ಜುಗಾರಿ ಕ್ರಾಸ್‌ನ ಗುಂಗಿನಲ್ಲಿ ಕೈ ತಪ್ಪಿದ ಜಂಗಮವಾಣಿ | ಚಿತ್ತ ಸಾಗರ್
ಬಸ್ಸಿನ ಕಂಡಕ್ಟರ್ “ಕಿಟಕಿ ಮುಚ್ರಿ” ಎಂದು ಗದರಿ ಎಚ್ಚರಗೊಳಿಸಿದರು. ಆಗ ನನಗೆ ನನ್ನ ಕಲ್ಪನಾ ಶಕ್ತಿಯಿಂದ ಸೃಷ್ಟಿಸಿ ಕೊಂಡಿದ್ದ ಲೋಕದಿಂದ ದಢಾರನೆ ವಾಸ್ತವಕ್ಕೆ ಬಂದಂತಾಯಿತು. ಎಚ್ಚರಗೋಳಿಸಲು ಬೇರೆಯವರಂತೆ ನಾನೇನು ನಿದ್ರೆಯಲ್ಲಿ ನಿರತನಾಗಿರಲಿಲ್ಲ. ಬದಲಿಗೆ ತೇಜಸ್ವಿಯವರ ಜುಗಾರಿ ಕ್ರಾಸ್ಸಿನ ಕವಲುದಾರಿಯಲ್ಲಿ ಕಳೆದುಹೋಗಿದ್ದೆ. ಹೊರಗೆ ಸುರಿಯುತ್ತಿದ್ದ ಮಳೆಯ ಎರಚಲಿನಿಂದಾಗಿ ಬಸ್ಸಿನ ಸೀಟ್‌ಗಳು ಹಾಳಾಗುವುದೆಂದು ಊಹಿಸಿ ಕಂಡಕ್ಟರ್ ಆ ರೀತಿ ಹೇಳಿರಬಹುದೇ? ವಿನಃ ನನ್ನ ಮೇಲಿನ ಕಾಳಜಿಗಲ್ಲ ಎಂದು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿದೆ.
ನನ್ನ ಕೈ ಬೆರಳುಗಳು ಪುಟದ ಒಂದಂಚಿನಿಂದ ಇನ್ನೊಂದಕ್ಕೆ ತೊಳಲಾಡುವುದು ಬಿಟ್ಟು ಜೇಬನಿಂದ ಫೋನ್ ತೆರೆದು ಸಮಯವ ನೋಡಿ ವಾಪಸ್ಸಿಟ್ಟಿತು. ಮಳೆ ನೀರಿನಿಂದ ಮುಸುಕಾದ ಕಿಟಕಿಯಿಂದ ಹೊರ ನೋಡಿದರೆ ಬಣ್ಣಬಣ್ಣದ-ತರತರದ ವಾಹನಗಳು ಸುತ್ತ ನಿಂತಿತ್ತು. ಕ್ಷಣಗಳಲ್ಲೇ ಅದು ಟೌನ್‌ಹಾಲ್ ಬಳಿ ಇದ್ದ ಸಿಗ್ನಲ್ ಎಂದು ತಿಳಿಯಿತು. ಹೇಗಾದರೂ ನಾನು ಓದುತ್ತಿದ್ದ ದೃಶ್ಯ ಭಾಗವನ್ನು ಮುಗಿಸಬೇಕೆಂಬ ಉದ್ವೇಗವು ಇಮ್ಮಡಿಸಿತು. ಕಥೆಯಲ್ಲಿ ಗೌರಿ ಮತ್ತು ಸುರೇಶ ರೈಲಿನಿಂದ ಹೊರ ಬೀಳುವಂತೆ ಎಲ್ಲರು ಇಳಿದ ನಂತರ ನಾನು ಕಂಡಕ್ಟರ್‌ನ ವಾರೆ ನೋಟಕ್ಕೊಳಗಾಗಿ ಬಸ್ಸಿನಿಂದ ಕೊನೆ ನಿಲ್ದಾಣವಾದ ಕೆ.ಆರ್. ಮಾರುಕಟ್ಟೆಯಲ್ಲಿ ಹೊರಬಿದ್ದೆ.
ನನ್ನ ಅಮ್ಮ ಕೂಡ ಅದೇ ಬಸ್ಸಿನಲ್ಲಿ ಮುಂದೆಯಿದ್ದ ಸೀಟಿನಲ್ಲಿ ಪ್ರಯಾಣಿಸಿ ಬಸ್ಸಿನ ಹಿಂದಿನ ಬಾಗಿಲಿನ ಬಳಿ ನನ್ನ ಆಗಮನಕ್ಕಾಗಿ ಕಾಯುತ್ತಿದ್ದರು. ಕಲಾಸಿಪಾಳ್ಯದ ಬಸ್ ನಿಲ್ದಾಣಕ್ಕೆ ಹೋಗಬೇಕಿದ್ದ ನಾವು ಮಳೆಯ ಕಾರಣದಿಂದ ರಸ್ತೆ ದಾಟದೆ ಅಂಡರ್ಪಾಸ್ ಬಳಸಿದೆವು. ಅಲ್ಲಿಂದ ಮುಂದಕ್ಕೆ ಹೋಗುವಾಗ ಕಾರಣವಿಲ್ಲದೆ ಜೀಬಿಗೆ ಕೈ ಹಾಕಿದೆ. ನನ್ನ ಫೋನ್ ಇರಲಿಲ್ಲ! ನನ್ನ ಮುಖವನ್ನೇ ದಿಟ್ಟಿಸಿ ನೋಡಿದ ನನ್ನಮ್ಮನಿಗೆ ನನ್ನಿಂದ ಏನೋ ಯಡವಾಟ್ಟಾಗಿರುವುದು ಖಚಿತವಾಯಿತು. ಬಸ್ ನಿಲ್ದಾಣದಲ್ಲಿದ್ದ ಅಷ್ಟೊಂದು ಬಸ್ಸುಗಳ ನಡುವೆ ನಾನು ಪ್ರಯಾಣಿಸಿದ ಬಸ್ಸು ಹುಡುಕುವುದು ಹೇಗೆ? ಅದು ಇನ್ನು ಅಲ್ಲಿಯೇ ಇರುತ್ತದೆಯೇ? ಅದಿದ್ದರೂ ಜನರು ಫೋನನ್ನು ಬಿಡುವರೇ? ನನ್ನಮ್ಮ ನನಗೆ ಎಷ್ಟೆಲ್ಲಾ ಬಯ್ಯಬಹುದು?. ಈ ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು. ‘ಜುಗಾರಿ ಕ್ರಾಸ್’ ಪುಸ್ತಕ ಓದುತ್ತಿದ್ದರಿಂದ ಚುರುಕಾದ ಮೆದುಳು ಉಪಾಯವ ಮಾಡಿತು. ನಾನೇನೋ ಪಾಸ್ ಪಡೆದಿದ್ದೆ ಆದರೆ ಅಮ್ಮನ ಬಳಿ ಶಕ್ತಿ ಯೋಜನೆಯಡಿ ಪಡೆದಿದ್ದ ಟಿಕೆಟ್ ಇತ್ತು.
ಆ ಟಿಕೆಟ್‌ನಲ್ಲಿ ಬಸ್ಸಿನ ಬೋರ್ಡ್ ನಂಬರ್ ಅಲ್ಲದೆ ವೆಹಿಕಲ್ ರೆಜಿಸ್ಟ್ರೇಷನ್ ನಂಬರ್ ಕೂಡ ಸಿಕ್ಕಿತು. ತಕ್ಷಣವೇ ಹುಡುಕುತ್ತ ಓಡಿದೆ. ಮಳೆಯ ಕಾರಣದಿಂದಾಗಿ ರಸ್ತೆಯು ಕೆರೆ ಆಗಿತ್ತು, ವೇಗವಾಗಿ ಓಡಲೂ ಸಾಧ್ಯವಿರಲಿಲ್ಲ. ಮೊದಲೆ ಅಲ್ಲಿ ಹೆಜ್ಜೆಹೆಜ್ಜೆಗೂ ಜನರಿರುತ್ತಾರೆ. ಆದರೂ ಬಸ್ ನಿಲ್ದಾಣಕ್ಕೆ ಹೇಗೋ ಹೋದೆ. ಪುಣ್ಯಕ್ಕೆ ಅದೇ ಬಸ್ಸು ಜನರನ್ನು ತುಂಬಿಕೊಂಡು ಹೊರಡಲು ಸಿದ್ಧವಾಗಿತ್ತು ಹಾಗಾಗಿ ಹುಡುಕಲು ಕಷ್ಟವಾಗಲಿಲ್ಲ.
ಮುಂದಿನ ಬಾಗಿಲಲ್ಲೇ ಬಸ್ಸೇರಿ ಚಾಲಕರಿಗೆ ಎಲ್ಲವನ್ನು ಹೇಳಿ ಎರಡೂ ಬಾಗಿಲನ್ನು ಮುಚ್ಚಿಸಿದೆ. ಬಾಗಿಲು ಮುಚ್ಚುವಾಗ ಹಿಂದಿ ಹುಡುಗಾನೊಬ್ಬ ಬಸ್ಸನ್ನು ಇಳಿಯಲು ಪ್ರಯತ್ನಿಸುತ್ತಿದ್ದ, ನನಗೆ ಅವನ ಮೇಲೆ ಗುಮಾನಿ ಹೆಚ್ಚಾಯಿತು. ಆದರೂ ಮೊದಲು ನಾನು ಕುಳಿತಿದ್ದ ಸೀಟಿನ ಬಳಿ ಹೋದೆ, ಕೆಳಗೆಲ್ಲ ಹುಡುಕಾಡಿದರೆ ಏನು ಕಾಣಲಿಲ್ಲ. ಪ್ರಯಾಣಿಕರು ತಂದಿದ್ದ ತರಕಾರಿ ಚೀಲಗಳನ್ನೆಲ್ಲ ಬದಿಗೆಳೆದು ಜಾಗವನ್ನು ಜಾಲಾಡಿದೆ ಸಿಗಲೇ ಇಲ್ಲ. ಕೊನೆಗೆ ಯಾವ ಕಂಡಕ್ಟರ್‌ನ್ನು ಬೈದುಕೊಂಡಿದ್ದೆನೋ ಅವರ ಸಹಾಯವನ್ನೇ ಪಡೆಯುವಂತಾಯಿತು. ಅವರ ಫೋನ್ನಿಂದ ನನ್ನ ಫೋನಿಗೆ ಕರೆ ಮಾಡಿದೆ.
ನನ್ನ ಫೋನ್ ಕಳುವಾಗಿರಲಿಲ್ಲ. ಏಕೆಂದರೆ ಅದು ಇನ್ನೂ ಸ್ವಿಚ್ ಆಫ್ ಆಗಿರಲಿಲ್ಲ. ಆದರೆ ಬಸ್ಸಿನಲ್ಲಿ ನನ್ನ ಫೋನ್ನ ಶಬ್ದವೇ ಕೇಳಲಿಲ್ಲ. ಪ್ರಯಾಣಿಕರೆಲ್ಲರೂ ನಿಶ್ಯಬ್ದದಿಂದ ನನ್ನತ್ತ ನೋಡಿದರು. ನಾನು ನಿರಾಸೆಯಿಂದ ಅಡ್ಡಡ್ಡ ತಲೆ ಆಡಿಸುತ್ತ ಬಾಗಿಲ ಬಳಿ ಹೋಗುವಷ್ಟರಲ್ಲಿ “ಜೂಯ್ ಜೂಯ್” ಎಂಬ ದನಿ ಕೇಳಿತು. ಕೊನೆಯ ಬಾರಿ ತಡಕಾಡಿದೆ. ಫೋನು ಸೀಟಿನ ಮೇಲು ಇರದೇ, ಕೇಳಗೂ ಬೀಳದೆ ಎರಡರ ಮಧ್ಯೆ ಸಿಕ್ಕಿ ನೇತಾಡುತ್ತಿತ್ತು. ನನಗಷ್ಟೇ ಅಲ್ಲದೆ ಅಲ್ಲಿದ್ದ ಎಲ್ಲರಿಗೂ ಖುಷಿಯಾಯಿತು. ಕಂಡಕ್ಟರ್ ಮಹಾಶಯರಿಗೂ.
ನನ್ನಿಂದಾಗಿ ಬಸ್ಸಿನಲ್ಲೇ ಲಾಕ್ ಆಗಿದ್ದ ಪರ್ಸ್ ಮಾರುವವನು “ನೀನು ಬುದ್ಧಿವಂತ…. ನಿನ್ನ ನಸೀಬು ಚೆನ್ನಾಗಿತ್ತು” ಎಂದನು. ನಂತರ ಅಮ್ಮನಿಗೆ ಎಲ್ಲವನ್ನು ವಿವರಿಸಿದಾಗ “ಹೇಗಿದ್ದರೂ ಆ ಫೋನು ಹಳೇದಾಗಿತ್ತು… ಅದಕ್ಕಾಗಿ ಇಷ್ಟೊಂದು ಒದ್ದಾಡಬೇಕಿತ್ತೆ… ಹೊಸದೊಂದನ್ನು ಖರೀದಿಸಿದ್ದರಾಯಿತು” ಎಂದರು.
ಕೊನೆಗೂ ಅದು ಹಾಗೆಯೇ ಆಯಿತು. ಈ ಘಟನೆಯಾಗಿ ಒಂದು ತಿಂಗಳಾಗುವಷ್ಟರಲ್ಲಿ ಕಾರಣಾಂತರದಿಂದ ನಾನು ಹೊಸ ಫೋನ್ ಖರೀದಿಸುವಂತೆಯೇ ಆಯಿತು. ಮರುಜನ್ಮವ ಪಡೆದಿದ್ದ ಫೋನ್ ಆಯಸ್ಸು ಮುಗಿದು ನಾನು ಅದನ್ನು ಶಾಶ್ವತವಾಗಿ ಕಳೆದುಕೊಳ್ಳುವಂತಾಯಿತು.
ಚಿತ್ತ ಸಾಗರ್
ಯೂನಿವರ್ಸಲ್ ಪಿ ಯು ಕಾಲೇಜು