Back To Top

 ರಂಗನಾಯಕನ ಅರಮನೆಯಲ್ಲಿ ಖಾಲಿ ಪೋಲಿ ಮಾತು | ಗ್ಲೆನ್‌ ಗುಂಪಲಾಜೆ

ರಂಗನಾಯಕನ ಅರಮನೆಯಲ್ಲಿ ಖಾಲಿ ಪೋಲಿ ಮಾತು | ಗ್ಲೆನ್‌ ಗುಂಪಲಾಜೆ

‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ರೀತಿಯ ಸಿನಿಮಾಗಳನ್ನು ಮಾಡಿದವರು ನಟ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಜೋಡಿ! ಇದೀಗ ಇವರಿಬ್ಬರ ಕಾಂಬಿನೇಷನಲ್ಲಿ 15 ವರ್ಷಗಳ ನಂತರ ‘ರಂಗನಾಯಕ’ ಎಂಬ ಸಿನಿಮಾ ಹೊರಬಂದಿದೆ. 

‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಬಹಳ ಹಿಂದಿನ ಚಲನ ಚಿತ್ರಗಳಾದರೂ ಅವುಗಳಿಗೆ ಒಂದು ವಿಭಿನ್ನವಾದ ಅಭಿಮಾನಿಗಳಿದ್ದಾರೆ. ಆ ಸಿನಿಮಾಗಳು ತೆರೆಕಂಡು ಹಲವು ವರ್ಷಗಳೇ ಕಳೆದಿದ್ದರೂ, ಈಗಲೂ ಕೂಡ ಮೊದಲಿನಿಂದ ಕೊನೆಯವರೆಗೆ ಸರಾಗವಾಗಿ ಕರೆದುಕೊಂಡು ಹೋಗುವಂತಹ ಸ್ಕ್ರೀನ್‌ ಪ್ಲೇ ಅವುಗಳಲ್ಲಿದೆ. ಇಂತಹ ಸಿನಿಮಾಗಳನ್ನು ಮಾಡಿದವರು ನಟ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಜೋಡಿ! ಇದೀಗ ಇವರಿಬ್ಬರ ಕಾಂಬಿನೇಷನಲ್ಲಿ 15 ವರ್ಷಗಳ ನಂತರ ‘ರಂಗನಾಯಕ’ ಎಂಬ ಸಿನಿಮಾ ಹೊರಬಂದಿದೆ. ಹಾಗಾದರೆ, ಈ ಸಿನೆಮಾ ಹೇಗಿದೆ ಎಂದು ಪದಗಳಲ್ಲಿ ಕೇಳುವ ಪ್ರಯತ್ನ, ಕಡೆಯವರೆಗೂ ಓದಿ…

ಇದು ಗುರುಪ್ರಸಾದ್ ಶೋ!
‘ರಂಗನಾಯಕ’ ಘೋಷಣೆಯಾದಾಗ ಈ ಸಿನಿಮಾ ಕೂಡ ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ರೀತಿ ರಂಜಿಸುತ್ತವೆ ಎಂಬ ನಿರೀಕ್ಷೆ ಅನಾಮತ್ತಾಗಿ ಹುಟ್ಟಿಕೊಂಡಿತ್ತು. ಟ್ರೇಲರ್ ರಿಲೀಸ್ ಆದಮೇಲಂತೂ, ಗುರುಪ್ರಸಾದ್ ಈ ಬಾರಿ ಏನೋ ಬೇರೆ ಮಾಡಿರುವಂತಿದೆ ಎಂಬ ಅನುಮಾನ ಮೂಡಿತ್ತು. ಹಾಗ್ನೋಡಿದ್ರೆ ‘ರಂಗನಾಯಕ’ ಮೂಲಕ ನಿಜಕ್ಕೂ ಗುರುಪ್ರಸಾದ್ ಬೇರೆ ಏನ್ನನ್ನೋ ಮಾಡಿಬಿಟ್ಟಿದ್ದಾರೆ! ಅವರು ಹಿಂದಿನ ಸ್ಟೈಲ್‌ನ ಸಿನಿಮಾ ಇದಲ್ಲ ಎಂಬುದು ಆರಂಭದ ಅರ್ಧ ಗಂಟೆಯಲ್ಲೇ ಗೊತ್ತಾಗಿಬಿಡುತ್ತದೆ. ಸಿನಿಮಾದ ನಿಜವಾದ ಕಥೆ ಆರಂಭವಾಗುವ ಹೊತ್ತಿಗೆ ಇಂಟರ್ವಲ್ ಬಂದಿರುತ್ತದೆ! ಇಡೀ ಸಿನಿಮಾ ತುಂಬ ಗುರುಪ್ರಸಾದ್ ಕಾಣಿಸಿಕೊಳ್ಳುತ್ತಾರೆ ಮತ್ತು ಅವರಿಲ್ಲಿ ನಿರ್ದೇಶಕ ಗುರುಪ್ರಸಾದ್ ಆಗಿಯೇ ಎಂಟ್ರಿ ಕೊಡುತ್ತಾರೆ. ಹಾಗಾಗಿ, ಮೊದಲರ್ಧದಲ್ಲಿ ಗುರುವಿನದ್ದೇ ಹೆಚ್ಚು ದರ್ಶನ!

‘ರಂಗನಾಯಕ’ನ ಕಥೆ ಏನು?
1911ನೇ ಇಸವಿಯಲ್ಲಿ ಸಿನಿಮಾ ಮಾಡುವುದಕ್ಕೆ ಮುಂದಾದ ನಿರ್ದೇಶಕನೊಬ್ಬನ ಕಥೆ ಇದು. ಆ ಸಿನಿಮಾಗೆ ರಂಗನಾಯಕನೇ (ಜಗ್ಗೇಶ್) ಹೀರೋ. ಕನ್ನಡ ಚಿತ್ರರಂಗದ ಮೇಲೆ ಪರಭಾಷಿಕರು ಹೇಗೆ ಅಂದೇ ದಾಳಿ ಮಾಡಿದರೂ ಎಂಬುದನ್ನು ರಂಗನಾಯಕ ಸಿನಿಮಾದಲ್ಲಿ ಹೇಳಲಾಗಿದೆ. ಆದರೆ ಈ ಪುಟ್ಟ ಕಥೆಯ ಅಲಂಕಾರಕ್ಕೆ ಗುರುಪ್ರಸಾದ್ ಮೊರೆ ಹೋಗಿರುವುದು ಸಂಭಾಷಣೆಗೆ. ಅದರಲ್ಲಿ ಡಬಲ್ ಮೀನಿಂಗ್, ಪಂಚಿಂಗ್, ತುಂಟತನ, ತರಲೆ, ತಮಾಷೆ, ಅನವಶ್ಯಕ, ಅತಿರೇಕ ಎಲ್ಲವೂ ಅಡಕವಾಗಿದೆ. ‘ಮಾತಲ್ಲೇ ಮನೆ ಕಟ್ತಾನೆ’ ಅನ್ನೋ ಥರ ಇಲ್ಲಿ ಮಾತಲ್ಲೇ ಇಡೀ ಸಿನಿಮಾ ಕಟ್ಟಿಬಿಟ್ಟಿದ್ದಾರೆ ಎಂದರೆ ತಪ್ಪಲ್ಲ!

ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು ಅನ್ನೋ ಹಾಗೇ, ಇಲ್ಲಿ ಅತಿಯಾದ ಮಾತು ಒಮ್ಮೊಮ್ಮೆ ಸಿನಿಮಾ ಆಶಯವನ್ನೇ ಬದಿಗೆ ಸರಿಸಿದೆ. ಅನೇಕ ಕಡೆಗಳಲ್ಲಿ ಕಥೆಗೆ ಸಂಬಂಧವಿರದ ಸಂಭಾಷಣೆ ತೂರಿಕೊಂಡು ಬಂದಿವೆ. ಒಂದಷ್ಟು ಮಾತುಗಳನ್ನು ಬೇಕೆಂದೇ ಬರೆದಿದ್ದಾರೆ ಎಂದು ಅನಿಸುತ್ತದೆ. ಮೊದಲರ್ಧದಲ್ಲಿ ‘ಕ್ಯಾ ಚಲ್ ರಹಾ ಹೈ’ ಅಂತ ಪ್ರೇಕ್ಷಕ ಅತ್ತಿತ್ತ ನೋಡುವಂತಿದ್ದರೆ, ದ್ವಿತಿಯಾರ್ಧದಲ್ಲಿ ಮಾತ್ರ ಕಥೆಗೆ ಒಂದು ಚೌಕಟ್ಟು ದಕ್ಕಿದೆ.

ಟೆಕ್ನಿಕಲಿ ಹೇಗಿದೆ ಸಿನಿಮಾ?
ಗುರುಪ್ರಸಾದ್ ಅವರ ಖಾಯಂ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಎಂದಿನಂತೆ ಹಿನ್ನೆಲೆ ಸಂಗೀತದ ಮೂಲಕ ಖುಷಿ ನೀಡುತ್ತಾರೆ. ‘ಗಾಳಿ ತಂಗಾಳಿ..’, ‘ಎನ್ನ ಮನದರಸಿ..’ ಹಾಡುಗಳಲ್ಲಿ ರೆಟ್ರೋ ಟಚ್ ನೀಡಿದ್ದಾರೆ. ಕೇಳುವುದಕ್ಕೂ ಆ ಹಾಡುಗಳು ಇಷ್ಟವಾಗುತ್ತವೆ. ಅಶೋಕ್ ಅವರ ಕ್ಯಾಮೆರಾ ಎಲ್ಲವನ್ನು ಹತ್ತಿರದಿಂದಲೇ ಚಿತ್ರಿಸಿದೆ. ಹಾಗಾಗಿ, ಕ್ಲೋಸ್ ಅಪ್‌ ಶಾಟ್ಸ್‌ಗೆ ಪ್ರಾಮುಖ್ಯತೆ ನೀಡಲಾಗಿದೆ. ‘ಪುಟ್ಟಣ್ಣನವರ ರಂಗನಾಯಕಿಗೂ ನಮ್ಮ ರಂಗನಾಯಕ ಸಿನಿಮಾಗೂ ಯಾವುದೇ ಸಂಬಂಧವಿಲ್ಲ’ ಎನ್ನುತ್ತಾರೆ ‘ಮಠ’ ಗುರುಪ್ರಸಾದ್‌

ಕಲಾವಿದರ ನಟನೆ ಹೇಗಿದೆ?
ಜಗ್ಗೇಶ್ ಅವರ ಸಿನಿಮಾಗಳಲ್ಲಿ ಹೆಚ್ಚು ಗಮನಸೆಳೆಯುವುದು ಅವರ ಕಾಮಿಡಿ ಟೈಮಿಂಗ್, ಅಂಗಿಕಾಭಿನಯ. ಇಲ್ಲೂ ಅದೆಲ್ಲವೂ ಇಷ್ಟವಾಗುತ್ತದೆ. ಆಗಾಗ ಬಂದು ನಾಯಕನ ಜೊತೆಗೆ ಪ್ರೇಮಗೀತೆ ಹಾಡುವುದನ್ನು ಬಿಟ್ಟರೆ ನಟಿ ರಚಿತಾ ಮಹಾಲಕ್ಷ್ಮೀಗೆ ಹೆಚ್ಚಿನ ಕೆಲಸವಿಲ್ಲ. ಚೈತ್ರಾ ಕೋಟೂರ್, ಅವಿನಾಶ್ ಶಠಮರ್ಷಣ, ಎಂಕೆ ಮಠ, ಶೋಭಾ ರಾಘವೇಂದ್ರ ಅವರಿಗೆ ಹೆಚ್ಚಿನ ಸ್ಕೋಪ್ ಸಿಕ್ಕಿದೆ. ಅದನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಮನಶಾಸ್ತ್ರಜ್ಞನ ಪಾತ್ರದಲ್ಲಿ ಯೋಗರಾಜ್ ಭಟ್‌ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಗುರುಪ್ರಸಾದ್ ಇಡೀ ಸಿನಿಮಾವನ್ನು ತಮ್ಮ ವಿಚಿತ್ರ ಮ್ಯಾನರಿಸಂ ಮೂಲಕ ಆವರಿಸಿಕೊಂಡಿದ್ದಾರೆ!

ಗ್ಲೆನ್‌ ಗುಂಪಲಾಜೆ
ಎಸ್.ಡಿ.ಎಮ್‌. ಕಾಲೇಜು, ಉಜಿರೆ

Prev Post

ಅಷ್ಟು ಜನರಲ್ಲಿ ಅವರೊಬ್ಬರೇ ಏಕೆ ಕುತೂಹಲಕಾರಿಯಾಗಿ ಕಂಡರು | ಶಿಲ್ಪ ಬಿ.

Next Post

ಭಯೋತ್ಪದಕರನ್ನು ಸದೆಬಡಿಯಲು ಹೋದಾಗ ತೆರೆದುಕೊಂಡ ಸತ್ಯವೇ ‘ಹಿಮಾಗ್ನಿ’ | ಶಶಿಸ್ಕಾರ ನೇರಲಗುಡ್ಡ

post-bars

Leave a Comment

Related post