Back To Top

 ಸುಡು ಸೂರ್ಯನನ್ನು ಎದುರಿಸಲು ಸರಳ ಸೂತ್ರ | ದರ್ಶಿನಿ ತಿಪ್ಪಾರೆಡ್ಡಿ

ಸುಡು ಸೂರ್ಯನನ್ನು ಎದುರಿಸಲು ಸರಳ ಸೂತ್ರ | ದರ್ಶಿನಿ ತಿಪ್ಪಾರೆಡ್ಡಿ

ಬೇಸಿಗೆ ಬಹುತೇಕರಿಗೆ ರಾಜಾ ದಿನಗಳ ಮಜಾ ಮಾಡುವ ಸಮಯ, ಮಕ್ಕಳನ್ನು ಆಚೆ ಸುತ್ತಾಡಿಸೋದು, ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡೋದು ಸಾಮಾನ್ಯ. ಸರಾಸರಿ 38°-4೦° ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿರುವ ಈ ಬೇಸಿಗೆಯ ಸಮಯದಲ್ಲಿ ಬೆಳಗ್ಗೆ 10 ಗಂಟೆಗಳಿಂದ ಸಂಜೆ 4 ಗಂಟೆಗಳ ಒಳಗೆ ಓಡಾಡುವುದು ಒಳಿತು. ಬಿಸಿಲಿಗೆ ಹೋಗುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂಬುದು ತಜ್ಞರ ಅಭಿಪ್ರಾಯ.

ಅಗತ್ಯವಾಗಿ ಕೆಲವು ಕ್ರಮಗಳನ್ನು ಅನುಸರಿಸದೆ ಹೋದಲ್ಲಿ ಅಕಾಲಿಕವಾಗಿ ಚರ್ಮ ಸುಕ್ಕು ಗಟ್ಟುವುದು, ತುರಿಕೆ ಮತ್ತು ಕಡಿತ, ಚರ್ಮದ ಕ್ಯಾನ್ಸರ್, ಟ್ಯಾನ್‌ನಿಂದ ಚರ್ಮದ ಬಣ್ಣ ಬದಲಾಗುವಂತ ಇನ್ನೂ ಹಲವಾರು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

ಸುಡುಬಿಸಿಲಿಗೆ ಕಾಲಿಡುವ ಮುನ್ನ ಅನುಸರಿಬೇಕಾದ ಕೆಲವು ಸರಳ ಕ್ರಮಗಳು ಇಲ್ಲಿವೆ;
ಹೆಚ್ಚು-ಹೆಚ್ಚು ನೀರನ್ನು ಕುಡಿಯಿರಿ:
ತಾಪಮಾನ ಅತೀ ಹೆಚ್ಚಾಗಿರುವ ಕಾರಣ ದೇಹಕ್ಕೆ ನೀರಿನ ಅಗತ್ಯತೆ ಅಧಿಕವಾಗಿರುತ್ತದೆ. ನಿರ್ಜಲೀಕರಣವನ್ನು ತಡೆಗಟ್ಟಲು, ದೇಹದ ಉಷ್ಣತೆಯನ್ನು ನಿಯಂತ್ರಿಸಲು, ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು, ಜೀರ್ಣಕ್ರಿಯೆಗೆ ಸಹಾಯ ಮಾಡಲು ಮತ್ತು ಮೂತ್ರಪಿಂಡದ ಕಲ್ಲುಗಳನ್ನು ತಡೆಯಲು ನಾವು ಹೆಚ್ಚು ನೀರು ಕುಡಿಯಬೇಕು. ದಿನಕ್ಕೆ 3-4 ಲೀಟರ್ ಗಳಷ್ಟು ನೀರು ಕುಡಿಯುವುದು ಈ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಸನ್ ಸ್ಕ್ರೀನ್ ತಪ್ಪದೇ ಬಳಸಿ:
ಸೂರ್ಯನ ಹಾನಿಕಾರಕ ಕಿರಣಗಳಿಂದ ನಮ್ಮ ಚರ್ಮವನ್ನು ರಕ್ಷಿಸಲು ಇದೊಂದು ಉತ್ತಮ ಅಂಶ. ನೇರಳಾತೀತ (UV) ಕಿರಣಗಳ ಹಾನಿಕಾರಕ ಪರಿಣಾಮಗಳಿಂದ ನಮ್ಮ ಚರ್ಮವನ್ನು ರಕ್ಷಿಸಲು ಸನ್ಸ್ಕ್ರೀನ್ ಸಹಾಯ ಮಾಡುತ್ತದೆ. 30 ಕಿಂತ ಹೆಚ್ಚಿನ SPF ಇರುವ ಸನ್ಸ್ಕ್ರೀನ್ ಚರ್ಮಕ್ಕೆ ಉತ್ತಮ ರಕ್ಷಣೆಯನ್ನ ಒದಗಿಸುತ್ತದೆ, ಕೇವಲ ಬಿಸಿಲಿಗೆ ಅಷ್ಟೇ ಅಲ್ಲದೆ ವರ್ಷದ 365 ದಿನಗಳು ಸನ್ಸ್ಕ್ರೀನ್ ಬಳಸುವುದು ಉತ್ತಮ. ಇದು ಹೀಗಾಗಲೇ ಸೂರ್ಯನ ಕಿರಣಗಳಿಂದಾದ ಚರ್ಮದ ಹಾನಿಯನ್ನು ಸರಿ ಪಡಿಸುತ್ತದೆ. ಎಲ್ಲ ರೀತಿಯ ಚರ್ಮಕ್ಕೂ ಸರಿ ಹೊಂದುವ ವಾಟರ್ ಪ್ರೂಫ್ ಸನ್ಸ್ಕ್ರೀನ್‌ನ ಬಳಕೆ ಉತ್ತಮ.

ಕೊಡೆಯನ್ನು ಮರೆಯದೆ ಒಯ್ಯಿರಿ:
ಅತಿಯಾದ ಬಿಸಿಲಿನಿಂದ ಕೇವಲ ಮುಖವಲ್ಲದೆ ದೇಹದ ಇತರೆ ಭಾಗಗಳು ಸನ್ ಟ್ಯಾನ್ ಮತ್ತು ಸನ್ ಬರ್ನ್ ಸಮಸ್ಯಗೆ ಗುರಿಯಾಗುತ್ತವೆ. ಆದಕಾರಣ ಬಿಸಿಲಿಗೆ ಹೆಜ್ಜೆ ಇಡುವಮುನ್ನ ತಪ್ಪದೇ ಕೊಡೆಯನ್ನು ತೆಗೆದುಕೊಂಡು ಹೋಗಿ. ಇದರಿಂದ ಕೂದಲಿಗೂ ನೇರವಾಗಿ ಸೂರ್ಯನ ಕಿರಣಗಳು ಉಂಟುಮಾಡುವ ಹಾನಿಯನ್ನು ತಡೆಯಬಹುದು. ವಿಕಿರಣದ ರೋಪದಲ್ಲಿ ನಮ್ಮನ್ನು ಸೋಕುವ ಶಾಖದಿಂದಲೂ ರಕ್ಷಣೆ ಪಡೆಯಬಹುದಾಗಿದೆ.

ಅಗತ್ಯವಾಗಿ ಸಮ್‌ಗ್ಲಾಸ್ ಧರಿಸಿ:
ಕಣ್ಣುಗಳು ಮತ್ತು ಅವುಗಳ ಸುತ್ತಲಿನ ಸೂಕ್ಷ್ಮ ಚರ್ಮವನ್ನು ಸೂರ್ಯನ ಹಾನಿಕಾರಕ UV ಕಿರಣಗಳಿಂದ ರಕ್ಷಿಸುವುದು ಅತ್ಯಗತ್ಯ. ಸನ್ ಗ್ಲಾಸ್ ಧರಿಸುವುದರಿಂದ ಇದು ಕಣ್ಣಿಗೆ ಶೀಲ್ಡ್ ನಂತೆ ಕಾರ್ಯನಿರ್ವಹಿಸುತ್ತದೆ. ಸನ್ ಗ್ಲಾಸ್ ಗಾಳಿಗೆ ಸ್ವಲ್ಪ ಹೆಚ್ಚು ಪಾವತಿಸುವುದು ಅನಗತ್ಯವೆಂದು ತೋರುತ್ತದೆ, ಆದರೆ ವಾಸ್ತವದಲ್ಲಿ ನಿಮ್ಮ ಚರ್ಮಕ್ಕೆ ನಿಜವಾದ ಪ್ರಯೋಜನವನ್ನು ನೀಡುತ್ತದೆ. ಕಣ್ಣುಗಳ ಸುತ್ತಲಿನ ಚರ್ಮವನ್ನು ರಕ್ಷಿಸಲು ದೊಡ್ಡ ಗಾತ್ರದ ಚೌಕಟ್ಟುಗಳನ್ನು ಹೊಂದಿರುವ ಸನ್‌ಗ್ಲಾಸ್ ಉತ್ತಮವಾಗಿರುತ್ತದೆ.

ಉಡುಪಿನ ಬಗ್ಗೆ ಗಮನಹರಿಸಿ:
ಬೇಸಿಗೆಯ ಧಗೆ ಅಧಿಕವಾಗಿರುವ ಈ ಸಮಯದಲ್ಲಿ ಧರಿಸುವ ಉಡುಪಿನ ಬಗ್ಗೆ ಗಮನಹರಿಸಬೇಕು. ಕಪ್ಪು, ಕಡುನೀಲಿಯಂತಹ ಗಾಢವಾದ ಬಣ್ಣಗಳಿಗಿಂತ ಹಗುರವಾದ ಬಿಳಿಯ ಬಣ್ಣದ ಬಟ್ಟೆಗಳಿಗೆ ಹೆಚ್ಚಿನ ಆಧ್ಯತೆ ನೀಡಿ. ಉದ್ದನೆಯ ತೋಳಿನ ಶರ್ಟ್‌ಗಳು, ಉದ್ದವಾದ ಪ್ಯಾಂಟ್‌ಗಳು ಯುವಿ ಕಿರಣಗಳಿಂದ ನಿಮ್ಮನ್ನು ರಕ್ಷಿಸುತ್ತವೆ. ತೆಳುವಾದ ಕಾಟನ್ ದಿರಿಸುಗಳು ನಿಮ್ಮ ಆಧ್ಯತೆಯಾಗಿರಲಿ.

ತ್ವಚೆಯ ಆರೈಕೆ ಮಾಡಿ:
ಚರ್ಮವನ್ನು ಒಳಗಿನಿಂದ ತೇವಾಂಶವಾಗಿರಿಸಲು ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ತೇವಾಂಶವನ್ನು ಲಾಕ್ ಮಾಡಲು ಮತ್ತು ನಿರ್ಜಲೀಕರಣವನ್ನು ತಡೆಯಲು ಚರ್ಮವನ್ನು ಹೈಡ್ರೆಟ್ ಮಾಡುವ ಅಲೋವೆರಾ, ಸೌತೇಕಾಯಿ ಮತ್ತು ಟೊಮೇಟೊ ತಿರುಳನ್ನು ಪ್ಯಾಕ್‌ಗಳು ರೀತಿ ಬಳಸಬೇಕು.ಇವು ಚರ್ಮವನ್ನು ತೇವಗೊಳಿಸುವುದರೊಂದಿಗೆ ಆರೋಗ್ಯಕರ ಹೊಳಪನ್ನು ನೀಡುತ್ತವೆ. ಸನ್ ಬರ್ನ್ ಗಳನ್ನು ಶಮನಗೊಳಿಸಲು ಸಹ ಸಹಾಯಕವಾಗಿವೆ.

ತಾಜಾ ಹಣ್ಣು ಮತ್ತು ತರಕಾರಿಗಳನ್ನ ಸೇವಿಸಿ:
ಹೊರಗಿನ ಶಾಖವನ್ನು ಪ್ರತಿರೋಧಿಸುವ ಸಲುವಾಗಿ ಕೆಮಿಕಲ್ ಮಿಶ್ರಿತ ಹಾನಿಕಾರಕ ತಪ್ಪು ಪಾನಿಯಗಳ ಸೇವನೆಯನ್ನು ನಿಲ್ಲಿಸಬೇಕು. ಬದಲಿಗೆ ವಿಟಮಿನ್ C ನಂತಹ ದೇಹಕ್ಕೆ ಅಗತ್ಯವಾದ ಪೌಷ್ಠಿಕಾಂಶಗಳನ್ನ ಒದಗಿಸುವ ಕಿತ್ತಳೆ, ಪೇರಳೆ, ಪಪ್ಪಾಯ, ಕೀವಿ ಹಣ್ಣುಗಳು ಮತ್ತು ಟೊಮೇಟೊ, ಸೋಯಾದಂತಹ ಆಹಾರ ಪದಾರ್ಥಗಳನ್ನ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಬೇಕು. ಹೆಚ್ಚಿನ ನೀರಿನಂಶ ಹೊಂದಿರುವ ಕಲ್ಲಂಗಡಿ ಹಣ್ಣಿನ ಸೇವನೆಯು ಒಳ್ಳೆಯದು.

ಈ ರೀತಿಯ ಹಲವು ಸರಳ ಅಂಶಗಳನ್ನು ಅಳವಡಿಸಿಕೊಳ್ಳುವುದರಿಂದ ಬೇಸಿಗೆಯ ಸಮಯದಲ್ಲಿ ಸೂರ್ಯನ ಹಾನಿಕಾರಕ ಕಿರನಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳಬಹುದು ಮತ್ತು ಉಷ್ಣಾಂಶವನ್ನು ನಿಯಂತ್ರಣದಲ್ಲಿರಿಸಿ ದೇಹದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳ ಬಹುದು.

ದರ್ಶಿನಿ ತಿಪ್ಪಾರೆಡ್ಡಿ
ಎಸ್. ಡಿ. ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ

Prev Post

ಸಂವಿಧಾನಕ್ಕೂ ಒಂದು ಐತಿಹ್ಯ ಇದೆ | ಸಂತೋಷ್ ಇರಕಸಂದ್ರ

Next Post

ಶುರುವಿನಲ್ಲೇ ಪ್ರೇಮಾಂತ್ಯ | ಆನಂದ ಕುಮಾರ್

post-bars

Leave a Comment

Related post