ಸಮಾನತೆಯೆಡೆಗೆ ಒಂದು ನಡಿಗೆ-ಡಾ.ಪ್ರೇಮಾ ಅಪಚಂದ ಅವರ ಲೇಖನಗಳ ಸಂಗ್ರಹ ಕೃತಿ. ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಶೋಧದಿಂದ ಆರಂಭಿಸಿ ಆಧುನಿಕ ಮಹಿಳೆಯ ಧಾರುಣ ಚಿತ್ರದವರೆಗೆ ಮಹಿಳೆಯ ವಿವಿಧ ಅವಸ್ಥೆಗಳನ್ನು ಕರಾರುವಕ್ಕಾಗಿ ಚಿತ್ರಿಸಿದ್ದಾರೆ. ವಿಷಯ ವಸ್ತು ವೈವಿಧ್ಯತೆ ಇದೆ. ಸ್ತ್ರೀಗೆ ಸ್ವಾತಂತ್ರ್ಯ ನೀಡಿದ 21ನೇ ಶತಮಾನದಲ್ಲೂ ಮಹಿಳೆಯ ಪರಿಸ್ಥಿತಿ ಎಷ್ಟೊಂದು ಕಷ್ಟಕರವಾಗಿದೆ ಎಂಬುದನ್ನು ಮೊದಲ ಅಧ್ಯಾಯದಲ್ಲಿ ಚರ್ಚಿಸಿದ್ದಾರೆ. ಸುಭದ್ರ ಅಡಿಪಾಯ ಇದ್ದರೂ ಸಹಭಾಗಿತ್ವ ಇಲ್ಲದಿರುವ ಕುಟುಂಬವ್ಯವಸ್ಥೆ ಹೇಗೆ ಅವಳ ಶೋಷಣೆಗೆ ಕಾರಣವೆಂದು ಸೂಚ್ಯವಾಗಿ ಹೇಳುತ್ತಾರೆ. "ಪ್ರಸ್ತುತ ಭಾರತೀಯ ಕುಟುಂಬದ ರಚನೆಯು ಹೆಂಗಸರ ಅಧೀನತೆ ಮತ್ತು ಶೋಷಣೆಗಳನ್ನು ಅನುಮೋದಿಸುತ್ತದೆ. ಇದರಿಂದಾಗಿ ಸಂವಿಧಾನ ಕೊಡುವ ಮೂಲಭೂತ ಹಕ್ಕುಗಳು ಹೆಣ್ಣುಮಕ್ಕಳ ಮಟ್ಟಿಗೆ ಪ್ರಸ್ತುತ ಎನಿಸಿಬಿಟ್ಟಿವೆ" ಎಂಬ ಸ್ತ್ರೀವಾದಿ ಚಿಂತಕರು ಅವರ ಹೇಳಿಕೆಯನ್ನು ತಮ್ಮ ವಾದ ಸಮರ್ಥನೆಗೆ ಸರಿಯಾಗಿ ಬಳಸಿಕೊಳ್ಳುತ್ತಾರೆ. ಸಂವಿಧಾನದ ಆಶಯಗಳು ಒಂದು ಕಡೆ ಭಾರತೀಯ ಪಿತೃಪ್ರಧಾನ ವ್ಯವಸ್ಥೆ, ಇನ್ನೊಂದು ಕಡೆ ಇದರ ಅಡ್ಡಪರಿಣಾಮಗಳನ್ನು ಮಹಿಳೆ ಎದುರಿಸಬೇಕು. ಆದ್ದರಿಂದಲೇ ಸಂವಿಧಾನದ ತಿದ್ದುಪಡಿಗಳು ಲಿಂಗದ ನೆಲೆಯಿಂದ ಪುನರ್ ಪರಿಶೀಲನೆಗೆ ಆಗಬೇಕಾಗಿದೆ. ವಚನ ಚಳವಳಿಯಲ್ಲಿ ಜಾತಿ ಮತ್ತು ಮಹಿಳಾ ಪ್ರತಿನಿಧಿ ಕರಣವನ್ನು ಪ್ರೇಮಾ ಅವರು ಅಧ್ಯಾಯದಲ್ಲಿ ವಿಸ್ತೃತವಾಗಿ ಚರ್ಚಿಸುತ್ತಾರೆ.ಅವಕಾಶ ಸಿಕ್ಕರೆ ಮಹಿಳೆ ಪುರುಷನಿಗೆ ಸರಿಸಾಟಿ ಎಂಬುದಕ್ಕೆ ವಚನಕಾರರ ಚಳವಳಿಯೇ ಉದಾಹರಣೆ. ಕಂದಾಚಾರ ತೊಡೆಯುವಲ್ಲಿ, ಅನುಭವ ಮಂಟಪದಲ್ಲಿ ಅವಳ ಮುಕ್ತ ಭಾಗವಹಿಸುವಿಕೆಯಲ್ಲಿ ಅವಳ ಸಮಾನತೆಯ ಸನ್ಮಾರ್ಗದ ನಡೆಯನ್ನು ಶೋಧಿಸುತ್ತಾರೆ. ಕೆಳವರ್ಗದ ಮಹಿಳೆಯರು ಸೃಜನಶೀಲವಾಗಿ ವರದಾನಿ ಗುಡ್ಡವ್ವೆ,ಕದಿರೆ ರೆಮ್ಮವ್ವೆ ಅವರ ವಚನಗಳು ಉದಾಹರಿಸಿ ಅವಳ ಪುಟ್ಟ ವಿಶ್ಲೇಷಣೆ ಮಾಡುತ್ತಾರೆ.
©2024 Book Brahma Private Limited.