ಇಲ್ಲಿನ ನೀಳ್ಗವಿತೆಗಳು ಒಟ್ಟು ವೈವಿಧ್ಯತೆಗಳನ್ನ ನೋಡಿದರೆ ಬೆರಗಾಗುತ್ತೇವೆ. ದೊಡ್ಡರಂಗೇಗೌಡರ ಪ್ರಸ್ತುತ ನೀಳ್ಗವಿತೆಗಳ ಸಂಕಲನ ಪ್ರಗಾಥಗಳ ಕ್ಷೇತ್ರಕ್ಕೆ ಒಂದು ಅರ್ಥಪೂರ್ಣ ಹಾಗೂ ಸ್ವಾಗತಾರ್ಹ ಕೊಡುಗೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಒಂದನೆಯದಾಗಿ ಇಷ್ಟೇ ಸಾಲುಗಳಿರಬೇಕೆಂಬ ಮಿತಿಯನ್ನು ಕವಿ ವಿಸ್ತರಿಸಿಕೊಂಡಿದ್ದಾರೆ. ಎರಡನೆಯದಾಗಿ ಮಹತ್ತರವಾದ ಹಾಗೂ ಭವ್ಯವಾದ ವಿಷಯಗಳನ್ನೊಳಗೊಂಡಿದ್ದು ಅವರು ಭವ್ಯಕಾವ್ಯಕ್ಕೆ ಎಡೆಮಾಡಿ ಕೊಡುವಂತವರಾಗಿರಬೇಕು ಎಂಬ ನಿರ್ಬಂಧವನ್ನು ಮೀರಿ ರಚನೆ ಮಾಡಿದ್ದಾರೆ. ಪ್ರೀತಿ ಪ್ರಗಾಥ, ಪಾಪಿ ಪ್ರಗಾಥ, ಗೊಮ್ಮಟಗಾಥೆ ಮುಂತಾದವುಗಳು ವೈಶಿಷ್ಟ್ಯ ಪೂರ್ಣ ಬರವಣಿಗೆಯಿಂದ ಕೂಡಿವೆ. 'ಕುರುಹುಗಳು' ಗ್ರಾಮೀಣ ಪರಿಸರದ ಬದುಕಿನ ಪ್ರತೀಕವೆ ಆಗಿದೆ. ಪ್ರೀತಿ ಪ್ರಗಾಥದಲ್ಲಿ ಛಂದೊ ವೈವಿಧ್ಯದ ಪ್ರಯೋಗವನ್ನು ಮೆರೆದಿದ್ದಾರೆ. ಹೊಸ ಆಯಾಮಗಳನ್ನ ನೀಳ್ಗವಿತೆಗಳು ಪ್ರಕಾರಕ್ಕೆ ತಾಂತ್ರಿಕವಾಗಿ ಜೋಡಿಸಿದ್ದಾರೆ. ಯಾವುದೇ ವರೆಗಲ್ಲಿನಲ್ಲಿ ಉಜ್ಜಿ ನೋಡಿದಾಗಲು ದೊಡ್ಡರಂಗೇ ಗೌಡರು ನೀಳ್ಗವಿತೆಗಳ ಬರವಣಿಗೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಧಾನ್ ಗುರುದತ್ತ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.