
ಡಾ. ಶ್ರೀಧರ್ ಎಚ್ ಜಿ ಅವರ ‘ಬಯಲು- ಅಲ್ಲಮನ ಕಥನ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ
Bengaluru: ಶರಣರ ಮಾರ್ಗದ ತಪಸ್ಸನ್ನು ವಚನದ ಮೂಲಕ ಕೊಟ್ಟವರು ಅಲ್ಲಮ ಪ್ರಭುಗಳು. ಎಲ್ಲಾ ವಚನಕಾರರಿಗೆ ಗುರುವಿನಂತಿದ್ದವರು ಅವರು. ಡಾ. ಶ್ರೀಧರ್ ಎಚ್ ಜಿ ಅವರ ‘ಬಯಲು – ಅಲ್ಲಮನ ಕಥನ’ ಕಾದಂಬರಿಯಲ್ಲಿ ಅಲ್ಲಮನೆಂಬ ಮಹಾನ್ ದಾರ್ಶನಿಕನ ಬೃಹತ್ ಆಕೃತಿ ಅಕ್ಷರ ರೂಪ ತಳೆದಿದೆ ಎಂದು ಚಿಂತಕ ಡಾ. ಜಿ.ಬಿ. ಹರೀಶ ಹೇಳಿದರು.
ಶೇಷಾದ್ರಿಪುರ ಸಂಜೆ ಕಾಲೇಜಿನ ಗೋಧೂಳಿ ಕನ್ನಡ ಸಂಘ ಮತ್ತು ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಸಹಯೋಗದಲ್ಲಿ ಶೇಷಾದ್ರಿಪುರ ಸಂಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಡಾ. ಶ್ರೀಧರ್ ಎಚ್ ಜಿ ಅವರ ‘ಬಯಲು- ಅಲ್ಲಮನ ಕಥನ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯಾಖ್ಯಾನಗಳ ರೂಪದಲ್ಲಿ, ಪ್ರವಚನಗಳ ರೂಪದಲ್ಲಿ ಅಲ್ಲಮಪ್ರಭುವಿನ ಕುರಿತು ಅದಾಗಲೇ ಸಾಹಿತ್ಯಗಳು ರಚಿತಗೊಂಡಿವೆ. ಆದರೆ ‘ಬಯಲು’ ಕಾದಂಬರಿಯ ರೂಪದಲ್ಲಿ ಸೃಜನಾತ್ಮಕವಾಗಿ ಮೂಡಿಬಂದಿದೆ. ಈ ಕಾದಂಬರಿಯಲ್ಲಿ ಇತಿಹಾಸದಲ್ಲಿರುವ ಅಲ್ಲಮ, ತಾತ್ತ್ವಿಕ ಹಾಗೂ ಪೌರಾಣಿಕದಲ್ಲಿ ಸಿಗುವ ಅಲ್ಲಮನ ಸಮನ್ವಯಗೊಳಿಸಲಾಗಿದೆ ಎಂದು ತಿಳಿಸಿದರು.
ಕಲಾವಿದನಾಗಿ ಅಲ್ಲಮನನ್ನು ಕಟ್ಟಿಕೊಟ್ಟ ಬಗೆ ಈ ಕಾದಂಬರಿಯ ವಿಶೇಷತೆ. ಕಲೆ ಮತ್ತು ತತ್ತ್ವಜ್ಞಾನ ಒಟ್ಟಿಗೆ ಹೋಗುತ್ತದೆ ಎನ್ನುವುದನ್ನು ಕಾದಂಬರಿ ನಿರೂಪಿಸಿದೆ. ಕಾದಂಬರಿಯಲ್ಲಿ ವಿದ್ವತ್ತು ಮತ್ತು ಪ್ರತಿಭೆಯ ಸ್ಪರ್ಶ ಅಚ್ಚೊತ್ತಿರುವುದು ಓದುಗರಿಗೆ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ಅವರು ಮಾತನಾಡಿ ಅಲ್ಲಮ ಶ್ರೇಷ್ಠ ದಾರ್ಶನಿಕ. ಅದ್ಭುತ ಜ್ಞಾನಿ. ಅನುಭವ ಮಂಟಪದ ಅಧ್ಯಕ್ಷನಾಗಿದ್ದ ಅಲ್ಲಮ ಜಗತ್ತಿನ ಶೇಷ್ಠ ದಾರ್ಶನಿಕರ ಸಭೆಗೂ ಅಧ್ಯಕ್ಷನಾಗುವಷ್ಟು ಸಮರ್ಥನಾಗಿದ್ದವನು. ಅವನ ಕುರಿತಾಗಿ ರಸವತ್ತಾಗಿ ಮೂಡಿಬಂದ ಕೃತಿ ‘ಬಯಲು’ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣತಜ್ಞ ನಾಡೋಜ ಡಾ. ವೂಡೇ ಪಿ ಕೃಷ್ಣ ಮಾತನಾಡಿ ಕಲಾ ವಿಭಾಗದ ಕುರಿತು ತೋರುತ್ತಿರುವ ತಾತ್ಸಾರವೇ ಸಮಾಜದಲ್ಲಿ ಇಂದು ನಡೆಯುತ್ತಿರುವ ಸಮಸ್ಯೆಗಳಿಗೆ ಕಾರಣ ಎಂದರು.
ಕಾರ್ಯಕ್ರಮದಲ್ಲಿ ಕಾದಂಬರಿಕಾರ ಡಾ. ಎಚ್. ಜಿ. ಶ್ರೀಧರ್, ಶೇಷಾದ್ರಿಪುರ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಮ್ ಎಸ್ ಸತೀಶ್, ಕನ್ನಡ ಉಪನ್ಯಾಸಕ ಸತ್ಯಮಂಗಳ ಮಹಾದೇವ ಉಪಸ್ಥಿತರಿದ್ದರು.