Back To Top

 ಅವ್ವ ಕಟ್ಟಿದ ಹಿತ್ತಲ ಜಗತ್ತು | ದಾವಲಸಾಬ ನರಗುಂದ

ಅವ್ವ ಕಟ್ಟಿದ ಹಿತ್ತಲ ಜಗತ್ತು | ದಾವಲಸಾಬ ನರಗುಂದ

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಗೊಂದೊಂದು ಹಿತ್ತಲು ಇದ್ದುದು ಕಂಡುಬರುತ್ತಿತ್ತು. ಅದು ಬರೀ ಹಿತ್ತಲಷ್ಟೇ ಅಲ್ಲ ಅದು ಹಲವು ಬದುಕುಗಳು ಅನಾವರಣಗೊಳ್ಳುವ ನಿಲ್ದಾಣವಾಗಿದೆ. ಇವತ್ತಿನ ದಿನಗಳಲ್ಲಿ ಬೇಸರಾದಾಗ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಗಾರ್ಡನ್‌ಗೆ ಹೋಗುವುದು, ಪಾರ್ಕಗಳಿಗೆ ಹೋಗುವುದು, ಫಿಟ್ ನೆಸ್ ಸೆಂಟರ್‌ಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಬೇಸರ ಕಳೆಯಲು, ಓಡಾಡಲು ಮನೆಯ ಹಿಂಬದಿಯ ಹಿತ್ತಲುಗಳನ್ನು ಬಳಸುತ್ತಿದ್ದರು.

ನಾವು ಚಿಕ್ಕವರಿದ್ದಾಗ ಬಹುತೇಕ ಮನೆಗಳಿಗೆ ಹಿತ್ತಲುಗಳಿದ್ದುದನ್ನು ಕಂಡಿದ್ದೇವೆ. ಜೊತೆಗೆ ಹಿತ್ತಲಿನಿಂದ ಹಿತ್ತಲಿಗೆ ಸೀಮೋಲ್ಲಂಘನ ಮಾಡಿ ಹಿತ್ತಲು ಜಗತ್ತಿನ ಸಮೃದ್ಧ ಫಲಗಳನ್ನು ಮತ್ತು ತರಕಾರಿಗಳನ್ನು ಭರಪೂರ ಸವಿದಿದ್ದೇವೆ. ಹೆಣ್ಣು ಮಕ್ಕಳು ಗೃಹೋಪಯೋಗಿ ವಸ್ತುಗಳ ಲೇವಾದೇವಿಯನ್ನು ಈ ಹಿತ್ತಲುಗಳ ಮುಖಾಂತರವೇ ನಡೆಸುತ್ತಿದ್ದರು. ನಾವಂತೂ ಚಿಕ್ಕವರಿರುವಾಗ ಒಮ್ಮೊಮ್ಮೆ ಹಿತ್ತಲು ಜಗತ್ತನ್ನು ಕೊಳ್ಳೆ ಹೊಡೆದದ್ದೂ ಉಂಟು.

ಅಂಗೈಯಷ್ಟಗಲವಿರುವ ನಮ್ಮ ಮನೆಯ ಹಿತ್ತಲಿನಲ್ಲಿ ನಮ್ಮವ್ವ ತನ್ನದೇ ಆದಂತಹ ಸಾಮ್ರಾಜ್ಯ ಕಟ್ಟಿ ಬೆಳೆಸಿದ್ದಾಳೆ. ಅಲ್ಲಿ ಕರಿಬೇವು, ಮಲ್ಲಿಗೆ ಬಳ್ಳಿ, ಕಾಕಡಾ, ಸುಗಂಧಿ, ತೆಂಗಿನ ಗಿಡಗಳು, ನಿಂಬೆ, ಪೇರಲ, ಮಾವು, ಪಪ್ಪಾಯಿ, ಟೊಮೆಟೊ, ಕೊತಂಬರಿ, ವೀಳ್ಯದೆಲೆ ಬಳ್ಳಿಗಳು, ಗಸಗಸೆ ಹಣ್ಣಿನ ಗಿಡ, ಬೇವು, ಬದನೆ, ಚಳ್ಳೋರಿ, ಔಷಧೀಯ ಸಸ್ಯಗಳು, ಸೇವಂತಿ, ನೇರಳೆ, ಸೀತಾಫಲ, ಜವಾರಿ ಮೆಣಸಿನಕಾಯಿ ಹೀಗೆ ಇನ್ನೂ ಹಲವು ಬಗೆಯ ಸಸ್ಯಕಾಶಿಯೇ ಅಲ್ಲಿದೆ.

ಅವ್ವನಿಗೆ ಇದು ಕೇವಲ ಹಿತ್ತಲಷ್ಟೇ ಅಲ್ಲ ಅದೊಂದು ವಿಸ್ಮಯ ಜಗತ್ತು. ಅವ್ವ ಗಿಡಗಳೊಡನೆ, ಹೂಗಳೊಡನೆ ಹೆಚ್ಚು ಮಾತನಾಡುತ್ತಾಳೆ ಮತ್ತು ತರ್ಕಿಸುತ್ತಾಳೆ. ಅವುಗಳೊಡನೆ ಭಾವನಾತ್ಮಕ ಬಂಧವನ್ನು ಬೆಸೆದುಕೊಂಡಿದ್ದಾಳೆ. ಇಲ್ಲಿ ಹಲವು ಬಗೆಯ ಜೀವನ ವಿಧಾನಗಳನ್ನು ಕಂಡುಕೊಂಡಿದ್ದಾಳೆ. ಅವ್ವ ಬೆಳೆಸಿದ ಈ ಜಗತ್ತಿನಲ್ಲಿ ನಿತ್ಯದ ಆರೋಗ್ಯಕ್ಕೆ ಉಪಯುಕ್ತವಾದ ಅನೇಕ ಗಿಡಗಳನ್ನು ಬೆಳೆಸಿದ್ದಾಳೆ. ತನ್ನ ಒಡಲ ಕೂಸಿನಂತೆ ಅವುಗಳನ್ನು ಜೋಪಾನ ಮಾಡುತ್ತಾಳೆ. ಚಿಗುರಿಗೆ ನೆರಳಿಟ್ಟು ಕಾಯುವ ಅವ್ವನಿಗೆ ತಾನೇ ಬೆಳೆದ ಆ ತರಕಾರಿಯಲ್ಲಿ ಅಡುಗೆ ಮಾಡಿ ಮಕ್ಕಳಿಗೆ ಉಣಿಸುವುದು ಬಲು ಇಷ್ಟ.

ನಿತ್ಯದ ಅಡುಗೆಗೆ ಒದಗುವಷ್ಟಲ್ಲದಿದ್ದರೂ ತಿಂಗಳಿಗೆ ಒಂದೊ ಇಲ್ಲವೇ ಎರಡು ಬಾರಿ ನಮ್ಮ ಹಿತ್ತಲಿನಲ್ಲಿ ಬೆಳೆದ ತರಕಾರಿಗಳದ್ದೇ ಸ್ಪೆಶಲ್ ಅಡುಗೆ ಇರುತ್ತೆ. ಅಡುಗೆಗೆ ಬಳಸಿ ಉಳಿದ ತರಕಾರಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಮಾಡುತ್ತಾಳೆ. ಯಾವುದೇ ರಾಸಾಯನಿಕ ಔಷಧಿಯನ್ನು ಸಿಂಪಡಿಸುವುದಿಲ್ಲ. ಇದ್ದ ಅಂಗೈಯಷ್ಟು ಜಾಗೆಯಲ್ಲಿ ಗಿಡಗಳೆನ್ನುವ ಸಂಗಾತಿಗಳನ್ನು ಬೆಳೆಸಿಕೊಂಡು ಅವುಗಳೊಂದಿಗೆ ಭಾವನಾತ್ಮಕ ನಂಟು ಹೊಂದುವುದಿದೆಯಲ್ಲ ಅದು ಯಾವಾಗಲೂ ಅವ್ವನಿಗೆ ಪ್ರಿಯವಾದ ವಿಷಯ.

ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಹಿತ್ತಲಿಲ್ಲದ ಮನೆಗೆ ಕನ್ಯಾ ಕೊಡುತ್ತಿರಲಿಲ್ಲವೆಂಬ ಮಾತಿದೆ. ‘ಹಿತ್ತಲ ಇಲ್ಲದಾಕಿಗೆ ಹಿರೇತನ ಇಲ್ಲ’ ಎಂಬ ಗಾದೆಮಾತು ರೂಢಿಯಲ್ಲಿದೆ. ಈ ಹಿತ್ತಲಿನಿಂದ ಹೆಣ್ಣು ಮಕ್ಕಳಿಗೆ ತಲೆ ಬಾಚಿಕೊಳ್ಳಲು, ಬಟ್ಟೆ ಮತ್ತು ಪಾತ್ರೆಗಳನ್ನು ತೊಳೆಯಲು, ಹರಟೆ ಹೊಡೆಯಲು, ಬೆಳದಿಂಗಳ ಬೆಳಕ ಸವಿಯಲು ಮುಕ್ತವಾದ ಅವಕಾಶ ಇಲ್ಲಿತ್ತು. ಜೊತೆಗೆ ಹಿತ್ತಲಿನಲ್ಲಿ ದನ ಕರುಗಳು, ಕುಳಬಾನ, ಬಣವಿ, ತರಹೇವಾರಿ ಪ್ರಾಣಿ ಪಕ್ಷಿಗಳಿಗೆ ತಾಯ್ತನ ಒದಗಿಸಿಕೊಟ್ಟಿದ್ದು ಈ ಹಿತ್ತಲೇ.

ಅವ್ವ ಕಟ್ಟಿದ ಈ ಜಗತ್ತಿನ ಹಿಂದೆ ಅದ್ಭುತ ಕನಸಿನ ಪ್ರಕೃತಿಯೇ ಕೈಜೋಡಿಸಿ ನಿಂತಂತಿದೆ. ಈ ವರ್ಷ ಮಳೆಗಾಲದ ಅಭಾವ ಇದ್ದುದರಿಂದ ಸ್ವಲ್ಪ ಸೊರಗಿದಂತಿದೆ. ಈ ಹಿತ್ತಲು ತುಂಬಾ ತರತರಹದ ಹಾವು, ಚೇಳು, ಹಲ್ಲಿ, ಓತಿಕ್ಯಾತ, ಹಾವರಾಣಿ, ಜೇಡ, ಜೇನ್ನೊಣಗಳು, ಮುಂಗುಸಿಗಳು, ಗುಬ್ಬಚ್ಚಿಗಳು, ಗೊರವಂಕಗಳು, ಆಗೊಮ್ಮೆ ಈಗೊಮ್ಮೆ ಕಾಣಿಸುವ ಕೋಗಿಲೆಗಳು, ನೀರು ಹಕ್ಕಿಗಳು, ರತ್ನಪಕ್ಷಿಗಳು, ಹಲವು ಜಾತಿಯ ದುಂಬಿಗಳು ನಮ್ಮನ್ನು ಸ್ವಾಗತಿಸುತ್ತವೆ. ಇದು ಕುವೆಂಪುರವರ ಪಕ್ಷಿಕಾಶಿ ನೆನಪಿಸುತ್ತದೆ. Living together systemನಲ್ಲಿ ಈ ಎಲ್ಲಾ ಜೀವಿಗಳು ಚೆಂದಾಗಿ ಅವುಗಳ ಪಾಡಿಗೆ ಅವು ಬದುಕು ನಡೆಸುತ್ತಿವೆ.

ಕೆಲವು ವರ್ಷಗಳ ಹಿಂದೆ ಮಕ್ಕಳಿರಲವ್ವ ಮನೆ ತುಂಬಾ ಎನ್ನುವ ಗಾದೆ ಕೇಳಿಬರುತ್ತಿತ್ತು. ಹಾಗೇ ಈ ಮಕ್ಕಳ ಜೊತೆಗೆ ಮನೆಯ ಸುತ್ತಮುತ್ತ ಗಿಡಮರಗಳನ್ನು ಬೆಳೆಸಲಾಗುತ್ತಿತ್ತು. ನಮ್ಮ ಹಳೇ ಕಾಲದ ಅವಿಭಕ್ತ ಕೌಟುಂಬಿಕ ಜೀವನದ ಸೊಗಸನ್ನು ಸವಿದವರಿಗೆ ಇದು ಅರ್ಥವಾಗಬಲ್ಲುದು. ಹೀಗಾಗಿ ಆಗ ಹಿತ್ತಲಿಗೆ ತುಂಬಾ ಗೌರವದ ಸ್ಥಾನವಿತ್ತು. ಹಿತ್ತಲಿಲ್ಲದ ಮನೆ ಬತ್ತಲೆ ಎಂಬ ಭಾವನೆ ಬಯಲು ಸೀಮೆಯವರದಾಗಿತ್ತು. ದೆವ್ವದ ಪರಿಕಲ್ಪನೆ ಹುಟ್ಟಿಕೊಂಡಿದ್ದೇ ಈ ಹಿತ್ತಲಿನಲ್ಲಿ. ಈಗ ಝಗಮಗಿಸುವ ಲೈಟುಗಳು ಬಂದು ದೆವ್ವಗಳಿಗೆ ಜಾಗ ಬಿಡಿಸಿದವು. ಆಗ ಹಿತ್ತಲುಗಳು ದೆವ್ವಗಳ ನೈಟ್ ಕ್ಲಬ್ ಗಳಾಗಿದ್ದವು.

ಹೀಗೆ ಬದಲಾದ ಜೀವನ ಶೈಲಿಯಿಂದ ನಮ್ಮ ಮನೆ, ಮನ, ಹೊಲ, ದನ, ದಂದಕ್ಕಿ, ಹಿತ್ತಲುಗಳೆಲ್ಲವೂ ಕಣ್ಮರೆಯಾಗಿ ಗೋಡೆ ಮೇಲಿನ ಚಿತ್ರಕಾವ್ಯವಾಗಿದೆ.

ದಾವಲಸಾಬ ನರಗುಂದ
ಸಂಶೋಧನಾ ವಿದ್ಯಾರ್ಥಿ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

Prev Post

ಕಲೆಗಳೆಲ್ಲ ಮನುಜನಿಂದ ಬಂದವೆ? | ಸಿದ್ಧಾರೂಢ ಎಸ್. ಜಿ.

Next Post

ಹೊರಗಿನವರಿಗೆ ಚಂದ ನಮ್ಮೂರು ಆದರೆ ಅಲ್ಲಿದ್ದವನಿಗೇ ಗೊತ್ತು ಅಲ್ಲಿಯ ಪಾಡು | ಪವನ್‌…

post-bars

Leave a Comment

Related post