‘ಪರೀಕ್ಷಾ ಸಾಹಿತ್ಯ’ ಬೇರೆಲ್ಲ ಸಾಹಿತ್ಯಕ್ಕಿಂತ ವಿಭಿನ್ನ | ಸಂತೋಷ್ ಇರಕಸಂದ್ರ
ಸಾಮಾನ್ಯವಾಗಿ ನಾವು ವಚನ ಸಾಹಿತ್ಯ, ಲಗ್ನಪತ್ರಿಕೆ ಸಾಹಿತ್ಯ, ಗೋಡೆ ಸಾಹಿತ್ಯ, ಜಾಹೀರಾತು ಸಾಹಿತ್ಯ, ಮೈಲಿಗಲ್ಲು ಸಾಹಿತ್ಯ, ಟಿಕೇಟ್ ಸಾಹಿತ್ಯ, ಕರಪತ್ರ ಸಾಹಿತ್ಯ, ಪ್ಲೆಕ್ಸ್ ಸಾಹಿತ್ಯ, ಡೆಸ್ಕು ಸಾಹಿತ್ಯ, ಶೌಚಾಲಯ ಸಾಹಿತ್ಯ ಇವುಗಳನ್ನು ಕೇಳಿರುತ್ತೇವೆ. ಕೆಲ ಬಾರಿ ನಾವೂ ಕಲಾವಿದರಾಗಿ ಖಾಲಿ ಸ್ಥಳದಲ್ಲಿ ಕೊರೆದಿರುತ್ತೇವೆ. ಇವುಗಳ ಜೊತೆಗೆ ಒಂದು ವಿಶೇಷ ಸಾಹಿತ್ಯವನ್ನು ಸೇರಿಸಬಹುದು. ಅದುವೇ ಪರೀಕ್ಷಾ ಸಾಹಿತ್ಯ.
ಪರೀಕ್ಷೆಯಲ್ಲಿ ಸಾಹಿತ್ಯ ಬರೆಯುವುದಕ್ಕೆ ಏನಿರುತ್ತದೆ? ಪ್ರಶ್ನೆಗಳಿಗೆ ಉತ್ತರ ಬರೆಯುವ ಕಾರ್ಯ ಅಷ್ಟೇ ಎಂದು ಹೇಳಬಹುದು. ಆದರೆ ಉತ್ತರ ಗೊತ್ತಿಲ್ಲದ ಪ್ರಶ್ನೆಗೆ ಏನು ಬರೆಯುವುದು. ಮನಸಿಗೆ ತೋಚಿದ ಹಾಡೋ, ಕವಿತೆಯೋ ಅಥವಾ ಮನಮೆಚ್ಚಿದ ಹುಡುಗಿಯ ಕಥೆಯನ್ನು ಬರೆಯುವುದುಂಟು. ಪರೀಕ್ಷೆಯಲ್ಲಿ ಸಾಹಿತ್ಯವನ್ನು ಬರೆಯುವವರು ಸಾಹಿತಿಗಳೇ ಆಗಿರುತ್ತಾರೆ. ಪರೀಕ್ಷಾ ಸಾಹಿತ್ಯವನ್ನು ಬರೆಯುವವರು ವಿದ್ಯಾರ್ಥಿಗಳು. ಈ ಅನುಭವವನ್ನು ಶಿಕ್ಷಕರು ಹತ್ತಿರದಿಂದ ಪಡೆದಿರುತ್ತಾರೆ. ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಓದಿ ಸಂತೃಪ್ತಿ ಪಡೆದು ಹೊಟ್ಟೆ ಹುಣ್ಣಾಗುವಂತೆ ನಕ್ಕಿರುತ್ತಾರೆ.
ಮೊನ್ನೆ ಆಶ್ರಮವೊಂದು ಸ್ವಾಮಿ ವಿವೇಕಾನಂದರ ವಿದ್ಯಾರ್ಥಿ ಜೀವನವನ್ನು ಕುರಿತಂತೆ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಿತು. ಒಂದು ವಾರ ಮೊದಲೇ ಪ್ರತಿ ವಿದ್ಯಾರ್ಥಿಗಳಿಗೆ 40 ಪುಟಗಳ ಎರಡು ಪುಸ್ತಕಗಳನ್ನು ನೀಡಿ, ಓದಲು ಸಮಯ ಕೊಟ್ಟು ಪರೀಕ್ಷೆಯನ್ನು ನಡೆಸಲಾಯಿತು. ಪರೀಕ್ಷೆಯನ್ನು ಬರೆದವರೆಲ್ಲರೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಾಗಿದ್ದರು. ಓದಲು ನೀಡಿದ ಪುಸ್ತಕದಲ್ಲಿಯೇ ಎಲ್ಲಾ ಪ್ರಶ್ನೆಗಳನ್ನು ಕೇಳಲಾಗಿತ್ತು. ಕೆಲ ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ತುಂಬ ಹಾಸ್ಯಮಯವಾಗಿ, ರಂಜನೀಯವಾಗಿ ಉತ್ತರಿಸಿದ್ದರು. ಆ ಉತ್ತರಗಳನ್ನು ಬರೆದ ಪುಣ್ಯಾತ್ಮರು ಯಾರೋ ತಿಳಿಯದು, ಆದರೆ ಅವರು ಬರೆದ ಉತ್ತರಗಳು ಮಾತ್ರ ಅಭೂತ ಪೂರ್ವವಾಗಿದ್ದವು. ಅವರ ಉತ್ತರಗಳು ಹೀಗಿದ್ದವು.
ತ್ರಿಮೂರ್ತಿಗಳು ಯಾರು ಎಂಬ ಪ್ರಶ್ನೆಗೆ, ವಿರಾಟ್, ಧೋನಿ, ರೋಹಿತ್ ಎಂದು, ವಿವೇಕಾನಂದರಿಗೆ ಸಂಗೀತವನ್ನು ಹೇಳಿಕೊಟ್ಟವರು ಯಾರು ಎಂಬುದಕ್ಕೆ ಚಂದನ್ ಶೆಟ್ಟಿ, ಹಂಸಲೇಖ, ಬಿ. ಜಿ. ಎಲ್ ಸ್ವಾಮಿ ಎಂದು, ಒಬ್ಬ ಬರೆದಿದ್ದ. ಅವ ಯಾವ ಕಾಲದಿಂದ ಯಾವ ಕಾಲಕ್ಕೆ ಸಂಬಂಧವನ್ನು ಕಲ್ಪಿಸಿದ್ದಾನೆ?. ಬಹುಶಃ ಇವರೆಲ್ಲರೂ ಟೈಮ್ ಟ್ರಾವೆಲ್ ಮಾಡಿರಬೇಕು. ವಿವೇಕಾನಂದರು ತಮ್ಮ ಮೆದುಳಿನ ಬೆಳವಣಿಗೆಗೆ ಏನನ್ನು ಸೇವಿಸುತ್ತಿದ್ದರು ಎನ್ನುವುದಕ್ಕೆ ಕಾಬಾಬು, ಬಿರಿಯಾನಿ, ಕುಷ್ಕ ಎಂದು ಬರೆದಿದ್ದ. ಬಹುಶಃ. ಅವನಿಗೆ ಸ್ವಾಮಿ ವಿವೇಕಾನಂದರು ಯಾರು ಎಂಬುದೇ ಗೊತ್ತಿರಲಿಕ್ಕಿಲ್ಲ.
ಮತ್ತೊಬ್ಬನು ಉತ್ತರ ಪತ್ರಿಕೆಯ ತುಂಬ “ಎನು ಮಾಡೋದು, ಯಾವನಿಗೋತ್ತು. ಅವಳು ಸಿಕ್ತಾಳ ಕೈ ಕೊಡ್ತಾಳಾ ಯಾವನಿಗೊತ್ತು” ಎಂದು ಪರಮಾತ್ಮನ ಹಾಡು ಬರೆದು ಪುಟ ತುಂಬಿಸಿದ್ದ. ಇನ್ನೊಬ್ಬ “ಕೇಸರಿಯ ರಂಗು ನಿನ್ನ ಸಂಗವು” ಎಂಬ ಸುಮಧುರ ಗೀತೆಯ ಪಂಕ್ತಿಯನ್ನು ಬರೆದಿದ್ದ. ಮಧ್ವಚಾರ್ಯರು ತಮ್ಮ ಮಠಗಳನ್ನು ಎಲ್ಲಿ ಸ್ಥಾಪಿಸಿದರು ಎಂಬುದಕ್ಕೆ ಮಂಗಳೂರು, ಬೆಂಗಳೂರು, ತುಮಕೂರು ಎಂದು. ಸ್ವಾಮಿ ವಿವೇಕಾನಂದರು ಚಿತ್ರಗಳನ್ನು ಬರೆಯಲು ಬಳಸುತ್ತಿದ್ದ ಸಾಧನ ಯಾವುದು ಎನ್ನುವುದಕ್ಕೆ ಕೈವಾರ ಎಂದು ಬರೆದವರು ಇದ್ದಾರೆ.
ಪ್ರೇಮ ಕಾವ್ಯಗಳನ್ನು ಕೆಲವರು ಬರೆದಿದ್ದರು. ತಮ್ಮ ತಮ್ಮ ಪ್ರೇಮದ ಕಹಾನಿಯನ್ನು ಓದಿ ವಿಮರ್ಶಿಸಲು ಮೌಲ್ಯಮಾಪಕರಿಗೆ ನೀಡಿದ್ದರು. ಕೆಲ ಮಹಾಶಯರು ದಯಮಾಡಿ ನನ್ನನ್ನು ಪಾಸು ಮಾಡಿ ಎಂದು ಬರೆದಿದ್ದರು. ವಿವೇಕಾನಂದರು ಯಾವ ಆಟಗಳನ್ನು ಆಡುತ್ತಿದ್ದರು ಎನ್ನುವುದಕ್ಕೆ ಚೆಸ್, ಬ್ಯಾಸ್ಕೆಟ್ ಬಾಲ್, ಐಪಿಎಲ್ ಎಂದು ಬರೆದಿದ್ದರು.
ಇನ್ನು ಕೆಲವು ಮಹಾನ್ ಜಾಣರು ಪ್ರಶ್ನೆಯನ್ನೇ ತಿರುಗಿಸಿ ಬರೆದು ಉತ್ತರವಾಗಿ ಮಾಡುವ ಕೌಶಲ್ಯವನ್ನು ಕರಗತ ಮಾಡಿಕೊಂಡಿರುತ್ತಾರೆ. ಅವರ ಅಂತಿಮ ಗುರಿ ಪುಟ ತುಂಬಿಸುವುದು. ಇನ್ನೊಬ್ಬ ವಿಶೇಷವಾಗಿ ಪುಟದ ತುಂಬ ಓಂ ನಮಃ ಶಿವಾಯ ಎಂದು ಬರೆದಿದ್ದ. ಕೆಲವರು ಒಂದೇ ಉತ್ತರವನ್ನು ಬೇರೆ ಬೇರೆ ಪ್ರಶ್ನೆಗಳ ಸಂಖ್ಯೆಗಳನ್ನು ಹಾಕಿ ಬರೆಯುವುದುಂಟ. ಹೀಗೆ ಪರೀಕ್ಷಾ ಸಾಹಿತ್ಯವು ತನ್ನ ಉತ್ತರಗಳಿಂದಲೇ ಗಮನ ಸೆಳೆಯುತ್ತದೆ. ಮೌಲ್ಯಮಾಪಕರು ಆಗಾಗ ಚಿನಕುರುಳಿಯ ಹಾಗೆ ಮೆಲುಕು ಹಾಕುತ್ತಾರೆ.
ಸಂತೋಷ್ ಇರಕಸಂದ್ರ
ಪತ್ರಿಕೋದ್ಯಮ ವಿದ್ಯಾರ್ಥಿ
ತುಮಕೂರು ವಿಶ್ವವಿದ್ಯಾನಿಲಯ