ಈ ಐತಿಹಾಸಿಕ ದೇವಾಲಯ ಎಲ್ಲಿಯದ್ದು ಎಂದು ಹೇಳ ಬಲ್ಲಿರೇ..! | ಭಾರತಿ ಹೆಚ್. ವಿ
ಹಚ್ಚಹಸುರಿನ ಮಲೆನಾಡ ತಪ್ಪಲಿನಲ್ಲಿ ಈ ಐತಿಹಾಸಿಕ ದೇವಾಲಯ ಇದೆ. ಚಿಕ್ಕಮಗಳೂರಿನ ಶೃಂಗೇರಿಯ ವಿದ್ಯಾಶಂಕರ ದೇವಸ್ಥಾನ ಅಥವಾ ದ್ವಾದಶ ರಾಶಿ ಮಂಟಪ ಎಂದೂ ಕರೆಯಲಾಗುತ್ತದೆ. 8ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಶೃಂಗೇರಿಯು ಪ್ರಪ್ರಥಮವಾದ್ದು. ನಂತರ ದೇಶ ಸಂಚಾರ ಕೈಗೊಂಡ ಶಂಕರರು ಬದರಿ, ಪುರಿ ಮತ್ತು ದ್ವಾರಕೆಯಲ್ಲಿ ಮಠಗಳನ್ನು ಸ್ಥಾಪಿಸಿದರು. ಶೃಂಗೇರಿಯ ತುಂಗಾ ನದಿ ತಟದಲ್ಲಿ ಈ ದೇವಾಲಯ ನೆಲೆನಿಂತಿದೆ.
ಈ ಮಠದ ಸ್ಥಳದಲ್ಲಿ 14ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹುಕ್ಕ-ಬುಕ್ಕರ ಗುರು ಮಹರ್ಷಿ ವಿದ್ಯಾರಣ್ಯರು ವಿದ್ಯಾಶಂಕರ ದೇವಸ್ಥಾನ ಕಟ್ಟಿಸಿದರು. ಈ ದೇವಾಲಯದಲ್ಲಿರುವ ಶಾಸನದ ಪ್ರಕಾರ ನಂತರ ಅನೇಕ ವಿಜಯನಗರದ ಅರಸರು ಇಲ್ಲಿಗೆ ಕಾಣಿಕೆಗಳನ್ನು ಕೊಟ್ಟಿದ್ದಾರೆ. ಈ ದೇವಾಲಯದಲ್ಲಿ ವಿಜಯನಗರದ ಕಾಲದ ಶಿಲ್ಪಕಲೆ ಮತ್ತು ಹೊಯ್ಸಳ ಶಿಲ್ಪಕಲೆಗಳ ಸಮಾಗಮವನ್ನು ಕಾಣಬಹುದು. ವಿದ್ಯಾಶಂಕರ ದೇವಾಲಯದಲ್ಲಿ ದ್ವಾದಶ ರಾಶಿಯ ಕಂಬವಿದ್ದು, ಸೂರ್ಯ ಪಥದ ಅನ್ವಯ ಅವುಗಳ ಮೇಲೆ ಬಿಸಿಲಿನ ಕಿರಣಗಳು ಬೀಳುತ್ತದೆ. ಇದು ಈ ದೇವಾಲಯದ ಇಂಜಿನಿಯರಿಂಗ್ ವಿಶೇಷ.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಎಂ.ಎ ವಿದ್ಯಾರ್ಥಿನಿ ಭಾರತಿ ಹೆಚ್. ವಿ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ದೃಶ್ಯಕಾವ್ಯ ಇಲ್ಲಿದೆ.