – ನೀನೆಂಬ ದ್ವೈತಗಳ ಕಳಚಿ
ಮನುಷ್ಯತ್ವವೆಂಬ ಅದ್ವೈತದಲಿ
ಬೆರೆತು ಕೂಡುವ ಹಂಬಲವೆನೆಗೆ.

ಕ್ರಿಸ್ತನ ಕರುಣೆಯನರಿಯದ
ಕಪ್ಪು ಹೃದಯದಲಿ
ಬಿಳಿ ಗುಲಾಬಿಯ ಬೆಳೆದು,
ರಾಮ-ರಹೀಮನರಿಯದ ಮನಸ್ಸಿನಲ್ಲಿ
ಕೆಂಪು ಹಾಸಿಗೆಯ ಕಿತ್ತೆಸೆದು
ಬಿಳಿಯ ಚಾದರವನ್ನೊದಿಸುವಾಸೆಯಿದೆ.

ಅಕ್ಕನ ಬೆತ್ತಲೆ ಮೆರವಣಿಗೆಯನ್ನು
ಇಲ್ಲವಾಗಿಸಿ,
ಅಕ್ಕ-ತಂಗಿಯರ ಬಲಾತ್ಕರಿಸುವ
ಅತ್ಯಾಚಾರಿತನವ ಕೊಂದು,
ಹೊರ-ಒಳಗು ಭಾವ-ಬಂಧದ ಹೊದಿಕೆಯನು
ಹೊದಿಸುವ ತವಕವೆನಗೆ.

ಆಕೆಯ ಸೆರಗ ಮಡಿಲಲಿ ಪುಟ್ಟ ಮಗುವಾಗಿ,
ಮೃದು ತೊಡೆಯ ಮೇಲನೇರಿ
ಜೋಗುಳವ ಕೇಳಿ,
ಅಕ್ಕನ ತೊಟ್ಟಿಲನೇರಿ ಮಲಗುವಾಸೆ.

ಬಿರುಕಿನಲಿ ಬೆಸುಗೆ ಬೆಸೆದು
ನಿಮ್ಮಳಗೊಂದಾಗುವ ತುಡಿತವಿದೆ.
ದೂರದಿರಿ ನನ್ನ
ನಿಮ್ಮ ಜಾತಿ-ಲಿಂಗ-ವರ್ಣ-ಧರ್ಮದ ಹೆಸರಿನಲಿ

ಮಾರುತಿ ಎಂ. ಸಿ.
ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ

Prev Post

ಏಕಾಂತ ಬಯಸುವ ಜೀವಿ ಆಕೆ | ಅಸ್ಲಂ ವಾಲಿಕಾರ

Next Post

ಹಚ್ಚ ಹಸಿರ ತನುವು ನಮ್ಮ ಪ್ರೇಮ | ಮುಖೇಶ್ ಪಿ

post-bars

Leave a Comment

Related post