Back To Top

 ಚೋಮನ ದುಡಿಯ ಪುನರಾವಲೋಕನ | ಅನುಜ್. ವಿ. ತಿಕೋಟಿಕರ್

ಚೋಮನ ದುಡಿಯ ಪುನರಾವಲೋಕನ | ಅನುಜ್. ವಿ. ತಿಕೋಟಿಕರ್

1933ರಲ್ಲಿ ಶಿವರಾಮ ಕಾರಂತರು ಬರೆದ ‘ಚೋಮನ ದುಡಿ’ ಎನ್ನುವ ವಾಸ್ತವವಾದಿ ಕಾದಂಬರಿಯು ಆಗಿನ ಕಾಲದ ಒಂದು ಜಾತಿಯು ಮತ್ತೊಂದು ಜಾತಿಯನ್ನು ನಡೆಸಿಕೊಳ್ಳುತ್ತಿದ್ದ ಬಗೆಯನ್ನೂ, ಹಕ್ಕು ಹಾಗೂ ಕರ್ತವ್ಯ ಪ್ರಜ್ಞೆಯನ್ನೂ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಕುರಿತಾದ ಹಲವು ವಿಶಂಕೆಗಳನ್ನೂ, ಮತ-ಮತಗಳ ನಡುವಣ ಸಂಘರ್ಷವನ್ನೂ, ಪ್ರಮುಖವಾಗಿ ಬ್ರಿಟೀಷ್ ವಸಹಾತುಶಾಹಿ ಆಳ್ವಿಕೆಯು ಭಾರತದಲ್ಲಿನ ಜಾತಿ ವ್ಯವಸ್ಥೆ ಮೇಲೆ ಹೇಗೆಲ್ಲ ಪ್ರಭಾವ ಬೀರಿತೆಂಬುದನ್ನು ವಿವಿಧ ಪಾತ್ರಗಳ ವರ್ತನೆಗಳ ಮೂಲಕ ಮತ್ತು ಬೇರೆ ಬೇರೆ ಸಂದರ್ಭಗಳ ಮೂಲಕ ಚಿತ್ರಿಸುತ್ತದೆ.

ಆಗಿನ ವಸಾಹಾತುಶಾಹಿ ಕಾಲದ ಜಾತಿ ವ್ಯವಸ್ಥೆಯ ಕುರಿತಾದ ಕಾದಂಬರಿಯು ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಸಂವಿಧಾನದ ಮೂಲಕ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ರೂಪಿಸಿಕೊಂಡಿರುವ ಕಾಲದಲ್ಲಿ, ಅದರಲ್ಲಿಯೂ ಜಾಗತೀಕರಣದ ಪ್ರಭಾವದಿಂದ ಯುಗಪಲ್ಲಟಗೊಂಡಿರುವ ಮತ್ತು ನಿರಂತರವಾಗಿ ಪರಿವರ್ತಿತವಾಗುತ್ತಿರುವ ಚಲನಶೀಲ ಸಮಾಜವನ್ನು ಸಂದರ್ಶಿಸುತ್ತಿರುವ ಆಧುನಿಕ ತಲೆಮಾರಿಗೆ ಹೇಗೆ ಪ್ರಸಕ್ತವಾಗುತ್ತದೆ ಎನ್ನುವುದು ಸಹಜವಾಗಿ ಹುಟ್ಟುವ ಪ್ರಶ‍್ನೆ.

ಈ ಕಾದಂಬರಿಯ ಪ್ರಸ್ತುತಾನ್ವಯವು ಇದರಿಂದ ಹುಟ್ಟಿಕೊಳ್ಳುವ ಮೂಲಭೂತವಾದ ಮಾನವೀಯ ಮೌಲ್ಯಗಳ ಪ್ರಶ್ನೆಯಿಂದಲೇ ನಿರ್ಣಯವಾಗುತ್ತದೆ. ಇನ್ನೊಂದು ಪ್ರಮುಖಾಂಶವೆಂದರೆ, ಈ ಕಾದಂಬರಿಯನ್ನು ವಸಹಾತೋತ್ತರ ಸೈದ್ಧಾಂತಿಕ ಚೌಕಟ್ಟನ್ನು ದಾಟಿ ವಸಹಾತು-ರಹಿತ ಎಂಬ ದೇಸೀಯ ಸಿದ್ಧಾಂತದ ನೆಲೆಯಲ್ಲಿಯೇ ಪುನರಾವಲೋಕನ ಮಾಡುವುದರ ಅತ್ಯಗತ್ಯತೆಯೂ ಅನಿವಾರ್ಯತೆಯೂ ಬಂದಿದೆ.

ಅದೇಕೆಂದರೆ, ಪಾಶ್ಚಾತ್ಯ ಮಿತಿಗೊಳಪಟ್ಟ ಸೈದ್ಧಾಂತಿಕ ಚೌಕಟ್ಟಿನಲ್ಲಿ ಭಾರತದಲ್ಲಿನ ಅರ್ಥಮೂಲ ವರ್ಗಸಂಘರ್ಷವಲ್ಲದ ಜಾತಿ ಸಂಘರ್ಷವನ್ನರಿಯುವುದರಲ್ಲಿ, ವಿಶ‍್ಲೇಷಿಸುವುದರಲ್ಲಿ ಹಾಗೂ ಪರಿಹರಿಸುವುದರಲ್ಲಿ ಅನೇಕ ಹುರುಳು ಇರಲು ಅದೆಂದಿಗೂ ಸುಧಾರಣೆ ತಂದುಕೊಡಲಾರದೆಂಬುದಷ್ಟೇ ಅಲ್ಲ, ಅದರ ಜೊತೆಗೆ ಮತ್ತಷ್ಟು ಸಮಸ್ಯೆಗಳಿಗೆ ಎಡೆಮಾಡಬಲ್ಲದೆಂಬುದು ಗಮನೀಯ. ಪಾಶ‍್ಚಾತ್ಯ “ಮಾನವತಾವಾದ”, ಪಾಶ‍್ಚಾತ್ಯ “ಸಾರ್ವತ್ರಿಕವಾದ”, ವೋಕಿಸಂ, ಪಾಶ್ಚಾತ್ಯ ಪ್ರಮಾಣಬದ್ಧೀಕರಣ ಎಂಬ ಮೊದಲಾದ ವಸಾಹಾತುಶಾಹಿ ಅವ್ಯವಸ್ಥೆಯನ್ನು ವಿವಿಧ ರೀತಿಗಳಿಂದ ಮುಂದುವರಿಸುವ ಸಿದ್ಧಾಂತವನ್ನು ಮೀರಿ ನಮ್ಮದೇಯಾದ ದೇಸೀಯ ಮಾದರಿಯೊಂದನ್ನು ರೂಪಿಸಿ, ಆ ಮೂಲಕವೇ ಜಾತಿ ಪದ್ಧತಿಯನ್ನು ಪರಾಮರ್ಶಿಸಬೇಕಿದೆ, ಪರಿಹರಿಸಬೇಕಿದೆ.

ಒಂದೆಡೆಯಲ್ಲಿ ಸಂಪ್ರದಾಯವಾದಿಗಳೆಂದು ಎನಿಸಿಕೊಳ್ಳುವವರು ವಸಹಾತುಶಾಹಿ ಪ್ರಭಾವಿತ ತರಾತಮ್ಯವನ್ನು ಬಿತ್ತುವ ಜಾತಿವ್ಯವಸ್ಥೆಯನ್ನು ತಮ್ಮ ಸಂಸ್ಕೃತಿಯ ಮೂಲಸ್ವರೂಪವೆಂದು ತಿಳಿದು, ಆ ಸೀಮನವನ್ನು ದಾಟದೇ ಅದನ್ನೆ ಮುಂದುವರಿಸುವುದರಲ್ಲಿ ಆಸಕ್ತರಾಗಿದ್ದರೆ, ಮತ್ತೊಂದೆಡೆಯಲ್ಲಿ ಪ್ರಗತಿಪರರೆಂದು ಎನಿಸಿಕೊಳ್ಳುವವರು ವಸಹಾತು-ರಹಿತ ಸಿದ್ಧಾಂತವನ್ನು ಅರಿತುಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಚೋಮ ಎನ್ನುವವನು ಅಸ್ಪೃಶ್ಯಜಾತಿಗೆ ಸೇರಿದವನಾಗಿದ್ದು ತಾನು ವ್ಯವಸಾಯ ಮಾಡಬೇಕೆಂಬ ಆಸೆಯನ್ನು ಹೊತ್ತಿಕೊಂಡಿದ್ದವನು ಕೊನೆಗೂ ಆ ಆಸೆಯನ್ನು ಪೂರೈಸಿಕೊಳ್ಳಲಾಗದೆ ಸತ್ತುಹೋದನೆಂಬ ಕತೆಯನ್ನೊಳಗೊಂಡ ಈ ಕಾದಂಬರಿಯನ್ನು ಹೊಸ ಬಗೆಯ ಆಯಾಮಗಳಿಂದ ಪರಾಮರ್ಶಿಸೋಣ.

ಮೊದಲನೆಯದಾಗಿ ಆರ್ಥಿಕ ನೆಲೆಯಿಂದ ನೋಡೋಣ. ಕೆ.ವಿ. ರಂಗಸ್ವಾಮಿಯವರ ‘Ancient Indian Economic Thought’ ಎನ್ನುವ ಕೃತಿಯಲ್ಲಿ ಭಾರತದ ದಾಸ್ಯತ್ವ ವ್ಯವಸ್ಥೆಯು ಪಾಶ್ಚಾತ್ಯ ದೇಶಗಳಿಗಿಂತ ಹೇಗೆ ಭಿನ್ನವಾಗಿತ್ತೆಂಬುದನ್ನು ವಿಸ್ತೃತವಾಗಿ ವಿವರಿಸುತ್ತಾ ಹೀಗೆ ಹೇಳಿದ್ದಾರೆ- “ The chief economic feature of Indian slavery is that the slave is treated as a member of the family and is entitled to the inviolability of his person and cannot be set to do menial and degrading work…. The Indian slave was a more hereditary domestic servant than a slave in a western sense. One way in which his servitude pressed on him was his inability to own property and to use his personal earnings. Sometimes, the slave born in the owner’s house was better than that of hired free-laborers. Slavery did not breed any race contempt, conquest on the subjection of men of one to those of another, as it did in America.” ಹಾಗಾಗಿ ಹಲವಾರು ಕಾರಣಗಳಿಂದ ಪಾಶ‍್ಚಾತ್ಯ ದಾಸ್ಯತ್ವ ವ್ಯವಸ್ಥೆಯ ನಿಟ್ಟಿನಲ್ಲಿ ಭಾರತದಲ್ಲಿದ್ದ ಗುಲಾಮಗಿರಿ ಪದ್ಧತಿಯನ್ನು ವಿಶ‍್ಲೇಷಿಸುವುದು ಸಮಂಜಸವಾಗಲಾರದು.

ಈ ಮೇಲಿನ ಕೆಲವು ಮಾಹಿತಿಗಳಿಂದ ನಾವು ಚೋಮನು ಎದುರಿಸಿದ ಸಂದಿಗ್ಧ ಪರಿಸ್ಥಿತಿಗಳ ಕುರಿತು ಚಿಂತಿಸಿದಾಗ, ಆತನಿಗೆ ಎತ್ತುಗಳನ್ನು ಸಾಕಲು ಮಾತ್ರ ಅವಕಾಶವಿತ್ತೇ ಹೊರತು ಭೂಮಿಯ ಮೇಲೆ ಒಡೆತನವಿರಲಿಲ್ಲವೆಂಬುದು ವಿದಿತವಾಗುತ್ತದೆ. ಚೋಮನ ಧಣಿಯಾದ ಸಂಕಪ್ಪಯ್ಯನು ಆತನಿಂದ ಎತ್ತುಗಳನ್ನು ಎಂದಿಗೂ ಕಿತ್ತುಕೊಳ್ಳಲಿಲ್ಲವೆಂಬುದು ಚಿಂತನೀಯ ಸಂಗತಿ. ಅಷ್ಟೇ ಅಲ್ಲದೆ, ಚೋಮನ ಬದುಕಿನಲ್ಲಿ ಹಲವು ಬಗೆಯ ಆರ್ಥಿಕ ಆಪತ್ತುಗಳು ಬಂದಾಗಲೆಲ್ಲಾ ಧಣಿಯು ಅವುಗಳಿಂದ ಬಂಧಮುಕ್ತಮಾಡಲು ಸಹಾಯಮಾಡಬೇಕಾಗುತ್ತಿತ್ತು (ಆದರೆ ಹೊಲೆತನದಿಂದಲ್ಲ).

ಭಾರತೀಯ ಆರ್ಥಿಕ ದೃಷ್ಟಿಕೋನದ ಮೂಲಕ ಗುಲಾಮಗಿರಿ ವ್ಯವಸ್ಥೆಯನ್ನು ಪರಿಶೀಲಿಸಿದಾಗ, ಬದುಕಿನಲ್ಲಿ ಓರ್ವನು ಆರ್ಥಿಕ ಅಭಾವದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾಗ, ಅದರಿಂದ ಬಿಡಿಸಿಕೊಳ್ಳಲು ಭೂಮಾಲೀಕನ ಬಳಿಗೆ ಹೋಗಿ ತನ್ನನ್ನು ತಾನು ಮಾರಿಕೊಳ್ಳಬಹುದಾಗಿತ್ತು. ಹೀಗಿರುವಾಗ ಧಣಿಯ ಋಣಕ್ಕೆ ಗುಲಾಮನು ಬಂಧಿತನಾಗುತ್ತಿದ್ದನು. ಹೀಗೆ ಹಲವಾರು ಕಾರಣಗಳಿಂದ ತಲೆಮಾರಿನಿಂದ ತಲೆಮಾರಿಗೆ ದಾಸ್ಯತ್ವ ಪದ್ಧತಿಯು ರೂಪಗೊಂಡಿತು.

ನಂತರದಲ್ಲಿ ಜಾತಿವ್ಯವಸ್ಥೆಯು ಮತ್ತಷ್ಟು ಜಟಿಲವಾಯಿತು. ಪಿ.ಎಸ್.ಜೋಶಿಯವರು’ Cultural History Of Ancient India’ ಎಂಬ ಕೃತಿಯಲ್ಲಿ ಭಾರತದಲ್ಲಿದ್ದ ದಾಸ್ಯತ್ವ ವ್ಯವಸ್ಥೆಯ ಕುರಿತು ಇಂತೆಂದಿದ್ದಾರೆ- “ In the ancient Indian society the slaves were also bought, given away or mortaged by their owners whenever they were in difficulties. A free man could sell himself as a slave along with his family in times of distress. A person also became a slave when he had incurred debts which he could not re-pay.” ಪ್ರಾಚೀನ ಭಾರತದಲ್ಲಿದ್ದ ವಿಕೇಂದ್ರೀಕೃತ ಜಾತಿ ವ್ಯವಸ್ಥೆಯು ವಸಹಾತುಶಾಹಿ ಕಾಲದಲ್ಲಿ ಕೇಂದ್ರೀಕೃತ ವ್ಯವಸ್ಥೆಯಾಗಿ ಮಾರ್ಪಟ್ಟಿತು. ಈ ಸಂಕೋಲೆಯಿಂದ ಬಿಡಿಸಿಕೊಳ್ಳುವುದಕ್ಕಾಗಿಯೇ ಚೋಮನಿಗೆ ಸ್ವಾತಂತ್ರ್ಯದ ಹಂಬಲ ಕಾಡತೊಡಗಿದ್ದು.

ಭಾರತೀಯ ತತ್ವಶಾಸ್ತ್ರದ ನೆಲೆಯಲ್ಲಿ ಈಗ ಕಾದಂಬರಿಯನ್ನು ಅವಲೋಕಿಸೋಣ. ಎಂ. ಹಿರಿಯಣ್ಣನವರ ‘ಭಾರತೀಯ ತತ್ವಶಾಸ್ತ್ರದ ರೂಪರೇಖೆಗಳು’ ಎನ್ನುವ ಕೃತಿಯಲ್ಲಿ ಭಾರತೀಯ ದೃಷ್ಟಿಕೋನದಲ್ಲಿ ಹಕ್ಕು ಮತ್ತು ಕರ್ತವ್ಯಪ್ರಜ್ಞೆಯ ಕುರಿತು “ವ್ಯಕ್ತಿ ಮತ್ತು ಸಮಾಜಗಳ ನಡುವಣ ವ್ಯತ್ಯಾಸದ ಅರಿವಿದ್ದರೂ, ಹಕ್ಕುಗಳು ಮತ್ತು ಕರ್ತವ್ಯಗಳ ನಡುವಣ ವ್ಯತ್ಯಾಸವು ಸಾಧಕನಿಗೆ ಮಾಯವಾಗುತ್ತದೆ. ಅಷ್ಟರಮಟ್ಟಿಗೆ ಕರ್ತವ್ಯಪಾಲನೆಯ ಮೂಲಪ್ರೇರಣೆಯು ಸಾಮಾನ್ಯ ದೃಷ್ಟಿಗಿಂತ ಮೇಲೇರಿದಂತಾಗುತ್ತದೆ. ಈ ಎರಡೂ ದೃಷ್ಟಿಗಳ ಉದ್ದೇಶ ಹಕ್ಕು ಮತ್ತು ಕರ್ತವ್ಯಗಳನ್ನು ಎಷ್ಟೇ ಕಠಿಣವಾಗಲಿ, ಸೂಕ್ಷ್ಮವಾಗಲಿ, ಪರಸ್ಪರ ಸಮನ್ವಯಗೊಳಿಸುವುದಷ್ಟೇ ಅಲ್ಲ; ಸಂಪೂರ್ಣ ತ್ಯಾಗದಿಂದ ನೈತಿಕ ಜಗತ್ತಿನ ಸ್ವರೂಪವು ಮೀರಲ್ಪಡುತ್ತದೆ” ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಬರೀ ಹಕ್ಕನ್ನು ಕೊಟ್ಟು ಕರ್ತವ್ಯನಿಷ್ಠೆಯು ದಮನವಾದಾಗ, ಚೋಮನು ಮತ್ತೊಂದು ಬಗೆಯ ತರತಮಭಾವದೊಂದಿಗೆ ಮುಂದೊಂದು ದಿನ ತನ್ನ ಆಳುಗಳನ್ನು ಶೋಷಿಸಬಲ್ಲ ಎಂಬುದು ಇನ್ನೊಂದು ಸಾಧ‍್ಯತೆ. ಹಾಗಾಗಿ ಕೇವಲ ಹಕ್ಕಿನ ನಿಟ್ಟಿನಲ್ಲಿ ಈ ಕಾದಂಬರಿಯನ್ನು ಅವಲೋಕಿಸುವುದು ಏಕಮುಖ ಚಿಂತನೆ. ಕರ್ತವ್ಯಪ್ರಜ್ಞೆಯನ್ನು ದಮನಮಾಡಿ ಬರೀ ಹಕ್ಕನ್ನು ನೀಡಿದಾಗ ಸಮಾಜದಲ್ಲಿ ಯಾಂತ್ರಿಕ ಐಕ್ಯತೆ ಕಂಡುಬರುತ್ತದೆ.

ಆಗ ಸಮಷ್ಟಿಯ ಹಿತಕ್ಕಿಂತಲೂ ವ್ಯಕ್ತಿಯ ಹಿತವೇ ಹೆಚ್ಚು ಪ್ರಾಧಾನ್ಯವಾಗುತ್ತದೆ ಮತ್ತು ಅದು ಅತಿಯಾದ ಪೈಪೋಟಿಗೆ ಅನುವುಮಾಡಿದಂತಾಗುತ್ತದೆ. ಸ್ವಾತಂತ್ರ್ಯದ ಹಂಬಲ ಹೊಂದಿದ್ದ ಚೋಮನು ವ್ಯವಸಾಯದ ಕರ್ತವ್ಯಕ್ಕೆ ಎಷ್ಟು ಯೋಗ್ಯನೆಂಬುದು ವಸ್ತುತಃ ಸ್ವಧರ್ಮದ ಪ್ರಶ್ನೆ. ಹೀಗೆಂದ ಮಾತ್ರಕ್ಕೆ ಅವನು ಹಕ್ಕಿನಿಂದ ವಂಚಿತನಾಗಬೇಕೆಂದಲ್ಲ, ಆದರೆ ಸ್ವಭಾವ ಪರಿಶೀಲನೆ ಯಾಗದೆ ಹಕ್ಕನ್ನು ನೀಡುವುದೆಷ್ಟು ಸರಿ ಎಂಬುದು ವಿಚಾರನೀಯವಾದ್ದದ್ದು. ಭಗವದ್ಗೀತೆಯ ಮೋಕ್ಷ ಸನ್ಯಾಸ ಯೋಗದಲ್ಲಿ ಒಂದು ಶ್ಲೋಕ ಹೀಗಿದೆ- ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್। ಸ್ವಭಾವನಿಯತಂ ಕರ್ಮ ಕುರ್ವನ್ ನಾSಪ್ನೋತಿ ಕಿಲ್ಬಿಷಮ್ ॥೪೭॥ ಹಾಗಾಗಿ, ಈ ಶ್ಲೋಕದ ಅನುಸಾರವಾಗಿ ಮೂಲತಃ ಸ್ವಧರ್ಮಾನುಸಾರ ಯಾರು ಸ್ವಕರ್ಮವೇ ಮಾಡುತ್ತಾರೆಯೋ ಮತ್ತು ಅದರಲ್ಲಿಯೇ ಪ್ರಾಮಾಣಿಕತೆಯಿಂದ ಅಭಿರತರಾಗಿರುತ್ತಾರೆಯೋ ಅವರು ಸಂಸಿದ್ಧಿಯನ್ನೂ, ವ್ಯಕ್ತಿತ್ವಕ್ಕೆ ತೊಡಕಾಗದಂತೆ ಪರಿಪೂರ್ಣತ್ವವನ್ನು ಪಡೆಯುತ್ತಾರೆ ಎಂಬುದನ್ನು ನಿಷ್ಕರ್ಷೆ ಮಾಡಿಕೊಳ್ಳಬಹುದು.

ಇನ್ನೊಂದು ಪ್ರಮುಖವಾದ ತಾತ್ವಿಕ ಪ್ರಶ್ನೆ ಏನೆಂದರೆ, ಪಾಶ್ಚಾತ್ಯರು ಹೇಳಿದಂತೆ ಭಾರತದ ಜಾತಿ ವ್ಯವಸ್ಥೆಯು ವಸ್ತುತಃ ಅಮಾನವೀಯ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯೇ? ಇದಕ್ಕೆ ಉತ್ತರಿಸುವ ಮೊದಲು ವಸ್ತು ತಂತ್ರ ಮತ್ತು ಪುರುಷ ತಂತ್ರಗಳ ಬಗ್ಗೆ ತಿಳಿಯುವುದು ಅಗತ್ಯ. ಸತ್ಯ, ಅಹಿಂಸೆ, ದಯೆ ಮೊದಲಾದ ಸಾಮಾನ್ಯಧರ್ಮದ ತತ್ವಗಳನ್ನು ವಸ್ತುತಂತ್ರವೆಂದು ಕರೆಯುತ್ತೇವೆ.

ಜಾತಿ, ಆರಾಧನೆ, ಮತ, ವ್ಯವಹಾರ, ಕಾನೂನಿನ ನಿಯಮಗಳು, ಲೋಕನೀತಿ ಮುಂತಾದ ವಿಶಿಷ್ಟ ಧರ್ಮದ ಅಂಶಗಳನ್ನು ಪುರುಷತಂತ್ರವೆಂದು ಕರೆಯುತ್ತೇವೆ. ಜಾತಿ ವ್ಯವಸ್ಥೆಯಲ್ಲಿರುವ ದೋಷವನ್ನು ಪುರುಷತಂತ್ರದ ದೋಷವೆಂದೇ ಪರಿಭಾವಿಸಬೇಕೇ ಹೊರತು ಅದನ್ನು ವಸ್ತುತಂತ್ರದ ಅಥವಾ ಸಾಮಾನ್ಯಧರ್ಮದ ದೋಷವೆಂದು ಸರ್ವಥಾ ಹೇಳಲಾಗದು. ಬೇರೊಂದು ಮಾತುಗಳಲ್ಲಿ ಹೇಳುವುದಾದರೆ ಸಾರ್ವತ್ರಿಕವಾಗಿ ಜಾತಿ, ಕುಲ, ಪಂಥ, ಮತ ಇವುಗಳ ಭೇದವಿಲ್ಲದೆ ಸರ್ವದಾ ಸರ್ವಥಾ ಅನ್ವಯವಾಗುವ ವಸ್ತು ತಂತ್ರವೇ ಪ್ರಧಾನವಾಗಿದ್ದು, ವಸ್ತುತಂತ್ರದ ಉಲ್ಲಂಘನೆಯಿಂದಲೇ ಪುರುಷತಂತ್ರದಲ್ಲಿ ದೋಷ ಉಂಟಾಗುತ್ತದೆ ಎಂಬುದು ಗ್ರಾಹ್ಯವಾಗತಕ್ಕ ತಾತ್ವಿಕ ವಿಚಾರ. ಆದುದರಿಂದಲೇ ಧರ್ಮಮೂಲ ಜಾತಿ ಸಂಘರ್ಷವೆಂಬುದು ಅರ್ಥಮೂಲ ವರ್ಗ ಸಂಘರ್ಷಕ್ಕಿಂತಲೂ ಭಿನ್ನವಾದದ್ದು. ಈ ವಸ್ತುತಂತ್ರದ ನೆಲೆಯಲ್ಲಿಯೇ ಚೋಮನಾಗಲಿ ಸಂಕಪ್ಪಯ್ಯನಾಗಲಿ ವರ್ತಿಸಿದರೆ ಮಾತ್ರ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಉಂಟಾಗುತ್ತದೆ ಎಂಬುದು ಇತ್ಯರ್ಥವಾಗುತ್ತದೆ. ಡಾ. ಹೆಚ್. ಎಸ್. ಸಿನ್ಹಾರವರು ‘Communism and Geeta’ ಎನ್ನುವ ಕೃತಿಯಲ್ಲಿ ಹೀಗೆ ಹೇಳಿದ್ದಾರೆ- “the day when man is reduced to robot to act in a perfectly uniform manner, will be an unfortunate day and then, it would be a society of robots not of human beings. For human society, the variegated taste and temperaments, the individual differences in talent and aptitude must be honoured”(Pg 155,156). ಚೋಮನಿಗೆ ನಾಲ್ಕಾರು ಎಕರೆ ಭೂಮಿಯನ್ನು ಬೇಸಾಯ ಮಾಡಲು ಕೊಟ್ಟ ಮಾತ್ರಕ್ಕೆ ಸಮಸ್ಯೆಯು ಪರಿಹರಿಸುವುದಿಲ್ಲವೆಂಬುದನ್ನು ಈ ಮೇಲಿನ ಮಾತುಗಳಿಂದ ಅರಿತುಕೊಳ್ಳಬಹುದು.

ಇನ್ನು ಭಾರತದ ಜಾತಿಭೇದದ ಸಮಸ್ಯೆಯನ್ನು ಬ್ರಿಟಿಷರು ಹೇರಿದ ‘caste=racial hierarchy’ ಎಂಬ ಒಡೆದಾಳುವ ನೀತಿಯಿಂದ ಬೇರ್ಪಡಿಸಿ ವಿಶ್ಲೇಷಿಸುವುದರವರೆಗೂ ದೇಶೀಯ ಚಿಂತನೆಯ ಮೂಲಕ ಸಮಾಜವನ್ನು ಮರುಕಟ್ಟಲು ಸಾಧ್ಯವಾಗದು. ಒಂದು ಜಾತಿಯು ಎದುರಿಸುತ್ತಿದ್ದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಇಡೀ ಭಾರತಕ್ಕೆ ಏಕರೂಪವಾಗಿ ಅನ್ವಯಿಸಿ, ಭಾರತದಲ್ಲಿದ್ದ ವೈವಿಧ್ಯತೆಯು ಸಾಮಾಜಿಕ ದಬ್ಬಾಳಿಕೆಯಿಂದಲೇ ರೂಪಿತವಾದದ್ದು ಎನ್ನುವುದು ಪಾಶ್ಚತ್ಯರ ಸೀಮಿತ ಪರಿಕಲ್ಪನೆ. ಶ್ರೀ ರಾಜೀವ ಮಲ್ಹೋತ್ರಾರವರು ತಮ್ಮ ‘ವರ್ಣ, ಜಾತಿ ಮತ್ತು ಕ್ಯಾಸ್ಟ್’ ಎನ್ನುವ ಕೃತಿಯಲ್ಲಿ ಬ್ರಿಟಿಷರು ಯಾವ ರೀತಿಯಲ್ಲಿ ಜಾತಿ ಪದ್ಧತಿಯನ್ನು ಪಾಶ್ಚಾತ್ಯರ ನೆಲೆಯಲ್ಲಿಯೇ ವಿಶ್ಲೇಷಿಸಿ, ಪಾಶ್ಚಾತ್ಯರ ವಸಹಾತುಶಾಹಿ ಸಿದ್ಧಾಂತವನ್ನು ಹೇರಿದರೆಂಬುದನ್ನು ಪ್ರಸ್ತಾಪಿಸುತ್ತಾ, ಲಾರ್ಡ್ ರಿಸ್ಲೆ ಮತ್ತು ಲಾರ್ಡ್ ಚಾರ್ಸಲೆ ಭಾರತದ ಜಾತಿ ವ್ಯವಸ್ಥೆಯನ್ನು ಕ್ಯಾಸ್ಟ್ ಸಿಸ್ಟಮ್ ಆಗಿ ಮಾರ್ಪಡಿಸಿದರು ಎನ್ನುವುದಕ್ಕೆ ದಾಖಲೆ ನೀಡಿದ್ದಾರೆ. ಚಾರ್ಲ್ಸೆ ಹೀಗೆ ಹೇಳುತ್ತಾನೆ- “untouchability” thus suppressed diversity and variation and set up a uniform and highly simplified structure in terms of which Indian society was to be understood”.(Varna, jati, caste, pg.82)

ಮತ್ತೊಂದು ಪ್ರಶ್ನೆ ಏನೆಂದರೆ, ಚೋಮನು ಒಂದಿಷ್ಟು ಭೂಮಿಯನ್ನು ಖರೀದಿಸುವ ಅವಕಾಶ ಕ್ರೈಸ್ತ ಮತಕ್ಕೆ ಮತಾಂತರವಾದರೆ ಲಭಿಸುತ್ತದೆ ಎಂಬುದನ್ನು ತಿಳಿದಿದ್ದರೂ, ಮತಾಂತರವಾಗದೇ ಇರಲು ಕಾರಣವೇನು? ಮತಾಂತರಗೊಳ್ಳುವುದಕ್ಕೆ ಆತನು ಏಕೆ ಹಿಂಜರಿಯುತ್ತಾನೆ? ತನ್ನ ಒಬ್ಬ ಮಗನಂತೆ ತಾನು ಕ್ರೈಸ್ತಮತಕ್ಕೆ ಮತಾಂತರವಾಗಬಹುದಿತ್ತಲ್ಲ? ಚೋಮನು ಮತಾಂತರವಾಗಿದ್ದರೆ ಜಾತಿ ಸಮಸ್ಯೆಯು ಪೂರ್ಣಪ್ರಮಾಣದಲ್ಲಿ ಬಗೆಹರಿಯುತ್ತಿತ್ತು ಎಂಬುದು ದಿಟವೇ? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಒಂದು ವೇಳೆ ಕ್ರೈಸ್ತಮತಕ್ಕೆ ಚೋಮನು ಮತಾಂತರವಾಗಿಬಿಟ್ಟಿದ್ದರೆ, ತ್ವರಿತ ಫಲಿತಾಂಶ ಸಿಗುತ್ತಿತ್ತೇ ಹೊರತು ಸಮುದಾಯಿಕ ದೃಷ್ಟಿಯಿಂದ ಅದು ಪರಿಪೂರ್ಣ ಪರಿಹಾರವೆಂದೆಸಿಕೊಳ್ಳಲಾರದು. ವಸಾಹತುಶಾಹಿಗೂ ಮತ್ತು ಮತಾಂತರಕ್ಕೂ ಇರುವ ನೇರ ಸಂಬಂಧವನ್ನು ಕುರಿತು ಡಾ. ಅಂಬೇಡ್ಕರ್ ಅವರು ಇಂತೆಂದಿದ್ದಾರೆ- “if the depressed classes join Islam or Christianity, they not only go out of Hindu religion but they also go out of the Hindu culture…conversion to Islam or Christianity will denationalise the depressed classes”( Writings and speeches, Vol. 17. Pg- 240-241). ಈ ನಿಟ್ಟಿನಲ್ಲಿ ಬಾಹ್ಯಕಾರಣಗಳಿಗಾಗಿ ಮತಾಂತರಗೊಂಡರೆ, ಅದು ಸಾಮಾಜಿಕ ಪರಿವರ್ತನೆಗೆ ಒಣ ಸೂತ್ರ ಮಾತ್ರವಾಗಿರುತ್ತದೆ.

ಒಟ್ಟಾರೆ ಈ ಲೇಖನದ ಮೂಲಕ ನನ್ನ ಅಲ್ಪ ತಿಳುವಳಿಕೆಯಿಂದ ಹೇಳಲು ಪ್ರಯತ್ನಿಸುವುದು ಇಷ್ಟನ್ನೇ- ಇನ್ನಾದರೂ ವಸಾಹತೋತ್ತರ ಸೈದಾಂತಿಕ ಚೌಕಟ್ಟನ್ನು ದಾಟಿ ದೇಶೀಯ ಚಿಂತನೆಯನ್ನು ಮೈಗೂಡಿಸಿಕೊಂಡು, ಜಾತಿ ವ್ಯವಸ್ಥೆಯನ್ನು ಹೊಸ ಬೆಳಕಿನಲ್ಲಿ ಬಹುಮುಖೇನವಾಗಿ ತುಲನಾತ್ಮಕ ಅಧ್ಯಯನ ಮಾಡುವುದರ ಮೂಲಕ ಪರಾಮರ್ಶಿಸಬೇಕಿದೆ. ಪಾಶ್ಚತ್ಯ ಸಿದ್ಧಾಂತಗಳಿಗೆ ವಿಭಿನ್ನವಾದ ಪರ್ಯಾಯ ವ್ಯವಸ್ಥೆಯೊಂದನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕಿದೆ ಎನ್ನುವುದೇ ಈ ಲೇಖನದ ತಾತ್ಪರ್ಯ.

ಅನುಜ್. ವಿ. ತಿಕೋಟಿಕರ್
ಬಿ. ಎ. ವಿದ್ಯಾರ್ಥಿ
ನ್ಯಾಷನಲ್ ಪದವಿ ಕಾಲೇಜು, ಬಸವನಗುಡಿ

Prev Post

Superhero ಅಪ್ಪ | ಲಿಖಿತಾ. ಎಂ

Next Post

ಹಣೆಬರಹ ತಿಳಿದವರ್ಯಾರು! | ಸುಶ್ಮಿತಾ ಹೆಗ್ಡೆ

post-bars

4 thoughts on “ಚೋಮನ ದುಡಿಯ ಪುನರಾವಲೋಕನ | ಅನುಜ್. ವಿ. ತಿಕೋಟಿಕರ್

Ravi kumarsays:

Well researched article.keep it up.you have given complete insight view about the book.

Reply
Vaishnavi Vijay Tikotikarsays:

Well written on caste system

Reply
Vijay Mohan Rao Tikotikarsays:

Supper Anuj

Reply

ಜಾತಿವ್ಯವಸ್ಠೆಯನ್ನು ಕುರಿತಾದ ಪ್ರಶಂಸನೀಯ ಲೇಖನ.

Reply

Leave a Comment

Related post