Back To Top

 ಇಂಡಿಯಾ ಕಂಡ ಇಂದಿರಾ | ದರ್ಶಿನಿ ತಿಪ್ಪಾರೆಡ್ಡಿ

ಇಂಡಿಯಾ ಕಂಡ ಇಂದಿರಾ | ದರ್ಶಿನಿ ತಿಪ್ಪಾರೆಡ್ಡಿ

ಬೃಹತ್ ಭಾರತ ರಾಷ್ಟ್ರದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ. ಉಕ್ಕಿನ ಮಹಿಳೆ ಅಂತಲೇ ಪ್ರಸಿದ್ದರು. ದೇಶಕ್ಕಾಗಿ, ದೇಶದ ಕಟ್ಟಕಡೆಯ ಬಡವ್ಯಕ್ತಿಗಾಗಿ ಸದಾ ಮಿಡಿದ ಮಾತೃ ಹೃದಯಿ. ವಿವಿಧ ವೈಯಕ್ತಿಕ, ರಾಜತಾಂತ್ರಿಕ ಮತ್ತು ರಾಜಕೀಯ ಹಿತಾಸಕ್ತಿಗಾಗಿ ಹೇರಿದ ತುರ್ತುಪರಿಸ್ಥಿತಿಗಳ ಕಾರಣಕ್ಕೆ ಸಾಕಷ್ಟು ವಿರೋಧವನ್ನು ಎದುರಿಸಿದರು. ಈ ವಿರೋಧ ಕೇವಲ ವಿರೋಧ ಪಕ್ಷಗಳಿಂದ ಆಗಿರಲಿಲ್ಲ, ಬದಲಾಗಿ ಪಕ್ಷದೊಳಗು ಸಾಕಷ್ಟು ಆಂತರಿಕ ಕಲಹಗಳಿಗೆ ಇಂದಿರಾರ ದಿಟ್ಟ ನಿಲುವುಗಳು ಕಾರಣವಾಗಿದ್ದವು. ಇದೇ ಕಾರಣಕ್ಕೆ ಅವರ ಸಂಪೂರ್ಣ ಆಡಳಿತವನ್ನೇ ಟೀಕೆ ಮಾಡಲಾಯಿತು.

ಖ್ಯಾತ ವ್ಯಕ್ತಿಯೊಬ್ಬರ ತಪ್ಪು ನಿರ್ಧಾರಗಳನ್ನು ಚರ್ಚಿಸುವುದು ಅಥವಾ ವಿಶ್ಲೇಷಣೆ, ವಿಮರ್ಶೆಗಳಿಗೆ ಒಳಪಡಿಸುವುದು ಅವರ ಚಾರಿತ್ರ್ಯವಧೆ ಮಾಡಿದಂತಲ್ಲ. ಅದೇ ರೀತಿಯಲ್ಲಿ ಅವರು ತೆಗೆದುಕೊಂಡ ದೃಢ ನಿರ್ಧಾರಗಳು ಮತ್ತು ದಿಟ್ಟ ನಿಲುವುಗಳನ್ನು ಪ್ರಶಂಸೆ ಮಾಡುವುದು ವ್ಯಕ್ತಿತ್ವವೊಂದನ್ನ ಅತಿಯಾಗಿ ಮೆರೆಸಿದಂತೆಯೂ ಅಲ್ಲ. ಭಾರತದಂತಹ ಅತೀ ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರವೊಂದರ ಮಹಿಳಾ ಪ್ರಧಾನಿಯಾಗಿ ಇಂದಿರಾ ಗಾಂಧಿ ತೆಗೆದುಕೊಂಡ ಪ್ರತೀ ನಿರ್ಧಾರಗಳು ಗಣನೀಯವಾದವು. ಸಾಕಷ್ಟು ಚಿಂತನೆಗಳು ದೇಶದ ಪ್ರಗತಿಯ ಮೇಲೂ ಪರಿಣಾಮ ಬೀರಿದವು.

1969 ಇಂದಿರಾ ಗಾಂಧಿಯವರು ಹದಿನಾಲ್ಕು ಪ್ರಮುಖ ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲು ಮುಂದಾದರು. ಬ್ಯಾಂಕುಗಳ ರಾಷ್ಟ್ರೀಕರಣದ ನಂತರ, ಭಾರತದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಶಾಖೆಗಳು ಠೇವಣಿಗಳಲ್ಲಿ ಅಂದಾಜು 800 ಪ್ರತಿಶತಕ್ಕೆ ಏರಿತು ಮತ್ತು ಮುಂಗಡಗಳು 11,000 ಪ್ರತಿಶತದಷ್ಟು ದೊಡ್ಡ ಜಿಗಿತವನ್ನು ಪಡೆದುಕೊಂಡವು. ರಾಷ್ಟ್ರೀಕರಣವು ಬ್ಯಾಂಕ್‌ಗಳ ಭೌಗೋಳಿಕ ವ್ಯಾಪ್ತಿಯಲ್ಲಿ ಗಮನಾರ್ಹ ಬೆಳವಣಿಗೆಗೆ ಕಾರಣವಾಯಿತು. ಬ್ಯಾಂಕ್ ಶಾಖೆಗಳ ಸಂಖ್ಯೆಯು 8,200 ರಿಂದ 62,000 ಕ್ಕೆ ಏರಿತು. ಇದರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಶಾಖೆಗಳು ತೆರೆಯಲ್ಪಟ್ಟವು. ರಾಷ್ಟ್ರೀಕರಣದ ಚಾಲನೆಯು ಮನೆಯ ಉಳಿತಾಯವನ್ನು ಹೆಚ್ಚಿಸಲು ಸಹಾಯ ಮಾಡಿತು.

ಇದು ಅನೌಪಚಾರಿಕ ವಲಯದಲ್ಲಿ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಲ್ಲಿ ಹಾಗೂ ಕೃಷಿಯಲ್ಲಿ ಗಣನೀಯ ಹೂಡಿಕೆಗಳನ್ನು ಒದಗಿಸಿತು. ಪ್ರಾದೇಶಿಕ ಅಭಿವೃದ್ಧಿಗೆ ಮತ್ತು ಭಾರತದ ಕೈಗಾರಿಕೆ, ಕೃಷಿ ನೆಲೆಯ ವಿಸ್ತರಣೆಗೆ ಗಮನಾರ್ಹವಾಗಿ ಕೊಡುಗೆ ನೀಡಿತು.

ಐರನ್‌ ಲೇಡಿಯವರು ತಮ್ಮ ತಂದೆ ಜವಾಹರಲಾಲ್ ನೆಹರು ಅವರಿಂದ ಈಗಾಗಲೇ ಪ್ರಾರಂಭಿಸಿದ ಕೃಷಿಗೆ ಒಳಹರಿವಿನ ಉತ್ಪಾದನೆಗೆ ಒತ್ತು ನೀಡಿದರು. ಅಧಿಕಾರಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಇಂದಿರಾ ಭಾರತವನ್ನು ಆಹಾರ ಧಾನ್ಯಗಳಲ್ಲಿ ಸ್ವಾವಲಂಬಿ ದೇಶವಾಗಿ ಪರಿವರ್ತಿಸುವ ಯಶಸ್ವಿ ಕಾರ್ಯಕ್ರಮಗಳನ್ನು ಪರಿಚಯಿಸಿ ಅಗಾಧವಾದ ಜನಪ್ರಿಯತೆಯನ್ನು ಗಳಿಸಿದರು. ಈ ಸಾಧನೆಯನ್ನು ಹಸಿರು ಕ್ರಾಂತಿ ಎಂದು ಕರೆಯಲಾಗುತ್ತದೆ.

ಭಾರತದಲ್ಲಿನ ಆಹಾರ ಸಮಸ್ಯೆಗಳನ್ನು ನಿಭಾಯಿಸಲು, ಆಮದು ಮಾಡಿದ ಧಾನ್ಯಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ರಾಷ್ಟ್ರದಿಂದ ದೇಶವನ್ನು ಪರಿವರ್ತಿಸಲು ಮತ್ತು ಆಹಾರ ಭದ್ರತೆಯ ಗುರಿಯನ್ನು ಸಾಧಿಸುವಲ್ಲಿ ಈ ಕ್ರಾಂತಿ ಯಶಸ್ವಿಯಾಯಿತು.

1971 ರಲ್ಲಿ ಪಶ್ಚಿಮ ಪಾಕಿಸ್ತಾನದಿಂದ ಪೂರ್ವವನ್ನು ಬೇರ್ಪಡಿಸುವ ಬಂಗಾಳಿ ಚಳುವಳಿಯ ಹಿಂದೆ ತನ್ನ ಬೆಂಬಲವನ್ನು ನೀಡಿದರು. ಪಾಕಿಸ್ತಾನ ಭಾರತದ ಮೇಲೆ ಯುದ್ಧ ಸಾರಿದ ಸಮಯದಲ್ಲಿ ಯುಎಸ್, ಸೌದಿ ಅರೇಬಿಯಾ, ಇಂಡೋನೇಷ್ಯಾ ಮತ್ತು ಇತರ ಹಲವು ಶಕ್ತಿಗಳು ಪಾಕಿಸ್ತಾನದ ಪರವಾಗಿ ನಿಂತಿದ್ದಾಗ ಕೇವಲ 13 ದಿನಗಳಲ್ಲಿ ಪಾಕಿಸ್ತಾನಿ ಪಡೆಗಳನ್ನ ಬಗ್ಗುಬಡಿದು ಶರಣಾಗತಿಯಾಗುವಂತೆ ಮಾಡಿದ್ದು ಇಂದಿರಾ ನೇತೃತ್ವ ಭಾರತೀಯ ಸೇನೆ. ಸುಮಾರು 3 ಶತಮಾನಗಳಲ್ಲಿ ಯಾವುದೇ ಭಾರತೀಯನು ಕಂಡಿಲ್ಲದ ಶ್ರೇಷ್ಠ ಯುದ್ಧ ವಿಜಯವದು.

ಮಹಾ ಯುದ್ಧಗಳ ಸಮಯದಲ್ಲೂ ಇಂತಹ ರೋಚಕ ದಿಗ್ವಿಜಯವನ್ನು ದೊಡ್ದ ದೊಡ್ದ ದೇಶಗಳೂ ಸಾಧಿಸಿರಲಿಲ್ಲ. ಪಾಕಿಸ್ತಾನದ ವಿರುದ್ಧ ಭಾರತದ ಈ ನಿರ್ಣಾಯಕ ವಿಜಯವು ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು. 1974ರ ಭಾರತದ ಪರಮಾಣು ಕಾರ್ಯಕ್ರಮವು ಭಾರತದ ಪರಮಾಣು ಸಾಮರ್ಥ್ಯಗಳ ಅನ್ವೇಷಣೆಗೆ ಸಾಕ್ಷಿಯಾಯಿತು. ಇಂದಿರಾ ನೇತೃತ್ವದಲ್ಲಿ ಭಾರತವು ತನ್ನ ಮೊದಲ ಪರಮಾಣು ಪರೀಕ್ಷೆಯನ್ನು ನಡೆಸಿತು. ಇದು ವಿಶ್ವಕ್ಕೆ ಭಾರತದ ರಕ್ಷಣಾ ಸಾಮರ್ಥ್ಯವನ್ನು ತೋರಿಸುತ್ತದೆ.

ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ತತ್ವವನ್ನು ಇಂದಿರಾ ಆಡಳಿತದಲ್ಲಿ ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾಯಿತು. ಇದರೊಟ್ಟಿಗೆ ಇಂದಿರಾ ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಕ್ರಮಗಳನ್ನು ಪ್ರತಿಪಾದಿಸಿದರು ಮತ್ತು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು. ಅವರ ನಾಯಕತ್ವವು ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಲು ದಾರಿ ಮಾಡಿಕೊಟ್ಟಿತು.

ಈ ರೀತಿಯ ಇನ್ನು ಸಾಕಷ್ಟು ದಿಟ್ಟ ನಿಲುವುಗಳನ್ನು ಇಂದಿರಾ ತಮ್ಮ ಆಡಳಿತಾವಧಿಯಲ್ಲಿ ತೆಗೆದುಕೊಳ್ಳುವ ಮೂಲಕ ದೇಶದ ಪ್ರಗತಿಯಮೇಲೆ ಪರಿಣಾಮ ಬೀರಿದ ಹಲವು ಪವಾಡ ಮತ್ತು ಕೆಲವು ಪ್ರಮಾದಗಳಿಗೆ ಪ್ರಸಿದ್ಧರಾಗಿದ್ದಾರೆ.

ದರ್ಶಿನಿ ತಿಪ್ಪಾರೆಡ್ಡಿ
ಎಸ್. ಡಿ. ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ

Prev Post

ಹಾಸ್ಟೆಲ್ ಅನ್ನೋದು ಸೆರೆಮನೆಯಲ್ಲ ಅದು ನೆನಪುಗಳ ಅರಮನೆ | ಸಂಜಯ್‌ ಚಿತ್ರದುರ್ಗ

Next Post

ಅವನು ಪುಸ್ತಕ ಕೊಟ್ಟ ಕಾರಣ ಹೇಳದೇ ಹೋದ | ರಂಜಿತ ಹೆಚ್. ಕೆ

post-bars

Leave a Comment

Related post