Back To Top

 ಸ್ಮಾರ್ಟ್‌ಫೋನ್‌ನಿಂದ ಸ್ಮಾರ್ಟ್‌ನೆಸ್‌ ಕಳೆದುಕೊಳ್ಳದಿರೋಣ | ಯೋಗೀಶ್‌ ಬಿ

ಸ್ಮಾರ್ಟ್‌ಫೋನ್‌ನಿಂದ ಸ್ಮಾರ್ಟ್‌ನೆಸ್‌ ಕಳೆದುಕೊಳ್ಳದಿರೋಣ | ಯೋಗೀಶ್‌ ಬಿ

ಭಾರತ ದೇಶವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಎಲ್ಲವೂ ಡಿಜಿಟಲ್‌ ಆಗಿ ಪರಿವರ್ತನೆಯಾಗುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರೂ ಇಂಟರ್ನೆಟ್‌ನ ಫಲಾನಿಭವಿಗಳೇ! ಯುವ ಸಮುದಾಯವಂತೂ ಡಿಜಿಟಲ್‌ ಜಗತ್ತಿನಲ್ಲೇ ಮುಳುಗಿದೆ. ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಇಲ್ಲದಿದ್ದರೆ, ಅವರಿಗೆ ಏನು ಮಾಡುವುದು ಎಂದೂ ತೋಚದು. ಆದರೆ ಅದು ಕಾಲನಿರ್ಣಯ. ಈಗಿನ ಕಾಲವೇ ಇಂಟರ್ನೆಟ್‌ಮಯ. ಆದ್ದರಿಂದ ಅದು ಅನಿವಾರ್ಯ.

ಕೆಲವೇ ವರ್ಷಗಳ ಹಿಂದಿನ ಮಾತು. ತಾಯಿ ಲಾಲಿ ಹಾಡಿ, ಚಂದಮಾಮನನ್ನು ತೋರಿಸಿ, ಮಗುವನ್ನು ಮಲಗಿಸುತ್ತಿದ್ದಳು. ಊಟ ಮಾಡಲ್ಲ ಎಂದು ಮಗು ಹಠಮಾಡಿದರೆ, ʻಈಗ ಊಟ ಮಾಡದೇ ಇದ್ದರೆ ಗುಮ್ಮ ಬರುತ್ತದೆ’ ಎಂದು ಹೇಳಿ ಅಥವಾ ಮನೆಯಲ್ಲಿ ಯಾರಾದರೊಬ್ಬರು ಬಟ್ಟೆಯಿಂದ ಮುಖ ಮುಚ್ಚಿ ಮಗುವನ್ನು ಹೆದರಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮಗು ಊಟ ಮಾಡದೇ ಇದ್ದರೆ, ಮಗುವಿನ ಕೈಗೆ ಮೊಬೈಲ್ ಕೊಟ್ಟು ಊಟ ಮಾಡಿಸುತ್ತಾರೆ.
ಮಗು ಅತ್ತರೂ, ಕೀಟಲೆ ಮಾಡಿದರೂ ಸಾಕು, ಕೈಗೆ ಮೊಬೈಲ್ ಕೊಟ್ಟರೆ ಸಾಕು ಮಗು ಸುಮ್ಮನಾಗಿ ಬಿಡುತ್ತದೆ. ನಮಗೆ ಕಲಿಯಲು ಆಗದ್ದನ್ನೂ ಚಿಕ್ಕ ಮಗು ಬೇಗ ಕಲಿಯುತ್ತದೆ.!

ಮಹಾಮಾರಿ ಕೊರೋನಾ ಬಂದಮೇಲಂತೂ, ಸ್ಮಾರ್ಟ್ ಫೋನ್ ಇಲ್ಲದ ಮನೆಗಳೇ ಕಡಿಮೆಯಾಗಿವೆ. ಆನ್ಲೈನ್ ಕ್ಲಾಸ್ ಅನ್ನೋ ಕಾರಣಕ್ಕೆ ಪುಟ್ಟಮಕ್ಕಳ ಕೈಗೆ ಅನಿವಾರ್ಯವಾಗಿ ಮೊಬೈಲ್‌ ಕೊಡುವ ಹಾಗಾಗಿದೆ. ಮನೆಯಲ್ಲಿ ಮೊಬೈಲ್ ಕೊಡಿಸಲಿಲ್ಲ ಎಂದು ಅದೆಷ್ಟು ಕಡೆಗಳಲ್ಲಿ ಸಾವು-ನೋವು ಆಗಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ, ಬಿಡಿ.

ಇನ್ನು ಅನೇಕ ಜನರಿಗೆ ಮೊಬೈಲ್‌ ನೋಡದೇ ದಿನಬೆಳಗಾಗುವುದೇ ಇಲ್ಲ. ಮುಂಜಾನೆ ಮೊದಲು ಕಣ್ಣು ತೆರೆದು ಮೊಬೈಲ್‌ ಸ್ಕ್ರೀನ್‌ ನೋಡೋರು, ರಾತ್ರಿ ಮಲಗೋದೂ ಮೊಬೈಲ್‌ ನೋಡಿಯೇ. ಬೆಳಿಗ್ಗೆ ಎಚ್ಚರಿಸುವುದು ಮೊಬೈಲಿನ ಅಲರಾಮು, ಮೊಬೈಲ್‌ ಡೇಟಾ ಖಾಲಿಯಾದ ಬಳಿಕವೇ ಅವರು ಮಲಗುವುದು. ಶಾಲೆ – ಕಾಲೇಜು ಹೋಗೋ ಮಕ್ಕಳು ಬಿಡುವಿದ್ದಾಗ ಲಗೋರಿ, ಖೋಖೋ ಇತ್ಯಾದಿ ಆಟಗಳನ್ನು ಆಡೋದು ಇನ್ಮುಂದೆ ಕಾಣಲಿಕ್ಕೂ ಸಿಗಲಿಕ್ಕಿಲ್ಲ. ಆದರೆ ಅಲ್ಲಲ್ಲಿ ಒಬ್ಬೊಬ್ಬರೇ ಕೂತು ಮೊಬೈಲ್‌ಗೇಮ್‌ಗಳನ್ನು ಆಡೋರು ಕಾಣಸಿಗುತ್ತಾರೆ, ನೀವು ನೋಡಿಯೂ ಇರುತ್ತೀರಿ. ಇನ್ನೂ ಕೆಲವು ಲವ್‌ ಬರ್ಡ್ಸ್‌ಗಳ ಪ್ರೀತಿ ಹುಟ್ಟೋದೂ ಮೊಬೈಲ್‌ನಲ್ಲಿ, ಅದು ಸಾಯೋದೂ ಅಲ್ಲೇ! ಇವರಿಗೆ ಮೂರು ಹೊತ್ತು ಊಟ ಇಲ್ಲದೆ ಇದ್ದರೂ ಆಗುತ್ತದೆ, ಆದರೆ ಮೊಬೈಲ್ ಬಿಟ್ಟು ಇರಲು ಆಗುವುದಿಲ್ಲ. ಯುವಕರನ್ನು ನೋಡಿ ಶಾಲೆಗೆ ಹೋಗೋ ಮಕ್ಕಳೂ ಅದನ್ನೇ ಪಾಲಿಸುತ್ತಿದ್ದಾರೆ. ಈಗೀಗ ಮನೆಯವರೊಂದಿಗೆ ಕಳೆಯುವ ಸಮಯವೂ ಕಡಿಮೆ ಆಗುತ್ತಿದೆ. ಮನೆಯವರ ಬಳಿ ಮಾತನಾಡಲು ಕೂಡ ಸಮಯವಿಲ್ಲ, ಅಷ್ಟೂ ಮೊಬೈಲ್‌ ಗೀಳು.

ಸ್ಮಾರ್ಟ್‌ಫೋನ್‌ ಅನ್ನು ಸಂಪೂರ್ಣವಾಗಿ ಬ್ಯಾನ್‌ ಮಾಡಲಂತೂ ಆಗುವುದಿಲ್ಲ. ಆದರೆ ಬಳಕೆ, ಉಪಯೋಗ ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ, ವಿದ್ಯಾರ್ಥಿಗಳನ್ನು ಮೊಬೈಲ್‌ ನಿಂದ ಸ್ವಲ್ಪ ದೂರವಿಡಬೇಕು ಅನ್ನೋ ಉದ್ದೇಶದಿಂದ ಕರ್ನಾಟಕ ಸರ್ಕಾರವು 12ನೇ ತರಗತಿವರೆಗಿನ ಮಕ್ಕಳಿಗೆ ತಮ್ಮ ಶಾಲೆ-ಕಾಲೇಜಿನಲ್ಲಿ ಮೊಬೈಲ್‌ ಬಳೆಕೆಯನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ. ಮೊಬೈಲ್‌ ಬಳಕೆಯಿಂದ ತರಗತಿ ಹಾಗೂ ಇನ್ನಿತರ ಶೈಕ್ಷಣಿಕ ಚಟುವಟಿಕೆಗಳಿಗೆ ಆಗುವ ಸಮಸ್ಯೆಯನ್ನು ತಪ್ಪಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ತರಗತಿ ಸಮಯದಲ್ಲಿ ಶಿಕ್ಷಕರೂ ಮೊಬೈಲ್‌ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ, ಇದನ್ನು ನೋಡಿಕೊಳ್ಳಲು ಕಾಲೇಜಿನಲ್ಲಿಯೇ ಆಂತರಿಕವಾಗಿ ಒಂದು ತಂಡ ರಚಿಸಲಾಗುವುದು ಎಂದು ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ. ಇದರಲ್ಲಿ ಒಳಿತು – ಕೆಡಕು, ಎರಡೂ ಇದೆ.

ಉಪಯೋಗವೆಂದರೆ,
•ಮೊಬೈಲ್‌ ಬಳಕೆ ಇಲ್ಲದೆ ವಿದ್ಯಾರ್ಥಿಗಳು ಪುಸ್ತಕವನ್ನು ಓದುವ ಆಸಕ್ತಿಯನ್ನು ಬೆಳೆಸಬಹುದು.
•ಯುವಕರಲ್ಲಿ ಹೊಸ ಆಲೋಚನೆಗಳು, ಸೃಜನಾತ್ಮಕ ಚಿಂತನೆಗಳು ಮೂಡಬಹುದು.
•ಇತರರ ಜೊತೆಗೆ ಬೆರೆಯುವುದು ಹೆಚ್ಚಾಗುತ್ತದೆ.
•ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ತೊಡಗಿಕೊಳ್ಳಬಹುದು

ಆದರೆ ಎಲ್ಲವೂ ಸ್ಮಾರ್ಟ್‌ ಆಗುತ್ತಿರುವ ಈ ದಿನಗಳಲ್ಲಿ ವಿದ್ಯಾರ್ಥಿಗಳನ್ನು ತಡೆಯುವುದು ತಪ್ಪು. ಹೀಗಾಗಿ ಸರ್ಕಾರ, ಸ್ಮಾರ್ಟ್‌ಫೋನ್‌ಗಳ ಬಳಕೆಗೆ ನಿಷೇಧ ಹೇರಿದರೂ, ಅದಕ್ಕೆ ಪರ್ಯಾಯವಾಗಿ, ಶಾಲೆ ಕಾಲೇಜುಗಳಲ್ಲಿ ಡಿಜಿಟಲ್ ತರಗತಿ ಗಳನ್ನು ಪ್ರಾರಂಭಿಸಲು ಯೋಚಿಸಬೇಕು. ಶಿಕ್ಷಕರು ಸ್ಮಾರ್ಟ್ ಬೋರ್ಡ್ ಮತ್ತು ಕಂಪ್ಯೂಟರ್‌ಗಳನ್ನು ಬಳಸಿ ಹೆಚ್ಚಿನ ಪಾಠಗಳನ್ನು ಮಾಡಬೇಕು. ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಜಾಸ್ತಿ ಮಾಡಬೇಕು. ಆಗ ವಿದ್ಯಾರ್ಥಿಗಳು ಅದರಲ್ಲಿ ಬೆರೆಯುವ ಸಾಧ್ಯತೆ ಇದೆ. ಸಾಧ್ಯವಾದರೆ, ಸ್ಮಾರ್ಟ್‌ಫೋನ್‌ ಖರೀದಿಗೆ ಕನಿಷ್ಠ ವಯಸ್ಸನ್ನು ಸರ್ಕಾರ ನಿಗದಿಪಡಿಸಬೇಕು ಹಾಗೂ ಅದಕ್ಕಿಂತ ಸಣ್ಣ ವಯಸ್ಸಿನವರು ಮೊಬೈಲ್‌ ಬಳಸಿದರೆ ಅದಕ್ಕೆ ಶಿಕ್ಷೆ ನಿಗದಿಪಡಿಸಬೇಕು.

ಭಾರತ ಡಿಜಿಟಲ್ ಆಗಿ ಬದಲಾಗುತ್ತಿದೆ, ಹೌದು. ಆದರೆ ಅದು ಸರಿಯಾದ ರೀತಿಯಲ್ಲಿ, ಸರಿಯಾದ ದಾರಿಯಲ್ಲಿ ಆಗಬೇಕಿದೆ. ಆ ನಿಟ್ಟಿನಲ್ಲಿ ನಾವೂ ಕಾರ್ಯಪ್ರವೃತ್ತರಾಗೋಣ.

ಯೋಗೀಶ್‌ ಬಿ.
ಬಿ. ವೋಕ್‌ ವಿದ್ಯಾರ್ಥಿ (ಡಿಎಂಎಫ್)‌
ಎಸ್‌.ಡಿ.ಎಂ. ಕಾಲೇಜು, ಉಜಿರೆ

Prev Post

ಬಾಲ್ಯ ನೆನಪಿಸಿದ ಮಳೆ | ಅಕ್ಷಿತಾ ಡಿ.

Next Post

26ರ ವಿಜಯಕ್ಕೆ ಶ್ರಮಿಸಿದ ಯೋಧ ಸುಬೇದಾರ್ ಏಕನಾಥ ಶೆಟ್ಟಿ | ಗ್ಲೆನ್‌ ಗುಂಪಲಾಜೆ

post-bars

Leave a Comment

Related post