ಮುದಗಲ್ಲ ಇತಿಹಾಸ ಮತ್ತು ಶಾಸನಗಳು

Author : ಮಹಾದೇವಪ್ಪ ನಾಗರಾಳ

Pages 168

₹ 200.00




Year of Publication: 2024
Published by: ಅಡ್ಲಿಗಿ ಪ್ರಕಾಶನ
Address: ಮಸ್ಕಿ

Synopsys

`ಮುದಗಲ್ಲ ಇತಿಹಾಸ ಮತ್ತು ಶಾಸನಗಳು' ಡಾ. ಮಹಾದೇವಪ್ಪ ನಾಗರಾಳ ಅವರು ಇತಿಹಾಸ ಕೃತಿಯಾಗಿದೆ. ಈ ಕೃತಿಯಲ್ಲಿ ಮುದಗಲ್ಲು ಇತಿಹಾಸವನ್ನು ಮೂರು ನೆಲೆಯಲ್ಲಿ ಅಂದರೆ ಮೊದಲಘಟ್ಟ, ನಡುವಿನ ಘಟ್ಟ ಮತ್ತು ನಂತರದ ಘಟ್ಟವೆಂದು ಲೇಖಕರು ವಿಂಗಡಿಸಿಕೊಳ್ಳುತ್ತಾರೆ. ಮುದಗಲ್ಲು ಪಟ್ಟಣ ಪ್ರಾಚೀನ ಮತ್ತು ಐತಿಹಾಸಿಕ ನಗರ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅದು ಪ್ರಾಗೈತಿಹಾಸಿಕ ನೆಲೆಯಲ್ಲ್ಲವೆಂದು ಸ್ಪಷ್ಟವಾಗಿ ಹೇಳುತ್ತಾರೆ. ಈ ಊರಿನಿಂದ 4 ಕಿ.ಮೀ. ದೂರದಲ್ಲಿ ಪಿಕಳಿಹಾಳ ಹೆಸರಿನ ಊರು ಸಿಗುತ್ತದೆ. ಅಲ್ಲಿಯ ಬೆಟ್ಟದಲ್ಲಿ ಪ್ರಾಗೈತಿಹಾಸಿಕ ಅವಶೇಷಗಳು ದೊರೆತಿವೆ. ಇವು ಮುದಗಲ್ಲು ಬೆಟ್ಟಕ್ಕೆ ಹೊಂದಿಕೊಂಡಿದ್ದರೂ ಅದನ್ನು ಪ್ರಾಗೈತಿಹಾಸಿಕ ನೆಲೆಯೆಂದು ನೋಡಬೇಕಾಗಿಲ್ಲವೆಂದು ಖಚಿತಪಡಿಸುತ್ತಾರೆ. ರಾಯಚೂರು ಜಿಲ್ಲೆಯಲ್ಲಿ ಹಳೆಯ ಶಿಲಾಯುಗ, ನೂತನ ಶಿಲಾಯುಗ, ತಾಮ್ರ-ಕಬ್ಬಿಣಯುಗದ ಸಂಸ್ಕೃತಿ ಬೆಳೆದು ಬಂದಿದೆ. ಅವುಗಳ ಕಾಲ ಹಾಗೂ ಅಲ್ಲಿ ದೊರೆತ ವಿವಿಧ ಅವಶೇಷಗಳನ್ನು ವಿಸ್ತಾರವಾಗಿ ಕಾಣಿಸುತ್ತಾರೆ. ಇದರಿಂದ ಜಿಲ್ಲೆಯ ಒಟ್ಟು ಪ್ರಾಚೀನ ಇತಿಹಾಸವು ಕಣ್ಣು ಮುಂದೆ ಹಾದು ಹೋಗುತ್ತದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಕರ್ನಾಟಕವನ್ನು ಹಲವು ರಾಜಮನೆತನಗಳು ಆಳಿವೆ. ಮೌರ್ಯರ ಕಾಲದಲ್ಲಿ ಇದು ಧಾರ್ಮಿಕ ಆಂದೋಲದ ಭಾಗವಾಗಿ ಕಾಣಿಸಿಕೊಂಡಿದೆ. ಅಶೋಕನ ಶಾಸನಗಳಲ್ಲಿ ಕಾಣಸಿಗುವ ಆತನ ಸಾಮ್ರಾಜ್ಯದ ದಕ್ಷಿಣ ಪ್ರಾಂಥದ ರಾಜದಾನಿ ‘ಸುವರ್ಣಗಿರಿ’ ಯಾವುದು? ಎಂಬ ಪ್ರಶ್ನೆಗೆ ಇದುವರೆಗೂ ಸಮರ್ಪಕವಾದ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇಲ್ಲೆಲ್ಲ ವಿದ್ವಾಂಸರು ವಸ್ತುನಿಷ್ಟ ಮಾಹಿತಿಗಿಂತ ತಮ್ಮ ಪ್ರದೇಶದ ಅಸ್ಮಿತೆಗೆ ಆದ್ಯತೆ ನೀಡಿದ್ದು ಎದ್ದುಕಾಣುತ್ತದೆ. ಹೀಗಾಗಿ ಚಾರಿತ್ರಿಕ ಮಹತ್ವವುಳ್ಳ ನೈಜ ‘ಸುವರ್ಣಗಿರಿ’ಯನ್ನು ಗುರುತಿಸುವಲ್ಲಿ ಇಂದಿಗೂ ಸೋತಿದ್ದೇವೆ; ಮತ್ತು ಎಡವುತ್ತಲೇ ಸಾಗಿದ್ದೇವೆ ಎಂದು ಕೃತಿಯು ತಿಳಿಸುತ್ತದೆ.

ಮೂರನೆಯ ಭಾಗವು ಮುದಗಲ್ಲು ಶಾಸನಗಳ ಅಧ್ಯಯನಕ್ಕೆ ಮೀಸಲಾಗಿದೆ. ಇಲ್ಲಿ ಕನ್ನಡ, ಸಂಸ್ಕೃತ, ತೆಲುಗು, ಪರ್ಷಿಯನ್, ಅರೇಬಿಕ್, ಗುಜರಾತಿ ಭಾಷೆಗೆ ಸೇರಿದ 99 ಶಾಸನಗಳು ದೊರೆತಿವೆ. ಶಾಸನಗಳ ಆರಂಭದ ಶ್ಲೋಕ/ವಸ್ತುವಿಷಯವನ್ನು ಆಧರಿಸಿ ಇವುಗಳನ್ನು ಜೈನ, ವೈಷ್ಣವ, ಶೈವ ಎಂದು ವರ್ಗಿಕರಿಸಬಹುದು. ನಾಲ್ಕನೆಯ ಭಾಗದಲ್ಲಿ ಆಡಳಿತ, ಅಧಿಕಾರಿಗಳು, ಧಾರ್ಮಿಕ-ಆರ್ಥಿಕ-ಸಾಮಾಜಿಕ-ಶೈಕ್ಷಣಿಕ ವ್ಯವಸ್ಥೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದಾರೆ. ವಿಸ್ತಾರವಾದ ಸಾಮ್ರಾಜ್ಯವನ್ನು ಚಕ್ರವರ್ತಿಗಳು ಆಡಳಿತದ ಅನುಕೂಲಕ್ಕಾಗಿ ವಿವಿಧ ಉಪವಿಭಾಗಗಳಾಗಿ ವಿಂಗಡಿಸಿದ್ದರು. ಮುದಗಲ್ಲು ಪಟ್ಟಣ ಎಡೆದೊರೆ ನಾಡಿನ ಕರಡಿಕಲ್ಲು ಉಪವಿಭಾಗದಲ್ಲಿ ಸೇರಿತ್ತು. ಚಕ್ರವರ್ತಿ, ಮಾಂಡಳಿಕ/ಸಾಮಂತ, ಗಾವುಂಡ, ದೇಸಾಯಿ-ದೇಶಮುಖ-ಮಾಮಲೇದಾರ-ನಾಯಕ ಮೊದಲಾದವರು ಆಳುವ ವರ್ಗದಲ್ಲಿ; ಮಂತ್ರಿ, ದಂಡನಾಯಕ, ಪೆರ್ಗಡೆ, ಕುಲಕರ್ಣಿ, ಹವಾಲ್ದಾರ, ತಳವಾರ, ಫೌಜದಾರ ಮುಂತಾದವರು ಅಧಿಕಾರಿ ವರ್ಗದಲ್ಲಿ ಸೇರಿದ್ದಾರೆ. ಈ ಎರಡೂ ಸಂದರ್ಭದಲ್ಲಿ ಶಾಸನಗಳು ಅವರನ್ನು ‘ಆಳುತ್ತಿದ್ದ’ರೆಂದು ಕೃತಿಯಲ್ಲಿ ಹೇಳಲಾಗಿದೆ. 

About the Author

ಮಹಾದೇವಪ್ಪ ನಾಗರಾಳ

ಡಾ. ಮಹಾದೇವಪ್ಪ ನಾಗರಾಳ ಅವರು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಅಸಕ್ತಿಯನ್ನು ಹೊಂದಿದ್ದಾರೆ. ಅಧ್ಯಯನ ಅವರ ಸಾಹಿತ್ಯ ಪ್ರಕಾರವಾಗಿದೆ. ಕೃತಿಗಳು: ಮುದಗಲ್ಲ ಮೊಹರಂ ಆಚರಣೆ ಮತ್ತು ಸಾಹಿತ್ಯ, ಮುದಗಲ್ಲ ಇತಿಹಾಸ ಮತ್ತು ಶಾಸನಗಳು ...

READ MORE

Excerpt / E-Books

  

Related Books