Back To Top

 ಅವಳಿಂದಲೇ ಕವಿಯಾದೆ ಇಂದು | ಹಣಮಂತ ಎಂ. ಕೆ

ಅವಳಿಂದಲೇ ಕವಿಯಾದೆ ಇಂದು | ಹಣಮಂತ ಎಂ. ಕೆ

ನಿಜದಿ ಅವಳಾರು.. ನನ್ನ ಆತ್ಮೀಯರೂ ಹುಡುಕಿದ್ದಾರೆ ಅವಳನ್ನು.. ಯಾರವಳು? ನಾನು  ಇಲ್ಲೇ ಹೇಳಲಾರೆ ನೀವೇ ಕಂಡುಕೊಳ್ಳಿ..!

ಒಬ್ಬ ಕವಿ ಅಥವಾ ಬರಹಗಾರನಾದವನಿಗೆ ಬರೆಯಲು ಸಾಕಷ್ಟು ವಿಚಾರಗಳು ಸಿಗುತ್ತವೆ. ಜಗದೆಲ್ಲ ನೋವನ್ನು ತನ್ನ ನೋವೆಂದು ತಿಳಿದು, ಎಲ್ಲ ಖುಷಿಯೂ ತನ್ನದೇ ಎಂದು ತಿಳಿದು ಬರೆಯುವವ ಜನರನ್ನು ಬೇಗ ಮುಟ್ಟಬಲ್ಲ ಬರಹಗಾರನಾಗುತ್ತಾನೆ. ಪ್ರಪಂಚದಾದ್ಯಂತ ಎಷ್ಟೋ ವಿಚಾರಗಳಿದ್ದರೂ ಸಾಮಾನ್ಯವಾಗಿ ಎಲ್ಲ ಕವಿಗಳು ಪ್ರೀತಿ ಬಗ್ಗೆಯೇ ಜಾಸ್ತಿ ಬರೆಯೋದು. ಆದರೆ ಆ ಕವಿಯ ಕಲ್ಪನೆಯ ಪ್ರೀತಿಗೂ, ಇಂದಿನ ವಾಸ್ತವ ಪ್ರೀತಿಗೂ ನಾಕ-ನರಕದಷ್ಟು ವ್ಯತ್ಯಾಸವಿದೆ. ಪ್ರೀತಿ ಎಂಬ ಪದಕ್ಕೆ ಯಾವುದೋ ಕ್ರಿಸ್ತ ಪೂರ್ವದ ಕಾಲದಲ್ಲಿ ಒಂದು ಅರ್ಥ ಇತ್ತು. ಆದರೆ ಈಗ ಇದರ ಅರ್ಥ ತೀರಾ ಅನರ್ಥವಾಗಿದೆ.

ಪ್ರೀತಿಯ ಸ್ನೇಹಿತರೇ, ಒಬ್ಬ ಬರಹಗಾರನನ್ನಾಗಿ ಓದುವ ನೀವುಗಳು ನನ್ನ ಒಪ್ಪಿರುವಿರಿ. ಆದರೆ ನಾನೂ ಜಾಸ್ತಿ ಈ ಪ್ರೀತಿಯ ಮೇಲೆ ಬರೆಯುವುದರಿಂದ ಬಹಳಷ್ಟು ಸಲ ನಾ ನಿಮ್ಮ ಕೆಲ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿ ಬರುತ್ತಿತ್ತು. ನೀವು ಸದಾ ಕೇಳುತ್ತಿದ್ದ ಪ್ರಶ್ನೆ, ಯಾರವಳು..? ಯಾರು ನಿಮ್ಮ ಹುಡುಗಿ..? ಏನ್ ಅವಳ ಹೆಸರು ಅಂತೆಲ್ಲಾ… ಜಾಸ್ತಿ ಜನರ ಮುಂದೆ ಹೇಳ್ಕೊಂಡಿಲ್ಲಾ, ಹೇಳ್ಕೊಂಡಿರೋರು ಯಾರೂ ನಂಬಿಲ್ಲಾ.

ಯಾಕೆ ಅಂದರೆ ಅವಳ ಅಸ್ತಿತ್ವ ನನ್ನ ಕನಸಲಿ ಮಾತ್ರ . ಹೌದು, ಅವಳು ಸ್ವಪ್ನ ಸುಂದರಿ. ಸುಮಾರು ಮೂರು ವರ್ಷ ನನ್ನ ಮೋಹಿನಿಯಂತೆ ಕಾಡಿದಾಕೆ. ಮೂರು ವರ್ಷಗಳಿಂದ ನನಗೆ ಅವಳ ಕನಸು ಆಗಾಗ ಬೀಳುತ್ತಲೆ ಇತ್ತು. ಆದರೆ ಕನಸಲ್ಲಿ ಎಚ್ ಡಿ ಕ್ವಾಲಿಟಿಲೀ ಕಾಣುತ್ತಿದ್ದ ಮುಖ ಎಚ್ಚರವಾದಾಗ ಸ್ವಲ್ಪೇ ಸ್ವಲ್ಪವೂ ನೆನಪಿರದಂತೆ ಮಾಯವಾಗುವುದು. ಅವಳ್ಯಾರು, ಅವಳು ಹೇಗಿರಬಹುದು ಒಂದು ಗೊತ್ತಿಲ್ಲ, ಆದರೆ ಅವಳು ನನ್ನ ಕನಸಲಿ ಬಂದು ಹೃದಯಕ್ಕೆ ಇಟ್ಟ ಕೊಳ್ಳಿಯಲೇ ನಾ ಕವಿಯಾದದ್ದೂ.

ಅವಳೆಡೆಗಿನ ಭಾವನೆಗಳನ್ನೆಲ್ಲ ಬರಹಕ್ಕಿಳಿಸುತ್ತಾ ಸಾಗಿದೆ. ಮುಂದೆ ಅವರಿವರ ಭಾವನೆಗಳಿಗೆ ನನ್ನ ಬರಹವ ಸುರಿದೆ. ಹೀಗೆ ಅವಳು ಯಾರೆಂಬುದು ಸಹ ತಿಳಿಯದೇ ಅವಳಿಂದ ಕವಿಯಾದ ಹುಚ್ಚು ಜಂಭ ನನಗೆ. ನನಗೆ ತುಸು ಹತ್ತಿರವೆನಿಸಿದವರೆಲ್ಲರಲ್ಲೂ ಅವಳನ್ನು ಹುಡುಕುತ್ತಿದ್ದೆ, ಆದರೆ ಅವಳ ಹೋಲಿಕೆ ಯಾರೊಂದಿಗೂ ಸರಿಹೋಗದೆ ಉಳಿಯುತ್ತಿತ್ತು ಸದಾ. ಆದರೂ ನಾ ಸದಾ ಧನ್ಯ ಆಕೆಗೆ. ಮರೆಯಲೀ ನಿಂತು ನನ್ನ ಕವಿಯಾಗಿಸಿದ ಕಾರಣಕೇ.

ಅನಿಸಿದ್ದು, ತಿಳಿದಿದ್ದನ್ನೆಲ್ಲ ಗೀಚಿ ಕವಿಯೇನೋ ಆದೆ. ಆದರೆ, ನನಗೆ ಪ್ರೀತಿ ಆದಾಗಲೇ ವಾಸ್ತವ ಪ್ರೀತಿಯ ನೋವು, ನಲಿವು, ಸಂಕಟ, ಹಿಂಸೆ, ಎಲ್ಲವೂ ಅರಿವಾದದ್ದು. ಒಬ್ಬ ಸಾಹಿತ್ಯಾಸಕ್ತ, ಓದುಗ, ಬರಹಗಾರನಾಗಿ ನಾ ಅರಿತಿದ್ದ ಪ್ರೀತಿಯೇ ಬೇರೆ. ಆದರೆ ವಾಸ್ತವವಾಗಿರುವುದೇ ಬೇರೆ. ಹೌದು, ತುಂಬಾ ದಿನಗಳಿಂದ ಈ ವಿಷಯದ ಕುರಿತು ಬರೆಯಬೇಕೆಂದುಕೊಂಡಿದ್ದ ನಾನು ಇಂದು ಒಂದು ತಪ್ಪೊಪ್ಪಿಕೊಳ್ಳುವೆ ಗೊತ್ತೋ ಗೊತ್ತಿಲ್ಲದೇಯೋ ನಿಮ್ಮಲ್ಲಿ ಪ್ರೀತಿಯ ಕುರಿತು ಭಾವನೆಗಳ ಬಿತ್ತುತ್ತಿರುವುದಕೆ, ಇಲ್ಲದ ಪ್ರೀತಿಯ ವೈಭವಿಕರಿಸುತ್ತಿರುವುದಕೆ.

ನನ್ನ ಬರಹಗಳು ಕೇವಲ ಸಾಹಿತ್ಯಕ್ಕಷ್ಟೇ ಸೀಮಿತ ನೈಜತೆಗೆ ಅಂಟಿಸಿಕೊಳ್ಳದಿರಿ. ಯಾಕೆಂದರೆ ಪ್ರೀತಿ ಎಂಬುದು ಇಂದಿನ ಕಾಲದಲ್ಲಿ ನೀವು ಎಷ್ಟು ಹುಡುಕಿದರೂ ಸಿಗದ ಮಾಯಾಮೃಗದಂತಾಗಿದೆ. ದುಡ್ಡಿಗಾಗಿ ಪ್ರೀತ್ಸೋರು, ಟೈಂ ಪಾಸಗಾಗಿ ಪ್ರೀತಿಸುವವರು, ಕಾಮಕ್ಕಾಗಿ, ಶೋಕಿಗಾಗಿ ಪ್ರೀತಿಸುವವರು ಪ್ರೀತಿ ಎಂಬ ಪದದ ಅರ್ಥ ಹಾಳುಮಾಡಿದ್ದು, ಇಂದಿನ ಜಗತ್ತಿನಲ್ಲಿ ಬರೀ ಅಂತಹದೇ ಪ್ರೀತಿ ತುಂಬಿದೆ. ನಿಷ್ಕಲ್ಮಶ ಪ್ರೇಮ ಬರೀ ಸಾಹಿತ್ಯ, ಕವಿಯ ಕಲ್ಪನೆ, ಹಳೆ ರಮೇಶ್ ಅರವಿಂದ್ ಫಿಲಂಗಳಲ್ಲಿ ಮಾತ್ರ ಉಳಿದಿದೆ.

ಈ ಜನರೇಶನ್‌ನಲ್ಲಿ ನೀವೇನಾದರೂ ಪವಿತ್ರ ಪ್ರೀತಿ ಹುಡುಕಿದರೇ ನಿಮ್ಮಷ್ಟು ದೊಡ್ಡ ಮುಟ್ಟಾಳಾ ಇನ್ನೊಬ್ಬನಿರುವುದಿಲ್ಲ. ಅದರಲ್ಲೂ ನೀವೇನಾದರೂ ಸೂಕ್ಷ್ಮ ಹೃದಯಿ ಆಗಿದ್ದರೆ ದಯವಿಟ್ಟು ದೂರ ಇರಿ ಈ ಪ್ರೀತಿ ಎಂಬ ಗೊಂದಲದಿಂದ. ನಿಮಗಾಗಿ ಮನೆಯಲ್ಲಿ ಅಪ್ಪಾ ಅಮ್ಮ ಸಾವಿರ ಕನಸುಗಳ ಕಟ್ಕೊಂಡು ಭರವಸೆಲೀ ನಿಮ್ಮ ಗೆಲುವಿಗಾಗಿ ಕಾದಿದ್ದಾರೆ. ಅವರ ನೆನೆಯುತ್ತಾ ನಿಮ್ಮ ನಿಮ್ಮ ಗುರಿಯತ್ತ ಸಾಗಿ, ಬದುಕು ಮುಖ್ಯ. ಪ್ರೀತಿ ಇದ್ದರೂ ಮದುವೆಯ ನಂತರಕ್ಕಿರಲೀ ಅಷ್ಟೇ. ಈ ಪ್ರೀತಿ ಎಂಬ ಮೋಸದಾಟದಲ್ಲಿ ಎಷ್ಟೋ ಜನರ ಹೆಣಗಳುರುಳಿದರೆ, ಇನ್ನೂ ಎಷ್ಟೋ ಜೀವಂತ ಶವಗಳು ಇದರ ಕ್ರೌರ್ಯಕ್ಕೆ ಸಾಕ್ಷಿಯಾಗಿ ಉಳಿದಿವೆ. ಅದಕ್ಕೆ ಒಬ್ಬ ಬರಹಗಾರನಾಗಿ ನಾ ತಪ್ಪೊಪ್ಪಿಕೊಳ್ಳುತ್ತಿರುವೆ ಕ್ಷಮಿಸಿ ಸ್ನೇಹಿತರೇ. ಇಂತಿ ನಿಮ್ಮ ಜನ್__ರೈಟರ್

ಹಣಮಂತ ಎಂ. ಕೆ
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು

Prev Post

ವಿದ್ಯಾರ್ಥಿ ಜೀವನ ಒಳ್ಳೆಯತನವನ್ನು ಒಳಗೊಳ್ಳುವ ಕಾಲ : ಡಾ. ಡಿ. ವೀರೇಂದ್ರ ಹೆಗ್ಗಡೆ

Next Post

ಒಮ್ಮೆ ನಕ್ಕು ಬಿಡಿ ಹಾಗೆ ಓದಿ ಬಿಡಿ ಸಾಕು | ಸಿಂಚನ ಜೈನ್‌

post-bars

Leave a Comment

Related post