ಪುಸ್ತಕಗಳೊಡನೆ ಕವಿಗಿರುವ ಬಾಂಧವ್ಯದ ಆಳ ಈ ಕೃತಿ ಪರಿಚಯಿಸುತ್ತೆ: ಶಶಿಸ್ಕಾರ ನೇರಲಗುಡ್ಡ
ಪುಸ್ತಕ ಪರಿಚಯ: ಯಾವುದೂ ಈ ಮೊದಲಿನಂತಿಲ್ಲ
ಕವಿಯಲ್ಲದವನ ಕವಿತೆಗಳು
ನನ್ನಂಥ ಆನೇಕ ಪುಸ್ತಕ ಪ್ರೇಮಿಗಳಿಗೆ ಈ ಕೃತಿಯಲ್ಲಿರುವ ಮೊದಲ ಕವಿತೆ “ಪುಸ್ತಕವನ್ನು ನನ್ನಿಂದ ದೂರವಿಡಬೇಡಿ” ಅನ್ನುವ ಶೀರ್ಷಿಕೆಯಲ್ಲಿಯೇ ಒಂದು ತೆರನಾದ ಸಂತೋಷ, ಖುಷಿ ಒಡಮೂಡುವಂತೆ ಮಾಡುತ್ತದೆ, ತಿಳಿಹಸಿರುಭಾವ ಹೊಮ್ಮಿಸುತ್ತದೆ. ಇಲ್ಲಿ ಕವಿ ನಾನು ಕವಿಯಲ್ಲ ಎಂದು ಹೇಳುತ್ತ ಎಲ್ಲರ ಮನಸ್ಸು ಕದಿಯಲು ಪ್ರಾರಂಭಿಸುತ್ತಾನೆ. ಪುಸ್ತಕಗಳೊಡನೆ ಕವಿಗಿರುವ ಬಾಂಧವ್ಯದ ಬೆಸುಗೆ ಎಂತಹದ್ದು ಎಂದು ಈ ಕವನದಿಂದಲೇ ಓದುಗರಿಗೆ ಅರಿವಾಗುತ್ತದೆ. “ನಾನು ಸತ್ತಾಗ ಅರೆ ಕ್ಷಣದಲ್ಲಿ ಒಣಗಿ ಹೋಗುವ ಹೂವುಗಳನ್ನು ತಂದು ನನಗೆ ಅಲಂಕರಿಸಬೇಡಿ, ಒಂದೇ ಒಂದು ಪುಸ್ತಕವನ್ನು ಕೈಯಲ್ಲಿ ಹಿಡಿದು ತಂದು ನನ್ನೆದೆಯ ಮೇಲೆ ಇರಿಸಿಬಿಡಿ” ಎಂದು ಕವಿ ಭಾವುಕನಾಗಿ ತನ್ನ ಪುಸ್ತಕ ಪ್ರೀತಿಯನ್ನು ಸಹೃದಯರೊಂದಿಗೆ ಹಂಚಿಕೊಳ್ಳುತ್ತಾನೆ.
ಸಾಮನ್ಯವಾಗಿ ಯುವ ಕವಿಗಳು ವಯೋಮಾನ ಸಹಜವಾದ ಪ್ರೀತಿ, ಪ್ರೇಮ, ಕಾಮ, ವಿರಹದಂಥ ವಿಷಯಗಳನ್ನು ಹೆಕ್ಕಿಕೊಂಡು ಕವನಗಳನ್ನು ಸೃಷ್ಟಿಸುತ್ತಾರೆ. ಆದರೆ ಈ ಪುಸ್ತಕದ ಸೃಷ್ಟಿಕರ್ತ ದೀಕ್ಷಿತ್ ನಾಯರ್ ಅವುಗಳಿಗೆ ಹೆಚ್ಚು ಮಹತ್ವ ನೀಡದೆ, ತಮ್ಮ ವಯಸ್ಸಿಗೂ ಮೀರಿದ ಭಾವವನ್ನು ಹಿಡಿಯಲು ಯತ್ನಿಸಿದ್ದಾರೆ. ಅಮ್ಮನ ಮಮಕಾರದ ಬಗ್ಗೆ, ಅಪ್ಪನ ಬೆವರಿನ ರಕ್ತದ ಬಗ್ಗೆ, ಸಹಸ್ರ ನೋವುಗಳಿಗೆ ಮೂಖ ಸಾಕ್ಷಿಯಾಗಿ ಉಳಿಯುವ “ಆಸ್ಪತ್ರೆ ಬೆಡ್” ಬಗ್ಗೆ, ಅಚ್ಚ ಸ್ವತಂತ್ರಳಾಗಿ ಸದಾ ಗಂಡಸರಿಗೆ ಸುಖ ಉಣಿಸುತ್ತಲೇ ದಣಿದು ನಿಲ್ಲುವ ʼಜಾರಿಣಿʼಯರ ಬಗ್ಗೆ; ಅವಳ ಕಂದನ ಬಗ್ಗೆ ಮನಸ್ಸು ಭಾರವಾಗುವಂತೆ ತಣ್ಣನೆ ಕೂತು ಆ ವ್ಯಥೆ ಕಟ್ಟಿಕೊಟ್ಟಿದ್ದಾನೆ ಕವಿ.
ಕವಿಯ ಅಂತರಾಳದ ಸೂಕ್ಷ್ಮತೆ, ಸಹಾನುಭೂತಿ ಕಾಣಸಿಗುವುದು “ಅವಳು ಬಂದಿದ್ದಾಳೆ..!” ಎಂಬ ಕವಿತೆಯಲ್ಲಿ. ಹೆಣ್ಣಿನ ಮನಸ್ಸು ಧರಿಸಿ, ತಿಂಗಳಿಗೊಮ್ಮೆ ದುತ್ತೆಂದು ಪ್ರತ್ಯಕ್ಷವಾಗುವ ಮುಟ್ಟಿನ ಕುರಿತು ಬರೆಯುತ್ತಾನೆ ಕವಿ ಇಲ್ಲಿ. ಹೌದು ಮುಟ್ಟು ಪ್ರಕೃತಿಯ ನಿಯಮ, ಸಹಜ ಕ್ರಿಯೆ, ಅದು ಹೆಣ್ಣಿನ ನೆಂಟ. ತಿಂಗಳಿಗೊಮ್ಮೆ ಆ “ನೆಂಟ” ಬಂದಾಗ ಹೆಣ್ಣಿಗಾಗುವ ವೇದನೆ, ಅಸಹಜ ಸಿಟ್ಟು, ತೊರ್ಪಡಿಸಲಾಗದ ದುಃಖ – ನೋವು, ಹೇವರಿಕೆಗಳನ್ನು ಬಿಚ್ಚಿಡುತ್ತಲೇ “ಅದು” ಆಕೆಯ ಬದುಕಿನಲ್ಲಿ ತರುವ ಬದಲಾವಣೆಯನ್ನು, ಗಂಡಸರು ತನ್ನತ್ತ ತಹ ತಹಿಸುವಂತೆ ಮಾಡುವುದನ್ನು, ಒಕ್ಕುಳ ಒಳಗೆ ಹುಟ್ಟುವ ನಿರುಮ್ಮಳ ಸೌಖ್ಯವನ್ನು ಹೆಣ್ಣಿಗೆ ತಿಳಿಹೇಳುತ್ತಾನೆ ಕವಿ.
ಕವಿತೆಗಳನ್ನು ಯಾವ ಚೌಕಟ್ಟಿನ ಒಳಕ್ಕು ಬಂದಿಸದೆ, ಕಾವ್ಯ ಶಿಲ್ಪಕ್ಕೆ ಮೋಹಗೊಳ್ಳದೆ, ರಾಗ, ತಾಳ, ಪ್ರಾಸಗಳಿಗೆ ಒತ್ತು ನೀಡದೆ, ಅನಾಯಾಸವಾಗಿ ಬದುಕಿಗೊಂದು ಭರವಸೆ ಮೂಡಿಸಲು, ಸತ್ತಂತಿರುವವರನ್ನು ಬಡಿದೆಚ್ಚರಿಸಲು, ದಿವ್ಯ ಏಕಾಂತ ನಿರ್ಮಿಸಲು, ಧೀಶಕ್ತಿ ತುಂಬಲು, ಕುಸಿದು ಬಿದ್ದವರಿಗೆ ನೆರವಾಗಲು ಸಹಕರಿಸಿದರೆ ಅಷ್ಟು ಸಾಕಲ್ಲವೇ.? ಈ ಕವಿತೆಯ ಹುಟ್ಟಿಗೆ ಕಾರಣ ಅನ್ನುತ್ತಾನೆ ಕವಿ.
ಆಗುಂತಕನಂತೆ ದೂರದಲ್ಲೆಲ್ಲೋ ನಿಂತು ಕೆಟ್ಟ ನೋಟದಲ್ಲಿ, ಮನಸ್ಸು ಕೊಚ್ಚೆಯಾಗಿಸಿಕೊಂಡು ಹೆಣ್ಣನ್ನು ನೋಡಿದರು, ಅಷ್ಟರ ಮಟ್ಟಿಗೆ “ನಾನು ಅತ್ಯಾಚಾರಿ”ಯೇ ಎಂದು ಆತ್ಮಾವಲೋಕನ ಮಾಡಿಸುತ್ತಾನೆ. ಸಮಾಜದ ಕೂಳೆ ಅಂಟಿಸಿಕೊಂಡು, ಅವರಿವರ ನೆತ್ತಿಯ ಮೇಲೆ ನಾಮ ಹಾಕುವ ದುರುಳರ ಬೂಟು – ಮೆದುಳು ಸ್ವಚ್ಚವಾಗುವಂತೆ “ಪಾಲಿಶ್ ಮಾಡುತ್ತೇನೆ” ನನ್ನ ಕವಿತೆಗಳ ಮುಲಕ ಅನ್ನುವನು ಕವಿ.
ಮಹಾತ್ಮ ಗಾಂಧಿ, ಅಂಬೇಡ್ಕರ್, ಕುವೆಂಪು ಎಂಬ ನೇತಾರರು ಅಲ್ಲಲ್ಲಿ ಸುಳಿದಾಡುತ್ತಾರೆ, ಧರ್ಮದ ಅಮಲೇರಿಸಿಕೊಂಡವರ ಕೈಯಿಂದ ಪ್ರಾಣ ಕಳೆದುಕೊಂಡ ಮುಗ್ಧ ಜೀವಿ ಕನ್ಹಯ್ಯ ಲಾಲ್ನ ಅಮಾಯಕತೆಯು ಇಲ್ಲಿ ತಿಳಿಯುತ್ತದೆ. ಇನ್ನು ಹೆಚ್ಚು ಹೇಳಿ ಓದುಗರಿಗೆ ರಸಭಂಗ ಮಾಡಲಾರೆ. ಬೆಚ್ಚನೆ ಓದಿನ ಅನುಭವ ನಿಮ್ಮದಾಗಲಿ.
–
ಶಶಿಸ್ಕಾರ ನೇರಲಗುಡ್ಡ
ಪತ್ರಿಕೋದ್ಯಮ ವಿದ್ಯಾರ್ಥಿ
ಎಸ್. ಡಿ. ಎಮ್. ಕಾಲೇಜು, ಉಜಿರೆ.