ಬಾಲ್ಯ ನೆನಪಿಸಿದ ಮಳೆ | ಅಕ್ಷಿತಾ ಡಿ.
ಬಿಡದೆ ಸುರಿಯುತ್ತಿರುವ ಈ ಜಿಟಿಜಿಟಿ ಮಳೆಯನ್ನು ಮನೆಯ ಕಿಟಕಿಯ ಹತ್ತಿರ ಕುಳಿತು ನೋಡುವಾಗಲಂತೂ ನನ್ನ ಬಾಲ್ಯವೇ ಕಣ್ಣ ಮುಂದೆ ಬರುತ್ತದೆ. ಇನ್ನೇನು ಮಳೆ ಜೋರಾಗ್ತಿದೆ ಅಂದಾಗ, ನಾಳೆ ಶಾಲೆಗೆ ರಜೆ ಇರಲಿ ದೇವರೆ ಅಂತ ಬೇಡುವುದು ಯಾವತ್ತು ನ್ಯೂಸ್ ನೋಡದವರೂ ರಜೆ ಇದೆಯಾ ಎಂದು ನೋಡುವುದಕ್ಕಾದರೂ ಟಿ.ವಿ ಮುಂದೆ ಕುಳಿತುಕೊಳ್ಳುವುದು, ರಜೆ ಎಂದಾಗ ಖುಷಿಯಿಂದ ಕುಣಿದಾಡುವುದು, ಆ ದಿನಗಳೇ ಚೆನ್ನಾಗಿದ್ದವು.
ವಿಪರ್ಯಾಸವೆಂದರೆ ರಜೆ ಕೊಟ್ಟ ದಿನವಂತೂ ಮಳೆಯೇ ಬರುತ್ತಿರಲಿಲ್ಲ. ಮಳೆಗಾಲದಲ್ಲಿ ಸಿಗೋ ರಜೆಯಲ್ಲಿ ಬೆಚ್ಚಗೆ ಏನಾದರೂ ತಿಂಡಿ ತಿನ್ನುತ್ತಾ ಟಿ. ವಿ ನೋಡೋಣವೆಂದರೆ ಆಚೆ ನೋಡಲು ಮಳೆಯಿಲ್ಲ, ಈಚೆ ಕರೆಂಟ್ ಇಲ್ಲ. ಹೀಗೆ ರಜೆಯು ಬೋರಿಂಗ್ ಆಗಿ ಬಿಡುತ್ತಿತ್ತು. ಹೊರಗೆ ಹೋಗಿ ಆಡೋಣವೆಂದರೆ ಸಾಕು, ಆಗ ಧೋ ಎಂದು ಜೋರಾಗಿ ಮಳೆ ಬರುತ್ತಿತ್ತು. ಆಗ ಅಮ್ಮ ಕಣ್ಣು ಕೆಂಪು ಮಾಡಿ ನೋಡುತ್ತಿದ್ದರು. ಆದರೂ ಮನೆಯವರ ಕಣ್ಣುತಪ್ಪಿಸಿ ಕದ್ದು ಮುಚ್ಚಿ ಹೋಗುವುದರಲ್ಲಿಯೂ ಮಜಾ ಇತ್ತು.
ಮಳೆಯಿಂದಾಗಿ ಕೆಸರು ತುಂಬಿದ್ದರೂ, ನಾವು ಆ ಮಣ್ಣಿನಲ್ಲೇ ಕುಂಟೆ-ಬಿಲ್ಲೆ, ಲಗೋರಿ, ಕಣ್ಣಮುಚ್ಚಾಲೆ, ಖೋ-ಖೋ, ಹೀಗೆ ಹಲವಾರು ಆಟಗಳನ್ನು ಆಡುತ್ತಿದ್ದೆವು. ಅದಲ್ಲದೇ, ಶಾಲೆಯಿಂದ ಮನೆ ಕಡೆಗೆ ನಡೆದುಕೊಂಡು ಬರುವಾಗ ರಸ್ತೆಬದಿಯ ಮರಗಳಲ್ಲಿರುತ್ತಿದ್ದ ಜೂಸೆಹಣ್ಣು, ಮಾವಿನಹಣ್ಣುಗಳನ್ನು ಕದ್ದು ತಿನ್ನುವುದರಲ್ಲಿ ಇರುವ ಖುಷಿ ಅನುಭವಿಸುವವರಿಗೇ ಗೊತ್ತು.
ಮಳೆ ಸುರಿಯುವಾಗ, ತಂಪಾದ ವಾತಾವರಣದಲ್ಲಿ ಆ ಚಳಿಗೆ ಬಿಸಿ ಬಿಸಿಯಾಗಿ ಏನನ್ನಾದರೂ ತಿನ್ನಬೇಕೆಂದು ಅನಿಸುವುದು ಸಹಜ. ಅದಕ್ಕೆಂದೇ ಇನ್ನೇನು ಮಳೆಗಾಲ ಶುರು ಅನ್ನುವಷ್ಟರಲ್ಲಿ ಮನೆಯಲ್ಲಿ, ಮಳೆಗಾಲಕ್ಕೆ ಬೇಕಾಗುವ ಹಲಸಿನಕಾಯಿಯ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಹಾಗಲಕಾಯಿಯ ಚಿಪ್ಸ್, ಆಲೂಗಡ್ಡೆಯ ಚಿಪ್ಸ್‌ಗಳನ್ನು ಮಾಡುತ್ತಿದ್ದರು. ಮತ್ತು ಮಳೆ ಬರುವಾಗ ಇದನ್ನೆಲ್ಲ ಚಪ್ಪರಿಸಿ ತಿನ್ನುವ ಸುಖವೇ ಬೇರೆ.!
ಹೀಗೆ ಬಾಲ್ಯ ಕಳೆದು ಯೌವ್ವನಕ್ಕೆ ಬಂದಾಗ, ಮಳೆಗಾಲದ ರಜಾ ದಿನಗಳಲ್ಲಿ ಸ್ನೇಹಿತರೊಂದಿಗೆ, ಮನೆಯವರೊಂದಿಗೆ ಪ್ರವಾಸ ಹೋಗುತ್ತಿದ್ದೆವು. ಹಲವು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ ನೆನಪುಗಳು ಇನ್ನೂ ಅಚ್ಚಳಿಯದಂತೆ ಹಸಿರಾಗಿವೆ. ಮಡಿಕೇರಿಯ ರಾಜಾಸೀಟು, ಅಬ್ಬಿ ಫಾಲ್ಸ್, ಜೋಗ್ ಫಾಲ್ಸ್, ಶಿವನ ಸಮುದ್ರ, ಶೃಂಗೇರಿ, ಚಿಕ್ಕಮಗಳೂರು, ಮಂಗಳೂರು ಅಲ್ಲಿನ ಪ್ರವಾಸಿ ತಾಣಗಳಿಗೂ ಭೇಟಿ ನೀಡಿದ್ದೆವು. ಈ ಸ್ಥಳಗಳನ್ನು ಮಳೆಗಾಲದಲ್ಲಿಯೇ ವೀಕ್ಷಿಸಬೇಕು. ಮಲೆನಾಡು ಹಾಗೂ ಕರಾವಳಿಯ ಪ್ರಕೃತಿ ರಮಣೀಯ ಸೌಂದರ್ಯದ ಸ್ವಾದವನ್ನು ಹೀರುತ್ತಿದ್ದರಂತೂ ನಮ್ಮ ಮನಸ್ಸಿನ ದುಃಖಗಳೆಲ್ಲ ಒಂದೇ ಕ್ಷಣದಲ್ಲಿ ಮಾಯವಾಗಿಬಿಡುತ್ತಿತ್ತು.
ಈಗ ಕಾಲೇಜು. ಅದೆಲ್ಲವೂ ಕನಸಿನ ಹಾಗೆ ಭಾಸವಾಗುತ್ತದೆ. ಅಂತಹ ದಿನಗಳನ್ನು ಅನುಭವಿಸಿದ್ದು ನಾವೇನಾ ಎಂಬ ಪ್ರಶ್ನೆ ಖಂಡಿತ ಮೂಡುತ್ತದೆ. ಕಾಲೇಜಿನ ತರಗತಿ ಮುಗಿಸಿ, ಜಿಟಿಜಿಟಿ ಗಾಳಿ ಮಳೆಯಲ್ಲಿ, ಕೊಡೆ ಹಿಡಿದರೂ ನೆನೆಯುತ್ತಾ ಮನೆಗೆ ಬಂದು ಕುಳಿತ ನನಗೆ ಒಂದು ಕ್ಷಣ ಬಾಲ್ಯವೇ ನೆನಪಾಯ್ತು.
ಅಕ್ಷಿತಾ ಡಿ.
ವಿದ್ಯಾರ್ಥಿನಿ, ಬಿ. ವೋಕ್ (ಡಿಎಂಎಫ್‌ಎಂ)
ಎಸ್‌ಡಿಎಂ ಕಾಲೇಜು, ಉಜಿರೆ