ಬದುಕನ್ನು ಹೊಂದಿಸಿ ಬರೆದರೆ ಸುಂದರ | ರಂಜಿತ ಹೆಚ್. ಕೆ
ಸಂಬಂಧಗಳ ಮೌಲ್ಯಗಳನ್ನು ಹೇಳಲು ಹೊರಟ ಸಿನಿಮಾ ‘ಹೊಂದಿಸಿ ಬರೆಯಿರಿ’
ಇಷ್ಟಪಟ್ಟು ಮದುವೆಯಾಗಿದ್ದೇವೆ ಎಂಬ ಕಾರಣಕ್ಕೆ ಕಷ್ಟಪಟ್ಟುಕೊಂಡು ಜೊತೆಗಿರಲು ಸಾಧ್ಯವಿಲ್ಲ. ಪ್ರೀತಿಸಿ ಮದುವೆಯಾದ ಜೋಡಿಯ ನಡುವಿನ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ. ಬದುಕೇ ಹಾಗೆ, ಆರಂಭದಲ್ಲಿ ಚೆನ್ನಾಗಿದೆ ಅನಿಸಿದ್ದು, ಮುಂದೆ ದುಃಖಕ್ಕೆ, ನೋವಿಗೆ ಕಾರಣವಾಗಬಹುದು. ಹೌದು ಅಲ್ವಾ ಬದುಕಿನಲ್ಲಿ ಬರುವ ಕೆಲವೊಂದು ಅಂಶಗಳು ಹಾಗೂ ಆ ಸಮಯದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ನೆಮ್ಮದಿ-ದುಃಖಕ್ಕೆ ಕಾರಣವಾಗುತ್ತವೆ. ಈ ತರಹದ ಒಂದು ಸೂಕ್ಷ್ಮ ಹಾಗೂ ಮನಸ್ಸಿಗೆ ಮುಟ್ಟುವಂತಹ ಸಂದೇಶದೊಂದಿಗೆ ತೆರೆಕಂಡಿರುವ ಚಿತ್ರ ಇದಾಗಿದೆ.
ಇಡೀ ಸಿನಿಮಾ ನಿಂತಿರೋದು ಭಾವನೆಗಳ ಮೇಲೆ. ಹಾಗಾಗಿ, ಜೀವನದಲ್ಲಿ ಹರೆಯದ ಹುಡುಗ-ಹುಡುಗಿಯರ ನಿರ್ಧಾರಗಳು ಹೇಗೆ ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಈ ಸಿನಿಮಾದ ಪ್ರಮುಖ ಅಂಶ. ಕಥೆಯೇ ಈ ಸಿನಿಮಾದ ಹೀರೋ, ಇಲ್ಲಿ ಕಾಲೇಜು ವಿದ್ಯಾರ್ಥಿಗಳ ಸುಂದರವಾದ ಜರ್ನಿ ಇದೆ. ಚಿತ್ರದ ಮೊದಲಾರ್ಧ ಕಾಲೇಜು, ಅಲ್ಲಿನ ಪ್ರೀತಿ ಪ್ರೇಮ, ಸಣ್ಣಪುಟ್ಟ ಕಿರಿಕ್‌ಗಳ ಮೂಲಕ ಸಿನಿಮಾ ಸಾಗುತ್ತದೆ. ಇಲ್ಲಿ ಜಾಲಿಯಾಗಿ ಸಾಗುವ ಸನ್ನಿವೇಶಗಳು ಪ್ರೇಕ್ಷಕರಿಗೆ ನಗು ತರಿಸುವ ಜೊತೆಗೆ ಎಲ್ಲೂ ಬೋರ್ ಆಗದಂತೆ ನೋಡಿಕೊಂಡಿದ್ದಾರೆ ನಿರ್ದೇಶಕರು.
ಇನ್ನು, ಚಿತ್ರದ ದ್ವಿತೀಯಾರ್ಧ ತುಂಬಾ ಗಂಭೀರವಾಗಿ ಸಾಗುವ ಜೊತೆಗೆ ಬೇರೆ ಬೇರೆ ಸನ್ನಿವೇಶಗಳು ತೆರೆದುಕೊಳ್ಳುತ್ತವೆ. ಈ ಸಿನಿಮಾ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕಾದರೆ ಮನೆಮಂದಿಯೆಲ್ಲಾ ಕುಳಿತು ನೋಡುವಂತಹ ಒಂದು ನೀಟಾದ ಸಿನಿಮಾ. ಚಿತ್ರದಲ್ಲಿ ನಟಿಸಿರುವ ಐಶಾನಿ, ಶ್ರೀ ಮಹದೇವ್, ನವೀನ್ ಶಂಕರ್, ಪ್ರವೀಣ್ ತೇಜ್, ಭಾವನಾ, ಸಂಯುಕ್ತಾ ಹೊರನಾಡು ಸೇರಿದಂತೆ ಪ್ರತಿಯೊಬ್ಬರು ಪಾತ್ರಕ್ಕೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಉಳಿದಂತೆ ಚಿತ್ರದ ಹಾಡುಗಳು, ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.
ಪ್ರಸ್ತುತ ಅಹಂನಿಂದ ಮನದೊಳಗೆ ಗೋಡೆ ಕಟ್ಟಿಕೊಂಡು ಬಾಳುವ ಯುವ ಜೋಡಿಗಳಿಗೆ ಈ ಚಿತ್ರ ಪ್ರಬಲವಾದ ಸಂದೇಶ ನೀಡಿದೆ. ಪ್ರೀತಿ ಮಾಡಿದರೆ ಯಾವುದೇ ಕಾರಣಕ್ಕೂ ಅಹಂ ಇರಬಾರದು. ಈ ಚಿತ್ರವನ್ನು ನೋಡುತ್ತಾ ನೋಡುತ್ತಾ ಜೀವನದಲ್ಲಿ ನಾವು ಬಯಸಿದ್ದೆಲ್ಲ ಅಷ್ಟು ಸಲೀಸಾಗಿ ಸಿಗುವುದಿಲ್ಲ ಸಿಕ್ಕರೂ ನಾವು ಕೆಲವೊಮ್ಮೆ ನೆಮ್ಮದಿಯಾಗಿ ಇರಲು ಆಗುವುದಿಲ್ಲ ಅನಿಸಿತು.
ರಂಜಿತ ಹೆಚ್. ಕೆ
ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು