ಹಿಂದಿರುಗಿ ಬಾ | ಶಶಿಸ್ಕಾರ ನೇರಲಗುಡ್ಡ
ಹಿಂದಿರುಗಿ ಬಾ…
ಸೇಡು ಇದ್ದರೆ ಇರಲಿ ಗೆಳತಿ
ಹಿಡಿದ ಕೈಯನ್ನು ಮತ್ತೆ ಬಿಟ್ಟು ಹೋಗುವುದಕ್ಕಾದರೂ ಸರಿ,
ನೀನೊಮ್ಮೆಯಾದರು ಹಿಂದಿರುಗಿ ಬಾ…..
ನಾ ನಡೆಯುವ ಹಾದಿ-ಬೀದಿಯಲಿ
ಸಿಕ್ಕಿದವರೆಲ್ಲರೂ ಕೇಳುತ್ತಾರೆ.
ಅವಳು ಯಾಕೆ ತಂಪಾದ ಹೊತ್ತಿನಲ್ಲೇ
ತಣ್ಣಗೆ ತ್ಯಜಿಸಿ ಹೊರ ನಡೆದಳು? ಅಂತ.
ಯಾರು-ಯಾರಿಗೆ ಅಂತ ನನ್ನ ಒಡೆದ ಹೃದಯ,
ನೊಂದ ಮನಸ್ಸು ಉತ್ತರ ಕೊಡುತ್ತದೆ.?
ಸಮಜಾಯಿಷಿ ನೀಡಲು ಮುಂದಾದ ನಾಲಿಗೆ
ಗಂಟಲ ಬುಡದಲ್ಲೇ ಸಾಯುತ್ತಿದೆ ಸಖಿ
ಹೇ.. ಕಣ್ಮಣಿ
ನೀನೂ ನನಗಾಗಿ ಅಲ್ಲದಿದ್ದರೂ
ಸಿಕ್ಕಲ್ಲೆಲಾ ಕೇಳುತ್ತಾರಲ್ಲ; ಜನ,
ಅವರಿಗಾಗಿಯಾದರು ಒಮ್ಮೆ ಹಿಂದಿರುಗಿ ಬಾ….
ನಿನ್ನ ಹಿಡಿ ಪ್ರೀತಿಗಾಗಿ, ಬಿಸುಪಿನ ತೆಕ್ಕೆಗಾಗಿ
ಕಣ್ಣುಬ್ಬುಗಳ ನಡುವಿನ ಮಧು ಬಟ್ಟಲ ಚುಕ್ಕಿಗಾಗಿ
ತುಂಬಾ ದಿನಗಳಿಂದ ಕಣ್ಣೀರಿನ ಕಂದಾಯ ಕಟ್ಟುತಿದ್ದೀನಿ..
ನನ್ನ ಅಂತರಾಳದ ಪ್ರೇಮವನ್ನು
ಚೂರೆ-ಚೂರಾದರೂ ಗೌರವಿಸು ನಲ್ಲೆ.
ಬತ್ತಿದ ಕಣ್ಣೀರನ್ನು ಪುನಃ ಜೋಗದಂತೆ
ಧುಮ್ಮಿಕಿಸುವುದಕ್ಕಾದರೂ ಸರಿ, ಬಾ ನಲ್ಲೆ ..
ಕಡಲ ತಡಿಯಲ್ಲಿ ಕಾಲನ್ನು ತೋಯಿಸುವ ಅಲೆಗಳಂತೆ
ಮೈ ಬೆಚ್ಚಗಾಗಿಸಿ, ಬೆವರ ಹನಿ ಮೂಡುವಂತೆ ಮಾಡಿ
ನೀನು ಬೆನ್ನು ತೋರಿಸಿ ನಡೆದ ದಿನದಿಂದ
ನನ್ನ ಉಸಿರಾಟ ತಾಳ ತಪ್ಪಿದೆ,
ತಾಳ ತಪ್ಪಿದ ಉಸಿರನ್ನು ಮೊದಲಿನಂತಾಗಿಸುವುದಕ್ಕಾದರು ಸರಿ ಬಾ.
ತುಂಬು ಬಾಳಿನ ಕೊನೆಯ ದೀಪ ಆರುವ ಮುನ್ನ
ಒಡೆದ ಹೃದಯವನ್ನು, ನೊಂದ ಮನಸ್ಸನ್ನು
ಸಂತೈಸುವುದಕ್ಕಾದರು
ಒಮ್ಮೆ ಬಲಗಾಲು ಎತ್ತಿಟ್ಟು ಬಾ….
ಸೇಡು ಇದ್ದರೆ ಇರಲಿ ಗೆಳತಿ
ಹಿಡಿದ ಕೈಯನ್ನು ಮತ್ತೆ ಬಿಟ್ಟು ಹೋಗುವುದಕ್ಕಾದರೂ ಸರಿ,
ನೀನೊಮ್ಮೆಯಾದರು ಹಿಂದಿರುಗಿ ಬಾ…….
ಶಶಿಸ್ಕಾರ ನೇರಲಗುಡ್ಡ
ಪತ್ರಿಕೋದ್ಯಮ ವಿದ್ಯಾರ್ಥಿ
ಎಸ್. ಡಿ. ಎಮ್. ಕಾಲೇಜು, ಉಜಿರೆ.