ಇಲ್ಲ್ಯಾಕ್ ಬರತೈತೋ ಇಷ್ಟೊಂದ ಮಳಿ | ಪ್ರಸಾದ. ಗುಡ್ಡೋಡಗಿ
ಇಲ್ಲ್ಯಾಕ್ ಬರತೈತೋ ಇಷ್ಟೊಂದ ಮಳಿ
ಧಾರವಾಡ ಗಾಳಿ ಒಳಗೊಳಗ ಸುಡತೈತೋ ನನ್ನ ಕರುಳ ಬಳ್ಳಿ||
ಮಿರ್ಗಿ ಮಿಂಚಾಗ ಸುರುವಾಯ್ತೋ ಇದರ ದಗದ
ಏನಿದು ಧಾರವಾಡ ಮಳಿ ಬಿಡವಲ್ತೊ ಮಗಂದ
ದಬಾಯಿಸಿ ಬರುವ ಮಾಡ-ಮಳಿಯಿಂದ ಮಾಡೈತಿ ಬೆರಗ
ನಿಂತು ಹೊಳ್ ಒಮ್ಮಿ ನೋಡ ಇದು ಮಲೆನಾಡ ಸೆರಗ
ಈ ತಂಪಾನ ಹಡಬಿ ಮಳೀ ತಪ್ಪಿ ನಮ್ಮೂರಾಗ ಬಿದ್ರ
ಸಂಪಾನ ಇರುವವು ಬೆಪ್ಪಾನೆ ಕಾದಿರೋ ಹೊಲ-ಮನಿ-ಭೂಮಿ
ದಡಕ್ಕನೆ ತುಂಬೊವು ಹೆದ್ದೊರೆ ಬಾವಿಯ ಬಾಯಿ
ಗಪ್ಪನೇ ಕೊಳಕಟ್ಟಿ ದಿಂಡ ನೇಗಿಲು ಹೂಡಿ ಬಿತ್ತೋವು ಒಕ್ಕಲಿಗ್ಯಾರು ಕುಂತಾರೋ ಛಿದ್ರಾಗಿ
ಅಶಿ ಭರಣಿ ಮಗಾ ಬಂದೋದ್ರ
ಅಂಗಳಕ ಬಿತ್ತಬೋದು ಗಂಗಾಳ ತುಂಬ್ಹಾಂಗ
ಹಸ್ತವ ನಂಬಿ ಬ್ಯಾಸತ್ತ ಕುಂತಾವ
ಮಾತ ಬರುವ ಮೂಕ ದನಗಳ ಸಂಗ
ಉತ್ತುವ ನೆಲವಲ್ಲ ಬಿತ್ತುವ ಜನರಿಲ್ಲ
ಕುಂತು ಚಾಕರಿ ಮಾಡೋ ಮಂದಿಗೆ ಯಾಕ್ ಇಷ್ಟೊಂದು ಮಳೀಯೆಲ್ಲ
ಹುಟ್ಟೂರು ಬಿಟ್ಟು ಮಸ್ತಕವ ತುಂಬಾಕ ಬಂದೊರು ಎಲ್ಲಾ
ಮೆತ್ತನೆ ಹವಕ ಚಿತ್ತಸ್ವಾಸ್ಥ್ಯವ ಕಳಕೊಂಡವರೆಯೆಲ್ಲಾ
ಮರ್ತ ಕುಂತಿ ನೀ ಎಲ್ಲಾ ಇಲ್ನೋಡಿ ತಿಳಿಗಾಳಿ
ಪಕ್ವವಾಗಬೇಕಿರೋ ನೀ ಹಣ್ಣಿನ ತಳಿ
ನಿನ್ದಾರಿ ಕಾಯತೈತೋ ನಮ್ಮೂರ ಜಾಲಿ
ಇಲ್ಲ್ಯಾಕ್ ಬರತೈತೋ ಇಷ್ಟೊಂದ ಮಳಿ
ತಪ್ಪಿ ಬಿದೈತೋ ಇದರ ಹಳಿ||
ಪ್ರಸಾದ. ಗುಡ್ಡೋಡಗಿ
ಬಿ.ಎ.ದ್ವಿತೀಯ ವರ್ಷ
ಕರ್ನಾಟಕ ಕಾಲೇಜು, ಧಾರವಾಡ