ಸುಶೀಲಾ ಚಿಂತಾಮಣಿ ಅವರ `ವಿವಾಹ: ಒಂದು ಚಿಂತನ' ವಿವಾಹವನ್ನು ಕೇಂದ್ರೀಕರಿಸಿದ್ದರೂ ಎಲ್ಲಿಯೂ ಅದನ್ನು ವೈಭವೀಕರಿಸಲು ಪ್ರಯತ್ನಿಸಿಲ್ಲ. ಎರಡು ಮುಖ್ಯವಾದ ಸಂದೇಶಗಳನ್ನು ಈ ಪುಸ್ತಕ ನೀಡುತ್ತದೆ. ಮೊದಲನೆಯದು, ವಿವಾಹ ಸಂಬಂಧ ದಂಪತಿಗಳಿಗೆ 'ಬಂಧನ'ವಾಗದೆ 'ಅನುಬಂಧ'ವಾಗಬೇಕು ಎನ್ನುವುದು. ಎರಡನೆಯದು ಸಾಮರಸ್ಯವಿಲ್ಲದ ಬದುಕನ್ನು ಸಾಮಾಜಿಕ ಸಾಂಸ್ಕೃತಿಕ ಒತ್ತಡಗಳಿಗೆ ಮಣಿದು ಮುಂದು ವರೆಸಿಕೊಂಡು ಹೋಗುವ ಅಗತ್ಯವಿಲ್ಲ ಎನ್ನುವುದು. ಇತ್ತೀಚಿನ ವರ್ಷಗಳಲ್ಲಿ ವಿವಾಹವನ್ನು ದೌರ್ಜನ್ಯರಹಿತ ಅನುಭವವನ್ನಾಗಿ ಮಾಡಲು ಕಾನೂನಿನ ಬೆಂಬಲವೂ ಇದೆ, ಸ್ವಾಯತ್ತ ಮಹಿಳಾ ಸಂಘಟನೆಗಳ ನೆರವೂ ಇದೆ. ಆದಾಗ್ಯೂ ಸ್ವತಂತ್ರ ಬದುಕನ್ನು ನಡೆಸಲು ಆರ್ಥಿಕ ಬೆಂಬಲವಿಲ್ಲದ ಕಾರಣ ಅನೇಕ ಹೆಣ್ಣುಮಕ್ಕಳು ಅಹಿತವಾದ ಸಂಬಂಧಗಳಲ್ಲಿ ಮುಂದುವರೆಯುತ್ತಾರೆ. ಪರಸ್ಪರ ನಂಬಿಕೆ, ಗೌರವ ಇರದ ಸಂಬಂಧಗಳಿಂದ ಹೊರಬರುವುದೇ ಒಳಿತು. ಇಂತಹ ವಿವಾಹದಿಂದ ಹೊರಬರುವುದು ಒಂಟಿತನದಿಂದ ಹೊರ ಬರುವುದೇ ಹೊರತು ಒಂಟಿಯಾಗಲು ಹೊರಬರುವುದು ಎಂದು ಖಂಡಿತವಾಗಿ ಭಾವಿಸಬೇಕಾದ ಅವಶ್ಯಕತೆ ಇಲ್ಲ' ಎಂಬ ಲೇಖಕರ ಮಾತುಗಳು ವಿವಾಹವನ್ನು ಸುತ್ತುವರೆದಿರುವ ಭ್ರಮಾ ಪ್ರಪಂಚದಿಂದ ಹೊರಬಂದು ಈ ಸಂಸ್ಥೆಯನ್ನು ಒಂದು ವೈಚಾರಿಕ ವಾಸ್ತವ ನೆಲೆಗಟ್ಟಿನಲ್ಲಿ ನೋಡಲು ಓದುಗರನ್ನು ಪ್ರೇರೇಪಿಸುತ್ತದೆ ಎನ್ನುತ್ತಾರೆ ಪ್ರೊ. ಆರ್ ಇಂದಿರಾ
©2024 Book Brahma Private Limited.