ಮರಳಿ ಬರುತ್ತೇನೆ, ತ್ರಿವರ್ಣ ಹಾರಿಸಿ ಇಲ್ಲವೆ ಧರಿಸಿ | ಶ್ರವಣ್ ನೀರಬಿದಿರೆ
ಯಾವ ಭಾವವಿದ್ದೀತು ಆ ಅಪ್ಪುಗೆಯಲ್ಲಿ.
ಹೋಗಬೇಡವೆನ್ನುವ ಬೇಡಿಕೆಯೇ
ಅಥವಾ ಬೇಗ ಬಾ ಎನ್ನುವ ಕೊರಿಕೆಯೇ.
ಅದೇ ಕೊನೆಯ ಬಾರಿಗೆ ಎನ್ನುವಂತೆ
ಗಟ್ಟಿಯಾಗಿ ಅಪ್ಪಿದ್ದಳು ನನ್ನವಳು ನನ್ನನ್ನು
ಆ ಕಂಗಳಲ್ಲಿ ಏನೂ ಆಗದಿರಲಿ ಎಂಬ ಹಾರೈಕೆಯಿತ್ತು.
ಮೂರು ವರ್ಷದ ಮಗಳಿಗೆ ಏನೂ ಅರ್ಥವಾಗದಿದ್ದರೂ
ಅವಳಮ್ಮನ ಕಣ್ಣೀರು ನೋಡಿ ತಾನೂ ಜೋರಾಗಿ ಅತ್ತಿದ್ದಳು.
ನನ್ನಮ್ಮ ಸೆರಗನ್ನು ಅಡ್ಡ ಹಿಡಿದವಳು
ನಾ ಮರೆಯಾಗುವವರೆಗು ಹಾಗೆ ಇದ್ದಳೆಂದು ಕಾಣುತ್ತದೆ.
ಅಪ್ಪನ ಕಂಗಳಲ್ಲಿ ಹೆಮ್ಮೆಯಿದ್ದರೂ
ಮನಸಿನಲ್ಲಾಗುತ್ತಿದ್ದ ಹೊಯ್ದಾಟವನ್ನು ನಾನು ಗಮನಿಸದೆ ಇರಲಿಲ್ಲ.
ಬಿರುಗಾಳಿಗೆ ಸಿಲುಕಿದ ಹಡಗಿನಂತಾಗಿತ್ತು ನನ್ನ ಮನಸ್ಥಿತಿ.
ಆದರೂ ಹೊರಡಲೆ ಬೇಕಾಗಿತ್ತು.
ಎರಡನೇ ಆಲೋಚನೆಗೆ ಅಲ್ಲಿ ಅವಕಾಶವಿರಲಿಲ್ಲ.
ಕರ್ತವ್ಯ ನನ್ನನ್ನು ಕೈ ಬೀಸಿ ಕರೆಯುತ್ತಿತ್ತು.
ಮನೆಯವರನ್ನೆಲ್ಲ ಒಮ್ಮೆ ಕಣ್ತುಂಬಿಕೊಂಡು
ತಿರುಗಿಯೂ ನೋಡದೆ ಬಂದಿದ್ದೆ.
ಗಡಿಯಲ್ಲಿ ನನ್ನ ಸಹೋದರರು
ತೀವ್ರ ಹೋರಾಟ ನಡೆಸುತ್ತಿದ್ದಾರೆ,
ಅವರ ಬೆನ್ನಿಗೆ ನಿಲ್ಲಬೇಕಲ್ಲವೆ.
ಅದೇಕೋ ಗೊತ್ತಿಲ್ಲ,
ಇಂದು ನನ್ನವರೆಲ್ಲ ತುಂಬಾ ನೆನಪಾಗುತ್ತಿದ್ದಾರೆ.
ಆದರಿದು ಭಾವನಾತ್ಮಕವಾಗುವ ಸಂದರ್ಭವಲ್ಲ.
ಸಂದೇಶ ಬಂದಿದೆ ಮೇಲಿನವರಿಂದ
‘ಎಚ್ಚರಿಕೆಯಿಂದಿರಿ,
ಯಾವುದೇ ಕ್ಷಣಕ್ಕೂ ಶತ್ರುಗಳ ಆಕ್ರಮಣವಾಗಬಹುದು.
ಪ್ರತಿದಾಳಿಗೆ ಸಿದ್ದರಾಗಿರೆಂದು’.
ಮನಸ್ಸಿನಲ್ಲಿಯೇ ಹೇಳಿಕೊಂಡಿದ್ದೇನೆ
‘ಮರಳಿ ಬರುತ್ತೇನೆ ನಿಮ್ಮಲ್ಲಿಗೆ.
ಯುದ್ಧಗೆದ್ದ ವೀರನಾಗಿ
ಇಲ್ಲವೇ ವೀರ ಸ್ವರ್ಗ ಸೇರಿ
ತ್ರಿವರ್ಣ ಧರಿಸಿದ ಅಮರನಾಗಿ’.