Back To Top

 ಓವರ್ ಥಿಂಕಿಂಗ್ ಎಂಬ ಬಿಟ್ಟೂ ಬಿಡದೆ ಕಾಡುವ ಬೇತಾಳ | ನೈದಿಲೆ ಶೇಷೆಗೌಡ

ಓವರ್ ಥಿಂಕಿಂಗ್ ಎಂಬ ಬಿಟ್ಟೂ ಬಿಡದೆ ಕಾಡುವ ಬೇತಾಳ | ನೈದಿಲೆ ಶೇಷೆಗೌಡ

ಚಿಕ್ಕವರಿರುವಾಗ ಚಿಂತೆ ಮಾಡಬೇಡ ಎಂಬ ದೊಡ್ಡವರು ಕೊಡೋ ಸಲಹೆ ಕೇಳಿದಾಗ ಅದೇನದು ಚಿಂತೆ ಅಂದ್ರೆ? ಅಂತ ಯೋಚನೆ ಮಾಡ್ತಿದ್ವಿ. ದೊಡ್ಡವರಾದ ಮೇಲೆ ಸಣ್ಣ ಸಣ್ಣ ವಿಚಾರಗಳಿಗೂ ಅತಿ ಚಿಂತನೆ ಮಾಡುವಾಗ ‘ಓಹೋ ಇದೇ ಚಿಂತೆ ಇರಬಹುದು’ ಅಂತ ಅರಿವು ಮೂಡಿಸಿಕೊಂಡಿದ್ದು ಉಂಟು. ಮಾಡರ್ನ್ ಯುಗದಲ್ಲಿ ಇಂಗ್ಲಿಷ್ ಪದಗಳ ಸಂಚಲನದಲ್ಲಿ ಓವರ್ ಥಿಂಕಿಂಗ್ ಎಂಬ ಪದ ಬಾರಿ ಚಾಲ್ತಿಯಲ್ಲಿದೆ. ಇದಕ್ಕೇನು ವಯಸ್ಸಿನ ಪರಿಧಿ ಇರಲಿಕ್ಕಿಲ್ಲ, ಆದರೆ ಚಿಂತೆ ಮಾಡುತ್ತಿದ್ದೇವೆಂದು ಅರಿವಾಗಲು ಸ್ವಲ್ಪ ಪ್ರೌಡತ್ವ ಬೇಕಾಗಬಹುದು. ಹೀಗಾಗಿಯೂ ಹದಿಹರೆಯದ ಯುವಕ ಯುವತಿಯರು ಈ ಓವರ್ ಥಿಂಕಿಂಗ್ ಗೀಳಿಗೆ ಒಗ್ಗಿಹೋಗಿದ್ದಾರೆ.

ಹಾಗಿದ್ರೆ ಏನಿದು ಈ ಓವರ್ ಥಿಂಕಿಂಗ್?. ಆಲೋಚನೆಗಳನ್ನು ಮಾಡೋದು ಒಳ್ಳೇದೇ ಅಲ್ವಾ? ಯೋಚನೆ, ಆಲೋಚನೆಗಳೆರಡೂ ಒಳ್ಳೆಯದೇ ಆದರೆ ಮನಸ್ಸಿಗೆ ಖಿನ್ನವಾಗುವ ಅಥವಾ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಯೋಚನೆಗಳನ್ನು ಪುನರಾವರ್ತಿಸಿ ಯೋಚಿಸುವುದು ‘ಓವರ್ ಥಿಂಕಿಂಗ್’ ಎನಿಸುಕೊಳ್ಳುತ್ತದೆ ಹಾಗೂ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಾಸ್ತವದಲ್ಲಿ ಅಂತಹ ಸನ್ನಿವೇಶಗಳು ಸಂಭವಿಸುವ ಸಾಧ್ಯತೆಗಳು ಬಹಳಷ್ಟು ಕಡಿಮೆಯಿದ್ದರೂ ಹೀಗಾಗಬಹುದು, ಹಾಗಾಗ ಬಹುದು, ಹೀಗಾದರೆ ಏನು ಮಾಡುವುದು? ಅಯ್ಯೋ! ಕಂಡಿತಾ ಹೀಗೆ ಆಗುತ್ತದೆ, ಎಂಬೆಲ್ಲ ಪ್ರಶ್ನೆಗಳನ್ನು ನಮಗೆ ನಾವೇ ಹೇರಿಕೊಂಡು ಪರಿಹಾರಕ್ಕಾಗಿ ಅತಿ ಚಿಂತನೆ ಮಾಡುತ್ತ ಅಮೂಲ್ಯ ವಾದ ಸಮಯವನ್ನು ವ್ಯರ್ಥಮಾಡುತ್ತೇವೆ.

ಕಳೆದ ವರ್ಷ ಕೊರೋನ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ತಮಿಳುನಾಡಿನ ವ್ಯಕ್ತಿಯೊಬ್ಬರು ಕೊರೋನ ಪಾಸಿಟಿವ್ ರಿಪೋರ್ಟ್ ಬರುವ ಮುನ್ನವೇ ತನಗಿದ್ದ ಗುಣಲಕ್ಷಣಗಳನ್ನು ಆಧರಿಸಿ ತನಗೆ ಸೋಂಕು ತಗುಲಿದೆ ಎಂದು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ನಮಗೆಲ್ಲ ತಿಳಿದಿದೆ. ಈ ವಿಷಯದಲ್ಲಿ ಅತಿ ಆಲೋಚನೆಯ ಪಾತ್ರವನ್ನು ನಾವು ಕಡೆಗಣಿಸುವಂತಿಲ್ಲ. ಸಾಮಾನ್ಯ ಸಂಗತಿಗಳನ್ನು ಅತಿಯಾಗಿ ಚಿಂತಿಸುವ ಪರಿಮಾಣ ಸ್ವಲ್ಪಮಟ್ಟಿಗಿದ್ದರೆ ಸಮಸ್ಯೆ ಇಲ್ಲ. ಆದರೆ ಈ ಅಭ್ಯಾಸ ಪ್ರತಿ ವಿಷಯದಲ್ಲೂ ಗೀಳಾಗಿ ಬಿಟ್ಟರೆ ನಕಾರಾತ್ಮಕ ಚಿಂತನೆಗಳಿಗೆ ಅಡಿಪಾಯವಾಗಿ ಖಿನ್ನತೆಗೆ ಕಾರಣವಾಗಿ ಬಿಡುತ್ತವೆ. ಆದರೆ ಅತಿ ಆಲೋಚನೆ ಮಾಡುತ್ತಿರುವ ಪ್ರತಿ ವ್ಯಕ್ತಿಯೂ ತಾವು ಅತಿ ಆಲೋಚನೆ ಮಾಡುತ್ತಿಲ್ಲ, ಸಾಧ್ಯವಾಗಬಹುದಾದ ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳುತ್ತಿದ್ದೇವೆ ಎನ್ನುವ ಅಭಿಪ್ರಾಯ ಹಾಗೂ ನಂಬಿಕೆಯಲ್ಲೇ ಇರುತ್ತಾರೆ. ಆದರೆ ಅಷ್ಟೊಂದು ಆಲೋಚಿಸುವ ಅಗತ್ಯತೆ ಉಂಟೇ ಎಂಬುದೇ ಪ್ರಶ್ನೆ. ಎದುರಾಗದೆ ಇರುವ ಸನ್ನಿವೇಶಗಳನ್ನು ಕಲ್ಪಿಸಿಕೊಂಡು ಪರಿಹಾರ ಹುಡುಕುವ ಗೋಜೇಕೆ?

ಗೊತ್ತಿಲ್ಲದಂತೆ ಬೆನ್ನೆತ್ತುವ ಓವರ್ ಥಿಂಕಿಂಗ್ ಎಂಬ ಬೇತಾಳದಿಂದ ಪಾರಾಗುವುದು ಸುಲಭವಲ್ಲದಿದ್ದರೂ ಸಾಧ್ಯ. ಗೆಳೆಯರೊಂದಿಗೆ ಆಪ್ತರೊಂದಿಗೆ ಬಾಧಿಸುತ್ತಿರುವ ವಿಚಾರಗಳನ್ನು ಹಂಚಿಕೊಂಡು ಹಾಗೆಯೇ ಯೋಗ ಧ್ಯಾನಗಳನ್ನು ನಮ್ಮ ದಿನಚರಿಯಲ್ಲಿ ಅಳವಡಿಸಿ ಕೊಂಡು ಅನಗತ್ಯ ಆಲೋಚನೆಗಳಿಗೆ ಆಸ್ಪದ ಕೊಡದೆ ನಕಾರಾತ್ಮಕ ಚಿಂತನೆಗಳಿಗೆ ಕಡಿವಾಣ ಹಾಕಿ ಮನಸ್ಸಿನ ಸ್ವಾಸ್ಥ್ಯ ಕಾಪಾಡಿ ಕೊಳ್ಳೋಣ. ಮನಸ್ಸೆಂಬ ಈ ಮರ್ಕಟಕ್ಕೆ ಎಲ್ಲವನ್ನು ಕಲ್ಪಿಸಿಕೊಳ್ಳುವ ಹಾಗೂ ಯೋಚಿಸುವ ಅಘಾದ ಶಕ್ತಿ ಇದೆ. ಈ ಶಕ್ತಿಯನ್ನು ನಮ್ಮ ಸರ್ವತೋಮುಖ ಅಭಿವೃದ್ಧಿ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಬಳಸಿಕೊಳ್ಳೋಣ.

ನೈದಿಲೆ ಶೇಷೆಗೌಡ
ಎಸ್.ಡಿ.ಎಂ. ಕಾಲೇಜು, ಉಜಿರೆ

Prev Post

ಕಾಗೆ, ಕೋಗಿಲೆಯ ಇನಿ ದನಿಯ ಸಂವಾದ | ಶಿಲ್ಪ. ಬಿ

Next Post

ಪರಿಸರದ ಕತೆಯ ‘ಮಾರ’ನ ಹುಡುಕಿ ಅಜ್ಜಿಯ ಪಯಣ | ಶಿಲ್ಪ. ಬಿ

post-bars

Leave a Comment

Related post