ಕಾಲ ಬದಲಾದಾಗ | ಕೆ. ಸ್ವಾತಿ
ಕಾಲಚಕ್ರ ಉರುಳುತ್ತಿದೆ
ಕಡಿವಾಣ ಹಾಕುವುದೆಂತು?
ಹೊತ್ತು ಕಳೆದು
ಹೊತ್ತು ಮೂಡುವಷ್ಟು ನಿತ್ಯ ಚಲನಶೀಲ
ಒಂದೊಮ್ಮೆ ಹಳ್ಳಿಯಲ್ಲಿ
ಮನೆಮಂದಿಯೆಲ್ಲಾ ಒಂದಾಗಿ
ಹರಟುವ ಕಾಲವಿತ್ತು.
ಸಂಬಂಧಗಳು ಕಷ್ಟ ಸುಖಗಳ
ಹಂಚಿಕೊಳ್ಳುವಿಕೆಯಲ್ಲಿ ಕಳೆದುಹೋಗುತ್ತಿತ್ತು.
ಅಜ್ಜ – ಅಜ್ಜಿಯರ ಪ್ರೀತಿ, ವಾತ್ಸಲ್ಯ
ಮೊಮ್ಮಕ್ಕಳ ಆಟ ತುಂಟಾಟಗಳು
ಸಾಲು ಸಾಲಾಗಿ ಕಣ್ಣ ಮುಂದೆ ಹರಿದಾಡುತ್ತಿತ್ತು
ಎಲ್ಲರೂ ಸಾಲಾಗಿ ಉಣ್ಣುವ ಪರಿಪಾಠವಿತ್ತು.
ಈಗ ಅವಕ್ಕೆಲ್ಲಿದೆ ಬಿಡುವು?
ಮಗ ದೂರದ ಅಮೇರಿಕಾದಲ್ಲಿದ್ದರೆ
ಮಗಳಾದರೋ ಕಣ್ಣಿಗೆ ಕಾಣದಷ್ಟು ದೂರ
ಹುಟ್ಟಿದೂರಿನಲ್ಲಿ ತಂದೆ ತಾಯಿ ಇಬ್ಬರೇ
ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತ
ಏನೂ ಅರಿಯದವರಂತೆ
ಇಬ್ಬರ ನಡುವೆ
ಮೌನ ಹೆಪ್ಪುಗಟ್ಟುತ್ತಿದೆ.
ತಿಂಗಳಿಗೊಂದು ಸಲ ಕರೆಗಂಟೆ ಬಾರಿಸುವ
ದೂರವಾಣಿ; ಅದರೆಡೆಯಲ್ಲಿ ಮೊಮ್ಮಕ್ಕಳ
ಇಂಗ್ಲಿಷ್ ಮಾತುಗಳು
ಸಂಬಂಧಗಳ ಮಿಳಿತ ಕಳೆದುಹೋಗುತ್ತಿರುವ
ಭಾವನೆಗಳು ಇಲ್ಲದಾಗುತ್ತಿರುವ,
ಈ ವೇಳೆಯಲ್ಲಿ ಕಾಲ ಬದಲಾಗಿದೆ;
ಬದಲಾಗುತ್ತಿದೆ.
ಅದರೊಂದಿಗೆ ಮನುಷ್ಯನೂ ಬದಲಾಗುತ್ತಿದ್ದಾನೆ
ಎಂದು ಹೇಳುವುದು ನಿಜವಲ್ಲವೇನು?
ಕೆ. ಸ್ವಾತಿ
ದ್ವಿತೀಯ ಸ್ನಾತಕೋತ್ತರ ಪದವಿ
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಕಾಸರಗೋಡು