Back To Top

 ಏಕಾಂತ ತಿಳಿ ತಂಗಾಳಿಯೋ ಉರಿಯುವ ಜ್ವಾಲೆಯೋ | ಶ್ರವಣ್ ನೀರಬಿದಿರೆ

ಏಕಾಂತ ತಿಳಿ ತಂಗಾಳಿಯೋ ಉರಿಯುವ ಜ್ವಾಲೆಯೋ | ಶ್ರವಣ್ ನೀರಬಿದಿರೆ

ಹೊರಗಡೆ ಮಳೆ ಸುರಿಯಲು ತೊಡಗಿ ಸಮಯ ಬಹಳಷ್ಟಾಗಿದೆ. ತಿಳಿ ತಂಪು ವಾತವರಣದ ಹಿತವಾದ ಅಪ್ಪುಗೆಯನ್ನು ದೇಹ ಮನಸ್ಸು ಎರಡೂ ಅನುಭವಿಸುತ್ತಿದೆ. ಕೋಣೆಯಲ್ಲಿ ಏನೂ ಕೆಲಸವಿಲ್ಲದೆ ಕುಳಿತು ಕಣ್ಣುಗಳು ಹೊರಗಡೆ ದಿಟ್ಟಿಸುತ್ತಿದ್ದರೆ, ಮನಸ್ಸಿನ ಪರದೆಯಲ್ಲಿ ಯಾರದ್ದೊ, ಎಂದಿನದ್ದೊ ಸಿಹಿಯಾದ ನೆನಪುಗಳು ಸರಣಿಯಲ್ಲಿ ಚಲಿಸುತ್ತಿರುತ್ತವೆ. ಈ ನೆನಪುಗಳ ಸರಣಿ ಯಾರೂ ತಡಿಯುವವರಿಲ್ಲದೆ ನಿರಂತರವಾಗಿ ಓಡುತ್ತಿದ್ದರೆ. ಮನಸ್ಸು ಕೂಡ ಇದನ್ನೆ ಬಯಸಿ ಈ ಏಕಾಂತಕ್ಕಿಂತ ಬೇರೆ ಸುಖವುಂಟೇ ಎಂದು ಹಾಡುತ್ತಿರುತ್ತದೆ. ಇಲ್ಲಿ ಏಕಾಂತ ಒಂದು ಬೆಚ್ಚಗಿನ ಭಾವ. ಇನ್ಯಾರೊ ಬಂದು ಅಥವಾ ಇನ್ಯಾವುದೊ ಕಾರಣದಿಂದ ಈ ಸ್ಥಿತಿಯಲ್ಲಿ ವ್ಯತ್ಯಾಸವಾದರೆ ಅಮೂಲ್ಯವಾದದ್ದೇನೊ ಕಳೆದುಕೊಂಡಂತೆ. ಏಕಾಂತದ ಖುಷಿಯ ಸುಖವನ್ನು ಅನುಭವಿಸಿಯೆ ತಿಳಿಯಬೇಕು.

ಇದು ಏಕಾಂತದ ಸುಖದ ಮುಖದ ಪರಿಚಯವಾದರೆ, ಅದೇ ಏಕಾಂತ ನೀಡುವ ದುಃಖದ ತೀವ್ರತೆ ವಿಪರೀತ. ಬಸ್ಸಿನ ಕಿಟಕಿ ಬದಿಯಲ್ಲಿ ಕುಳಿತು, ಹಿಂದಕ್ಕೆ ಚಲಿಸುವ ಮರ ಗಿಡಗಳು ಕಟ್ಟಡಗಳನ್ನು ನೋಡುತ್ತಿದ್ದರೆ, ಮನಸ್ಸು ಕೂಡ ಹಿಂದಕ್ಕೆ ಚಲಿಸಿ ಗಾಢ ಕಹಿ ನೆನಪುಗಳನ್ನು ಬಿತ್ತರಿಸುತ್ತಾ ಕಣ್ಣಿನಲ್ಲಿ ಹನಿ ಇಳಿಸುತ್ತದೆ. ಪಕ್ಕದ ಸೀಟಿನಲ್ಲಿ ವಟಗುಟ್ಟುತ್ತ ಕುಳಿತಿರುವ ಅಜ್ಜನಿಗೂ ಮನಸ್ಸಿನ ಈ ಏಕಾಂತಕ್ಕೆ ಭಂಗ ತರಲಾಗುವುದಿಲ್ಲ. ಏಕಾಂತದಲ್ಲಿ ಅನುಭವಿಸುವ ದುಃಖದ ನೆನಪುಗಳೆ ಹಾಗೆ, ಮರೆಯದಂತೆ ಕಾಡುತ್ತವೆ. ಸುಖ ದುಃಖಗಳು ಎರಡೂ ಏಕಾಂತದಲ್ಲಿದ್ದು ಪರಿಸ್ಥಿತಿ ಮತ್ತು ಮನಸ್ಥಿತಿಗಳ ಅನುಗುಣವಾಗಿ ಇವೆರಡು ಪಾಲುದಾರರಾಗಿರುತ್ತವೆ.

ಏಕಾಂತ ಒಬ್ಬನದ್ದೆ ಆಗಿರಬೇಕೆಂದೇನಿಲ್ಲ. ಪ್ರೇಮಿಗಳ ನಡುವೆ ಏಕಾಂತದ ಸಂಜೆಗಳಿಗೆ ತುಂಬಾ ಮಹತ್ವವಿರುತ್ತದೆ. ಅಲ್ಲಿ ಇಬ್ಬರಿದ್ದೂ ಒಂದೇ ಆಗುವ ಭಾವ. ಅಲ್ಲಿ ಹೊಮ್ಮುವ ಭಾವ ತರಂಗ ಇಬ್ಬರ ಹೃದಯಗಳಲ್ಲಿ ಏಳಿಸುವ ಅಲೆಗಳ ಸದ್ದು ಆ ನೀರವ ಮೌನದಲ್ಲೂ ತೀವ್ರವಾದದ್ದು. ಇದೆ ಏಕಾಂತದ ಇದೇ ಮೌನ ಭಗ್ನ ಪ್ರೇಮಿಯಲ್ಲಿ ಉಂಟು ಮಾಡುವ ಭಾವ ದುಃಖ. ನೆನಪುಗಳ ನಿರಂತರ ದಾಳಿಯಿಂದ ಅವನಲ್ಲಿ ತತ್ತರ. ಈ ಏಕಾಂತದಲ್ಲಿ ಕವಿತೆಗಳೂ ಕವಿಗಳೂ ಹುಟ್ಟುತ್ತಾರೆ. ಅಲ್ಲಿ ಬರೆದ ಸಾಲುಗಳ ತೂಕವನ್ನು ಅಳೆಯುವುದು ಭಾವನೆಗಳ ಭಾರದಿಂದ.

ಇಳಿ ವಯಸ್ಸಿನಲ್ಲಿ ಇಳಿಸಂಜೆಯ ಏಕಾಂತ ಮುದಿ ದಂಪತಿಗಳಿಗೆ ಹಳೆಯ ಸಿಹಿಯನ್ನು ಮೆಲುಕು ಹಾಕುವ ಘಳಿಗೆಯಾದರೆ, ಸಂಗಾತಿ ಕಳೆದುಕೊಂಡ ಒಂಟಿ ಜೀವಗಳಿಗೆ ಏಕಾಂಗಿತನ ಅನಿವಾರ್ಯ ವೇದನೆ. ಸುತ್ತಲೂ ನೂರು ಜನರಿರಬಹುದು. ಆದರೂ ಮನಸ್ಸಿನ ಸ್ಥಿತಿಯಲ್ಲಿ ಏಕಾಂಗಿ. ಹೀಗೆ ಏಕಾಂತ ಒಮ್ಮೆ ಹಿತವಾದ ತಿಳಿಗಾಳಿಯಾದರೆ, ಮತ್ತೊಮ್ಮೆ ಉರಿಯುವ ಜ್ವಾಲೆ. ಕೆಲವೊಮ್ಮೆ ಆಯ್ಕೆ, ಕೆಲವೊಮ್ಮೆ ಅನಿವಾರ್ಯ, ಅನುಭವಿಸದೆ ಬಿಡಲು ಆಗದೆ ಇರುವ ಮನಸ್ಸಿನ ಸ್ಥಿತಿ.

ಶ್ರವಣ್ ನೀರಬಿದಿರೆ
ಪ್ರಥಮ ಎಂ.ಸಿ.ಜೆ
ಎಸ್. ಡಿ. ಎಮ್‌. ಕಾಲೇಜು, ಉಜಿರೆ

Prev Post

ಅರಿಕೆಗೆ ಸಿಕ್ಕ ಪ್ರಕೃತಿ ಸೌಂದರ್ಯ | ದಿವ್ಯಾ ಕೆ

Next Post

ಹಾಸ್ಟೆಲ್ ಅನ್ನೋದು ಸೆರೆಮನೆಯಲ್ಲ ಅದು ನೆನಪುಗಳ ಅರಮನೆ | ಸಂಜಯ್‌ ಚಿತ್ರದುರ್ಗ

post-bars

Leave a Comment

Related post