ಪ್ರಸ್ತುತ ಗ್ರಂಥವು ಗೋವೆಯಲ್ಲಿ ನೆಲೆಸಿರುವ ಕೊಂಕಣಿ ಲೇಖಕಿ ಮಾಯಾ ಅನಿಲ್ ಖರಂಗಟೆಯವರ ಹದಿನಾಲ್ಕು ಕಥೆಗಳ ಅನುವಾದ ಸಂಕಲನ, ಇಲ್ಲಿಯ ಬಹುತೇಕ ಕಥೆಗಳು ಸ್ತ್ರೀಪಾತ್ರಕೇಂದ್ರಿತವಾಗಿವೆ. ಡಾ.ಗೀತಾ ಶೆಣೈ ಅವರು ಕನ್ನಡ ಅನುವಾದಕರು. ಸಮಾಜ ಮತ್ತು ಕೌಟುಂಬಿಕ ಪರಿಸರದಲ್ಲಿ ಹೆಣ್ಣು ಅನುಭವಿಸುವ ನೋವು ಮತ್ತು ಶೋಷಣೆಯನ್ನು ವಿವಿಧ ಸಾಮಾಜಿಕ ಸ್ತರಗಳಲ್ಲಿ, ಸಾಂಸಾರಿಕ ಕಷ್ಟ ಸುಖಗಳಲ್ಲಿ ಅನಾವರಣಗೊಳಿಸುವ ಲೇಖಕಿ, ಹುಟ್ಟಿನಿಂದಲೇ ಶಾಪದ ರೂಪದಲ್ಲಿ ಕಾಡುವ ದೈಹಿಕ ಮತ್ತು ಮಾನಸಿಕ ಕುಂಟಿತ ಬೆಳವಣಿಗೆ ಹೊಂದಿರುವ ಪುಟ್ಟ ಪುಟ್ಟ ಹೆಣ್ಣುಮಕ್ಕಳ ಸ್ಥಿತಿಗತಿಯನ್ನು ಬಿಂಬಿಸುವ ಕತೆಗಳ ಮೂಲಕ ಈ ವಿಶಿಷ್ಟ ಜಗತ್ತನ್ನು ಓದುಗರಿಗೆ ಪರಿಚಯಿಸುತ್ತಾರೆ. ಅದೇ ರೀತಿ ವಯಸ್ಸಾದ ಮಹಿಳೆಯರು ತಮ್ಮ ಮಕ್ಕಳ ಅವಗಣನೆಯನ್ನೂ ಮೀರಿ ಬದುಕುವ ಛಲವನ್ನು ಭರವಸೆಯ ಬೆಳಕಿನಲ್ಲಿ ಚಿತ್ರಿಸುತ್ತಾರೆ. ಮಾಯಾ ಅವರು ತಮ್ಮ ಕಥೆಗಳಲ್ಲಿ ಎತ್ತಿ ತೋರುವ ಸ್ತ್ರೀ ಬದುಕಿನ ಕುರಿತಾದ ಸಾಮಾಜಿಕ ಹಾಗೂ ಕೌಟುಂಬಿಕ ಸಮಸ್ಯೆಗಳು ಹಿಂದಿನಿಂದಲೂ ಮುಂದುವರಿದು ಬಂದವುಗಳೇ. ಆದರೆ ಇಂದು ಆರ್ಥಿಕವಾಗಿ ಸಬಲಳಾಗಿರುವ ಮಹಿಳೆ ತನ್ನ ವಿವೇಚನಾ ದೃಷ್ಟಿಯನ್ನು ಬೆಳೆಸಿಕೊಂಡು, ಮಾನಸಿಕ ಸಿದ್ಧತೆಯ ಮೂಲಕ ವಿಮುಕ್ತಿಯ ಪಥದಲ್ಲಿ ಸಾಗುವ ಮತ್ತು ಅದನ್ನು ಸ್ವೀಕರಿಸುವ ಸಮಾಜದ ಪ್ರಗತಿಪರ ದೃಷ್ಟಿಕೋನವನ್ನು ಸಂವಾದಿಯಾಗಿ ಚಿತ್ರಿಸಿರುವುದು ಈ ಕಥೆಗಳ ಹೆಚ್ಚುಗಾರಿಕೆಯಾಗಿದೆ.
©2024 Book Brahma Private Limited.