Back To Top

 ಕ್ರಶ್ ಕೊಟ್ಟ ಜೆರಾಕ್ಸ್ ಪ್ರತಿ ತಂದ ಆಘಾತ | ಚೇತನ್ ಕಾಶಿಪಟ್ನ

ಕ್ರಶ್ ಕೊಟ್ಟ ಜೆರಾಕ್ಸ್ ಪ್ರತಿ ತಂದ ಆಘಾತ | ಚೇತನ್ ಕಾಶಿಪಟ್ನ

ದವಿ ಜೀವನವೇ ಹಾಗೆ, ನೂರಾರು ಬಣ್ಣದ ಚಿಟ್ಟೆಗಳು ತುಂಬಿರುವ ತೋಟದ ಹಾಗೆ. ಈ ಸಮಯದಲ್ಲಿ ನಮ್ಮ ವಯಸ್ಸು ಆಡೋ ಚೆಲ್ಲಾಟಗಳು ನೂರಾರು. ಹೊತ್ತುಕೊಂಡು ಬಂದ ಕನಸು, ಎಲ್ಲದರೆಡೆಗೆ ಓಡುವ ಮನಸು, ತಲೆತಿನ್ನೋ ಸಿಲೆಬಸ್ಸು, ಕಡಿಮೆಯಾಗದ ಹುಮಸ್ಸು ಇವೆಲ್ಲ ಸೇರಿ ಲೈಫು ಸಿಂಪಲ್ಲಾಗಿ ಚೆನ್ನಾಗಿರುತ್ತೆ.

ಆಗಿನ್ನೂ ನಾನು ಮತ್ತು ನನ್ನ ಗೆಳೆಯ ಪದವಿ ಜೀವನಕ್ಕೆ ಲಗ್ಗೆ ಇಟ್ಟು ಒಂದು ವಾರ ಕಳೆದಿತ್ತಷ್ಟೇ. ಆಗಲೇ ನನ್ನ ಗೆಳೆಯನಿಗೆ ಹುಡುಗಿಯೊಬ್ಬಳ ಮೇಲೆ ಎಲ್ಲಿಲ್ಲದ ಆಕರ್ಷಣೆ, ಆಸಕ್ತಿ ಬೆಳೆದಿತ್ತು. ಈಗಿನ ಟ್ರೆಂಡ್ ಪ್ರಕಾರ ಹೇಳುವುದಾದರೆ, ನಾವೆಲ್ಲ ಹೇಳುವ “ಕ್ರಶ್” ನನ್ನ ಗೆಳೆಯನಿಗೂ ಆಗಿತ್ತು.

ಆಕೆಯ ಬಗ್ಗೆ ಹೆಚ್ಚು ವಿಚಾರಗಳನ್ನು ತಿಳಿದುಕೊಳ್ಳುವ ಕೆಲಸ ಆತ ನನಗೆ ವಹಿಸಿದ್ದ. ನಾನು ಅಷ್ಟೇ ಇತರ ಗೆಳೆಯರು ಆಕೆಯ ಬಗೆಗೆ ಹೊಂದಿದ್ದ ಅಭಿಪ್ರಾಯ, ಆಕೆಯ ಪ್ಲಸ್ಸು, ಮೈನಸ್ಸು ಎಲ್ಲವನ್ನು ಕಲೆ ಹಾಕಿ ಆತನ ಮುಂದೆ ವರದಿ ಒಪ್ಪಿಸುತ್ತಿದ್ದೆ.

ನನ್ನ ಗೆಳೆಯನ ಬಗ್ಗೆ ಶೂನ್ಯ ಆಸಕ್ತಿ ಹೊಂದಿದ್ದ ಆ ಹುಡುಗಿಯ ಜೊತೆ ಆತ ಮಾತ್ರ ಆಗಲೇ ದಾಂಪತ್ಯ ಜೀವನದ ಕನಸು ಕಂಡಿದ್ದ. ಅದೊಂದು ದಿನ ಪಠ್ಯಕ್ಕೆ ಸಂಬಂಧಿತ ಪ್ರತಿಯೊಂದನ್ನು ಅಧ್ಯಾಪಕರು ಆಕೆಯ ಕೈಯಲ್ಲಿ ಕೊಟ್ಟು ಎಲ್ಲರು ಅದನ್ನು ಜೆರಾಕ್ಸ್ ಮಾಡುವಂತೆ ಹೇಳಿದರು. ಆಕೆಯೊಡನೆ ಮಾತನಾಡಲು ಒಂದು ನೆಪ ಹುಡುಕುತಿದ್ದ ನನ್ನ ಗೆಳೆಯ ಮಾರನೇಯ ದಿನ ಇದುವೇ ಸೂಕ್ತ ಸಂದರ್ಭ ಎಂದು ಆತ್ಮವಿಶ್ವಾಸವಿಲ್ಲದ ಮಾತಿನಿಂದ ಆಕೆಯ ಬಳಿ ಆ ಪ್ರತಿಯನ್ನು ಕೊಡುವಂತೆ ಕೇಳಿದನು.

ಪ್ರತಿ ತೆಗೆದುಕೊಂಡು ಜೆರಾಕ್ಸ್ ಮಾಡಿದ ಅವನು ಅವಳು ಕೊಟ್ಟ ಪ್ರತಿಯನ್ನು ತನ್ನಲ್ಲೇ ಉಳಿಸಿಕೊಂಡು ಜೆರಾಕ್ಸ್ ಪ್ರತಿಯನ್ನು ಆಕೆಗೆ ಹಿಂದಿರುಗಿಸಿದ. ತನ್ನಲ್ಲೇ ಉಳಿಸಿಕೊಂಡ ಆಕೆಯ ಪ್ರತಿಯ ಕೊನೆಯ ಪುಟವನ್ನು ಬಿಡಿಸುತಿದ್ದಂತೆ ನನ್ನ ಗೆಳೆಯನಿಗೆ ಸಿಡಿಲು ಬಡಿದಂತಾಯಿತು. ಅಲ್ಲಿ ಹೃದಯಕಾರದ ಚಿತ್ರವೊಂದರಲ್ಲಿ ಆಕೆಯ ಹೆಸರಿನ ಪಕ್ಕ ಬೇರೊಬ್ಬ ಹುಡುಗನ ಹೆಸರು ಕಂಡ ಆತನಿಗೆ ಪ್ರವಾಹ, ಭೂಕಂಪ ಎಲ್ಲವೂ ಒಮ್ಮೆಲೇ ಬಂದಂತಾಯಿತೋ ಏನೋ ಅಲ್ಲೇ ಕುಸಿದು ಕುಳಿತ. ನನ್ನ ಗೆಳೆಯನ ಆ ಪರಿಸ್ಥಿತಿ ನೋಡಿ ನನಗೆ ಮಾತ್ರ ನಕ್ಕು, ನಕ್ಕು ಹೊಟ್ಟೆನೋವಾಗಿದ್ದಂತು ನಿಜ.

ನಂತರ ದಿನಗಳಲ್ಲಿ ಆಕೆಯ ಮೇಲೆ ಆತನಿಗೆ ಒಂದು ರೀತಿಯ ಕೋಪ ಬೆಳೆದಿತ್ತು. ಅದ್ಯಾಕೋ ಲವ್ ಫೇಲ್ಯೂರ್ ಆದವರ ತರ ಆಡುತಿದ್ದ. ಜಗತ್ತಿನಲ್ಲಿ ಲವ್ವೆ ಮಾಡದೇ ಲವ್ ಫೇಲ್ಯೂರ್ ಆದದ್ದು ನನ್ನ ಗೆಳೆಯನಿಗೆ ಮಾತ್ರ ಅನ್ನಿಸುತ್ತದೆ. ಏನೇ ಇರಲಿ ಇಂತಹ ಕೆಲವು ಘಟನೆಗಳೇ ಪದವಿ ಜೀವನವನ್ನು ಸದಾ ಜೀವಂತವಿರುಸುವುದು.

ಇಂತಹ ಆಕರ್ಷಣೆಗಳು ಈ ವಯಸ್ಸಿನಲ್ಲಿ ಸಹಜ. ಅದನ್ನು ತೀರಾ ಮನಸ್ಸಿಗೆ ಹಚ್ಚಿಕೊಳ್ಳದೆ ಪದವಿ ಜೀವನದ ಗೋಲ್ಡನ್ ದಿನಗಳನ್ನು ಆನಂದಿಸಬೇಕು. ತರ್ಲೆ, ತುಂಟಾಟಗಳು ಇಲ್ಲದ ಡಿಗ್ರಿ ಜೀವನ ನಿಜಕ್ಕೂ ಸಿಹಿಯಿಲ್ಲದ ಪಾಯಸವೇ ಸರಿ. ಬಯಸಿದ್ದು ಪಡೆಯುವ ಆತುರದಲ್ಲಿ ನೀವು ಖುಷಿಯಾಗಿರಲು ಮರೆಯದಿರಿ.

ಚೇತನ್ ಕಾಶಿಪಟ್ನ
ಎಸ್. ಡಿ. ಎಂ ಕಾಲೇಜು ಉಜಿರೆ.

Prev Post

ನೆರಳು | ಶಿಲ್ಪ. ಬಿ

Next Post

ಅಮ್ಮ ಎನ್ನುವ ಪದಕ್ಕೆ ಇನ್ನೇನಾದರೂ ಬೇಕೆ? | ಅಚಲ್ ವಿಟ್ಲ

post-bars

Leave a Comment

Related post