Back To Top

 ಮನುಷ್ಯತ್ವದ ಪ್ರಜ್ಞೆಯನ್ನು ಭಾವನಾತ್ಮಕವಾಗಿ ಚಿತ್ರಿಸಿದ ಸಿನಿಮಾ ‘ಫೋಟೋ’ | ಸೌಮ್ಯ ನೇತ್ರೇಕರ್‌

ಮನುಷ್ಯತ್ವದ ಪ್ರಜ್ಞೆಯನ್ನು ಭಾವನಾತ್ಮಕವಾಗಿ ಚಿತ್ರಿಸಿದ ಸಿನಿಮಾ ‘ಫೋಟೋ’ | ಸೌಮ್ಯ ನೇತ್ರೇಕರ್‌

ಫೋಟೋ ಮನುಷ್ಯತ್ವದ ಪ್ರಜ್ಞೆಯನ್ನು ಸುಪ್ತವಾಗಿಡದೇ ಅದನ್ನು ಭಾವನಾತ್ಮಕವಾಗಿ ಹೊರಹೊಮ್ಮಿಸುವ ಚಲನಚಿತ್ರ. ಮನೋರಂಜನೆಯ ಉನ್ಮಾದದಲ್ಲಿರುವ ನಮ್ಮ ಸಂವೇದನೆಗಳಿಗೆ ಭಾರತದ ಭೀಕರ ವಾಸ್ತವವನ್ನು ನೈಜವಾಗಿ ತೋರಿಸುವ ಮೂಲಕ ನಮ್ಮಲ್ಲಿ ಜವಾಬ್ದಾರಿ ಮೂಡಿಸುತ್ತದೆ. ನಮ್ಮ ದೇಶದಲ್ಲಿ ಬಡವರು ಆಳುವ ವರ್ಗದ ದಬ್ಬಾಳಿಕೆಯಲ್ಲಿ ನಲುಗುವ ಸ್ಥಿತಿ ಮೂಕವಿಸ್ಮಿತರನ್ನಾಗಿಸುತ್ತದೆ.

ದುರ್ಗ್ಯಾನ ವಿಧಾನಸೌಧದ ಮುಂಭಾಗದಲ್ಲಿ ಒಂದು ಫೋಟೋ ತೆಗೆಸಿಕೊಳ್ಳುವ ಆಸೆಯನ್ನು ಇಲ್ಲಿ ಸಂಕೇತಿಸಲಾಗಿದೆ. ತಂದೆ ತಾಯಿಯರು ಬಡತನದಲ್ಲಿಯೂ ಮಕ್ಕಳ ಆಸೆಯನ್ನು ಆಲಿಸುವುದು ಗೌರವಾರ್ಥವಾಗಿದೆ. ಎಲ್ಲರೂ ಮನೆಗಳಲ್ಲಿರುವಂತೆ ನಮ್ಮ ಮನೆಯಲ್ಲೂ ವಿಧಾನಸೌಧದ ಮುಂದೆ ನಿಂತು ಫೋಟೋ ತೆಗೆಸಿದ ಚಿತ್ರ ಅಂಟಿಸಬೇಕು ಎಂದು ದುರ್ಗ್ಯಾ ಬೆಂಗಳೂರಿಗೆ ಬರುತ್ತಾನೆ. ಕೆಲಸಕ್ಕಾಗಿ ಬಂದಿದ್ದ ಅಪ್ಪ ಮಗನನ್ನು ವಿಧಾನಸೌಧಕ್ಕೆ ಕರೆದೊಯ್ಯುವಾಗ ಪೋಲಿಸರು ತಡೆಯಾಗುತ್ತಾರೆ. 2020ರ ಕೋವಿಡ್ ಕಾಲಘಟ್ಟದಲ್ಲಿ ಸರ್ಕಾರ ಏಕಾಏಕಿ ಲಾಕಡೌನ್ ಘೋಷಿಸುತ್ತದೆ.

ಕೆಲಸಕ್ಕಾಗಿ ದೂರದೂರಿನಿಂದ ಬಂದು ಕೂಲಿ ಕಾರ್ಮಿಕರು ಬೆಂಗಳೂರಿನ ಬೃಹತ್ ನಗರದಲ್ಲಿ ಕೆಲಸವಿಲ್ಲದೇ ತಮ್ಮ ಊರುಗಳಿಗೆ ಮರಳಬೇಕಾದಾಗ ಎದುರಾಗಿದ್ದ ಸಂಕಷ್ಟಗಳು; ಸರ್ಕಾರದ ಅಮಾನವೀಯ ಕೃತ್ಯವನ್ನು ಪ್ರಶ್ನೆ ಮಾಡಿದೆ. ತಂದೆಯ ಜೊತೆ ತನ್ನ ಕನಸು ನೆರವೇರದಿದ್ದರೂ ಊರಿಗೆ ಹೋದಾಗ ನನ್ನ ಮಗ ವಿಧಾನಸೌಧ ನೋಡಿ ಬಂದ ಎಂದು ಹೇಳಿ ಎನ್ನುವ ದುರ್ಗ್ಯಾ ತನ್ನ ಪಾತ್ರದ ಎತ್ತರವನ್ನು ತಲುಪಿದ್ದಾನೆ.

ಕೋರೋನಾ ರೋಗದಿಂದ ಶ್ರೀಮಂತ ವರ್ಗಕ್ಕೆ ಸಿಕ್ಕ ಸೌಲಭ್ಯಗಳು ಬಡವರಿಗೆ ದೊರಕದೇ ಬಸ್ ವ್ಯವಸ್ಥೆಗಳಿಲ್ಲದ ಕಾಲ್ನಡಿಗೆಯಲ್ಲಿ ಊರುಗಳನ್ನು ತಲುಪಬೇಕಾದದ್ದು ಅತಿಶಯೋಕ್ತಿಯದಲ್ಲ. ಮಾನವೀಯತೆ ತೋರಿಕೆಗೆ ಒಳಗಾದ ಯುವಜನಾಂಗಕ್ಕೆ ಈ ಮೂವೀ ಚಾಟಿ ಬೀಸಿದೆ. ಊರಿಗೆ ಬೇಲಿ ಹಾಕುವ ಧಣಿಗಳ ಎದುರು ಜನರು ಆಡುವ ಮಾತು ಮನುಷ್ಯರ ಜೊತೆಗಿರುವ ಜಾತಿ, ವರ್ಗ, ಲಿಂಗ, ಧರ್ಮ ಅಸಮಾನತೆಗಳನ್ನು ಅಳಿಸುವ ವಿಶ್ವಮಾನವ ಪ್ರಜ್ಞೆಯನ್ನು ಇಲ್ಲಿ ಗುರುತಿಸಬಹುದು.

ಈ ಪುಟ್ಟ ಕುಟುಂಬದ ಜೀವಸೆಲೆಯಾಗಿದ್ದ ದುರ್ಗ್ಯಾನ ಸಾವು ತುಂಬಾ ಘೋರವಾದದ್ದು. ಪಾತ್ರಗಳ ಅಭಿನಯದ ತೀವ್ರತೆ ನಮ್ಮ ಮುಂದೆ ನಿಜವಾಗಿಯೂ ಸಾವಿನ ನೋವು ತರಿಸಿ ಕೈ ಬಂಧಿಯಾಗಿಸುತ್ತಿದೆ. ಫೋಟೋ ರುದ್ರನಾಟಕದ ಕೆಥಾರ್ಸಿಸ್ ಪ್ರಯೋಗದಂತಿದೆ. ಇತ್ತ ಮಗುವಿನ ಸಾವಿನ ದುಃಖದಲ್ಲಿ ಕುಟುಂಬವಿದ್ದರೆ, ದೀಪ ಬೆಳಗುವ ಮೂಲಕ ಜಗತ್ತಿಗೆ ನಮ್ಮ ಶಕ್ತಿಯನ್ನು ತೋರಿಸಬೇಕು ಎಂಬ ಹೋಲಿಕೆಗಳು ಭಾರತದ ವರ್ಗ ಅಸಮಾನತೆಯನ್ನು ಸೂಕ್ಷ್ಮವಾಗಿ ಚಿತ್ರಿಸಿದೆ.

ಬಡವರ ಮನೆಯ ಕತ್ತಿಲು, ಮೌನ ನೋವು ನುಂಗಿಕೊಂಡು ಬದುಕಬೇಕಾದ ಅಸಹಾಯಕತೆಯನ್ನು ಜ್ಞಾಪಿಸಿದೆ. ಸಮಾನತೆಯ ಸತ್ವ ಅಸಮಾಧಾನಗೊಂಡಿರುವ ನೆಲೆಯಲ್ಲಿ ಬಡವರು ಕನಸು ಕಾಣುವುದು ತಪ್ಪೇ? ಎಂಬ ಮರೆಯಲಾಗದ ಪ್ರಶ್ನೆಯನ್ನು ಹುಟ್ಟಿಸಿ, ನ್ಯಾಯವಿದ್ದರೆ ಅದು ಎಷ್ಟೊಂದು ಅಮಾನವೀಯವಾಗಿದೆ ಎಂದು ಈ ಚಲನಚಿತ್ರ ದಾಖಲಿಸಿದೆ.

ಸೌಮ್ಯ ನೇತ್ರೇಕರ್‌
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾಡೇಲಿ

Prev Post

ಮಾರ್ಚ್ 23ಕ್ಕೆ ‘ಎಲ್ಲರೊಳಗೊಂದಾಗು’ ಕೃತಿ ಲೋಕಾರ್ಪಣೆ

Next Post

Superhero ಅಪ್ಪ | ಲಿಖಿತಾ. ಎಂ

post-bars

Leave a Comment

Related post