Back To Top

 ಎಲ್ಲಾ ಘಟನೆಗೆ ಕಾರಣ ನಾವಲ್ಲ ನಮ್ಮೊಳಗಿನ ಬ್ಯಾಕ್ಟೀರಿಯಾ | ಶಿಲ್ಪ ಬಿ.

ಎಲ್ಲಾ ಘಟನೆಗೆ ಕಾರಣ ನಾವಲ್ಲ ನಮ್ಮೊಳಗಿನ ಬ್ಯಾಕ್ಟೀರಿಯಾ | ಶಿಲ್ಪ ಬಿ.

ಕೃತಿ: ಹೊಕ್ಕಳ ಮೆದುಳು
ಲೇಖಕ: ಕೆ. ಎನ್‌. ಗಣೇಶಯ್ಯ

ಸತ್ಯವೇ ಎಂದಿಗೂ ಜೀವಂತ. ಆದರೇ ಕೆಲವು ಸತ್ಯಗಳನ್ನು ಒಪ್ಪಿಕೊಳ್ಳಲು ಬಹಳ ಕಷ್ಟವಾಗುತ್ತದೆ. ಆದರೇ ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ. ಏಕೆಂದರೆ ಅದು ಸತ್ಯವಲ್ಲವೇ? ಅಂತಹ ನಿಜವನ್ನು ಪ್ರತಿ ಬರವಣಿಗೆಯಲ್ಲು ಪರಿಚಯಿಸುವ ಗಣೇಶಯ್ಯರವರೆಂದರೇ ನನಗೆ ಅಚ್ಚುಮೆಚ್ಚು.

ಸಾಹಿತ್ಯಕ್ಕೂ, ವಿಜ್ಞಾನಕ್ಕೂ ಹೆಣೆಯುವ ನಂಟು, ಕಾಫಿಗೆ ಬೆಲ್ಲ ಬೆರಸಿದಷ್ಟು ಸ್ವಾದಿಷ್ಟ. ಅಂತಹ ರುಚಿಯಾದ ಕಾಫಿಯನ್ನು ಪ್ರತಿ ಕತೆ, ಕಾದಂಬರಿ, ಲೇಖನಗಳಲ್ಲಿ ಬಡಿಸುತ್ತ, ವಿಭಿನ್ನವಾದ ಶೈಲಿಯಲ್ಲಿ ವಿಜ್ಞಾನ ಪ್ರಪಂಚವನ್ನು ಪರಿಚಯಿಸುತ್ತ, “ಹೌದಲ್ಲವೇ?, ಇದು ಹೀಗೇಕೆ ಆಗಬಾರದು? ಇದು ಸಹ ಸರಿಯಲ್ಲವೇ? ಅಲ್ಲ ಇದೇ ಸರಿ.” ಎಂಬ ಹೊಸ ಹೊಸ ಪ್ರಶ್ನೆಗಳು ನಮ್ಮಲ್ಲಿ ಹುಟ್ಟಲು ಕಾರಣರಾಗುತ್ತಾರೇ ಗಣೇಶಯ್ಯರವರು. ಅವರ ಪುಸ್ತಕಗಳ ಸೆಳೆತದಲ್ಲಿ, ಈ ವರ್ಷದ ಶಿವರಾತ್ರಿ, ನನ್ನ ಬದುಕಿನಲ್ಲಿ ಅತ್ಯಂತ ಚಿರಸ್ಮರಣೀಯವಾದ್ದದು ಹೊಕ್ಕಳ ಮೆದುಳಿನ ಧ್ಯಾನದಲ್ಲಿ.

ನ್ಯೂಯಾರ್ಕಿನ ಮೌಂಟ ಸಿನಾಯೆಂಬ ಆಸ್ಪತ್ರೆಯಲ್ಲಿ, ವೈಜರ್ ಹಾಗೂ ತನ್ನ ಸೈನ್ಯ ಮಾಡುವ ಡಾ|| ಬ್ಯಾಕರ್ರವರ ಕೊಲೆಯ ಸುತ್ತ ಸುಳಿಯುತ್ತದೆ ಈ ಕತೆ. ಹೂ…! ವೈಜರ್ ಮತ್ತು ತನ್ನ ಸೈನ್ಯ. ಈ ಮಾತನ್ನು ವೈಜರ್ ನ್ಯೂಸ್ ಚಾನೇಲಿನ ಸಂದರ್ಶನದಲ್ಲಿ ಹೇಳಿದಾಗ, ನನ್ನ ಓದು ಅಲ್ಲಿಗೆ ನಿಂತು, ಒಮ್ಮೆ ಯೋಚಿಸಿದೇ. ಸೈನ್ಯವೇ? ಆ ಗಳಿಗೆ ನನ್ನ ನೆನಪುಗಳು ನಾನು ಅಲ್ಲಿಯವರೆಗು ನೋಡಿದ್ದ ರೋಚಕ ಸಿನಿಮಾಗಳ ಸುತ್ತ ಒಂದು ಪಯಾಣ ಮಾಡಿ ಬಂತು. ನಂತರ “ಓಹೋ!, ಬಹುಶಃ ಇದು Multi split personality ಇರಬೇಕು ಎಂದು ಊಹಿಸಿದೆ. ಆದರೇ ಇದು ಬ್ಯಾಕ್ಟೀರಿಯಾಗಳ ಕೈವಾಡ ಎಂಬ ಸತ್ಯದ ತಿರುವಿನಲ್ಲಿ ಸಿಕ್ಕಿಹಾಕಿಕೊಂಡಾಗ ಆದ ದಿಗ್ಭ್ರಮೆ ಅಚ್ಚಳಿಯದೆ ಕಣ್ಣೆದುರು ಸೆರೆಯಾಗಿದೆ.

ಆಗ ಕತೆಯಲ್ಲಿ ಬರುವ ಆಗಸ್ಟ್ 15 ದಿನಾಂಕದ ಕುರಿತು ಯೋಚಿಸಿದೆ. ನಮ್ಮ ಭಾರತಕ್ಕೆ ಅಗಸ್ಟ್ 15 ವೀರರೂ, ಸ್ವತಂತ್ರ ಹೋರಾಟಗಾರರು ತಮ್ಮ ಜೀವ ತ್ಯಾಗ ಮಾಡಿ, ಬ್ರಿಟಿಷರಿಂದ ಮುಕ್ತಿ ನೀಡಿದ ದಿನವಾದರೇ. ನ್ಯೂಯಾರ್ಕಿನಲ್ಲಿ ವೈಜರ್ ತನ್ನ ಜೀವಾಣುಗಳ ತ್ಯಾಗ ಮಾಡಿ ಕಾರ್ಲೋಸಿಗೆ ಮನೋರೋಗದಿಂದ ಮುಕ್ತಿ ನೀಡಲು ಪ್ರಾರಂಭಿಸಿದ ದಿನ. ದಿನಾಂಕದಲ್ಲಿ ಅದೆಷ್ಟು ಚಂದದ ನಂಟಿದು!

ನಮ್ಮೊಳಗೆ ಕೋಟಿ ಕೋಟಿ ಜೀವಾಣುಗಳ ಇಷ್ಟು ದೊಡ್ಡ ಸಾಮ್ರಾಜ್ಯವಿದೆಯೇ? ಅವುಕ್ಕೆ ನಾವು, ನಮಗೆ ಅವು ಆಶ್ರಯವಾಗಿ ಬದುಕುತ್ತಿದೇವ? ಎಂಬ ಆಶ್ಚರ್ಯದಲ್ಲಿ ಮುಂದೆ ಓದುತ್ತ ಹೋದಂತೆ, ನಮ್ಮೊಳು ಮೂಡುತ್ತಿದ್ದ ಪ್ರಶ್ನೆಗಳನ್ನೆ, ಡಾ|| ಕ್ಯಾಥರೀನ್, ಪಾದ್ರಿ , ಇನ್ನು ಹಲವರು ಕೇಳಿದಂತೆ, ಅದಕ್ಕೆ ಪ್ರತ್ಯುತ್ತರವು ಸಿಕ್ಕಿದಂತ ಸಮಧಾನವಾಗುತ್ತಿದಂತೆ, “ವಸುದೈವ ಕುಟುಂಬಕಂ”, ಸಮಸ್ತ ಭೂಮಂಡಲದ ಎಲ್ಲ ಜೀವಗಳು ಒಂದೇ ಕುಟುಂಬದ ಸದಸ್ಯರು ಎಂಬ ನವ ಆಯಾಮವೇ ಸೋಜಿಗ.

ಕತೆಯ ಕೊನೆ ಕೊನೆಯದಲ್ಲಿ, ಎಲ್ಲವು ಸುಗಮವಾಗಿ, ವೈಜರ್‌ಗು ನ್ಯಾಯ ದೊರಕಿ, ಎಲ್ಲವು ಪರಮಸುಖವಾದಾಗ, ವೈಜರ್ ಹೇಳುವ ಕೊನೆಯ ಮಾತು ” V ಗ್ರೂಪ್ ಇದ್ದರು ನಾನು ಪಾಪ ಮಾಡಿದ್ದೇನೆ ಅನಿಸುತ್ತದೆ” ಎಂಬ ಮಾತು ಅಷ್ಟು ವಿಜ್ಞಾನದ ತಿರುವುಗಳಲ್ಲಿ, ಆತ್ಮ ಸಾಕ್ಷಿಯ ಪರಿಚಯ ನೀಡಿ, ಕತೆಗೆ ಅಂತ್ಯದಲ್ಲಿ ನವ ಆರಂಭ ಹಾಡುತ್ತದೆ. ಪುನಃ ನಾನ್ನೊಳು “ಹೌದಲ್ಲವ?” ಎಂಬ ಪ್ರಶ್ನೆ ಮೂಡಿಸುತ್ತದೆ.

ಟೀವಿ ಚಾನೆಲಿನಲ್ಲಿ ಕ್ರೈಮ್ ನ್ಯೂಸ್ ನೋಡಿದಾಗ, ಇದು ಬ್ಯಾಕ್ಟೀರಿಯಾಗಳ ಕೈವಾಡವೇ ಇರಬೇಕು, ನಾನು ತಪ್ಪು ಮಾಡಿ ಅಮ್ಮ ಬೈಯುವಾಗ, “ಅಮ್ಮ ನನ್ನದಲ್ಲ ತಪ್ಪು, ನನ್ನ ಜೀವಾಣುಗಳದ್ದು” ಎಂದು ಹುಸಿ ನಗುವುದು, ಸ್ನೇಹಿತರು ಪರೀಕ್ಷೆಗೆ ಹೆದರುವಾಗ, ನಿನ್ನ ಕರುಳಿನಲ್ಲಿ ಹೀಗೆ ಆಗುತ್ತಿರಬಹುದು ಎಂದು ಪದೇ ಪದೇ ಅವರಿಗೆ ಹೊಕ್ಕಳ ಮೆದುಳಿನ ಕತೆ ಹೇಳುವುದು, ಇವೆಲ್ಲವು ನನಗೆ ಹೊಕ್ಕಳ ಮೆದುಳು ಸದಾ ಕಾಡುವುದು ಎಂಬುದಕ್ಕೆ ಸಾಕ್ಷಿ ಏನೊ?

ಸಾಹಿತ್ಯದೊಂದಿಗೆ ವಿಜ್ಞಾನವನ್ನು ಹೆಣೆಯುವ ಹಾಗೆ, ವಿದ್ಯಾರ್ಥಿಯ ಶಾಲೆ ಹಾಗೂ ಕಾಲೇಜಿನ ಪಠ್ಯಕ್ರಮದಲ್ಲಿ ಪ್ರತಿಯೊಂದು ಪಾಠವು ಕತೆಯ ರೂಪದಲ್ಲಿದ್ದರೇ ಅದೆಷ್ಟು ಚಂದ ಇರುತ್ತದೆ ಅಲ್ಲವಾ? ಹಾ..! ಈ ಕಾದಂಬರಿ ಓದಿದ ನಂತರ ನಾನು ಶಿಲ್ಪ ಅಲ್ಲ, ನಾವು ಶಿಲ್ಪ. ಜೀವಾಣುಗಳನ್ನು ಸೇರಿಸಿ 😅

ಶಿಲ್ಪ ಬಿ.
ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು
ಪ್ರಥಮ ಪಿ. ಯು. ಸಿ

Prev Post

‘ಮನೀಷಾ’ ವಾರ್ಷಿಕ ಸಂಚಿಕೆಗೆ ಅತ್ಯುತ್ತಮ ಮ್ಯಾಗಜಿನ್ ಗರಿ

Next Post

ಒಂಟಿತನವೆಂಬುದು ಶಾಪವಾದರೆ ದಿವ್ಯ ಏಕಾಂತವೇ ವರ | ಶಶಿಸ್ಕಾರ ನೇರಲಗುಡ್ಡ

post-bars

Leave a Comment

Related post