"ಮತ್ತೆ ಮತ್ತೆ ಹೊಸತು ಜನ್ಮ" ಒಂದು ಸಾಮಾಜಿಕ ಕಾದಂಬರಿ. ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಒಬ್ಬ ಸಾಮಾನ್ಯ ಹುಡುಗಿಯ ಕಥೆ. ಅವಳು ದೊಡ್ಡವಳಾಗುತ್ತ ಹೋದಂತೆ, ತನ್ನ ವಯಸ್ಸಿನ ಎಲ್ಲ ಹುಡುಗಿಯರಂತೆ ಯೋಚಿಸದೆ ವಿಭಿನ್ನ ರೀತಿಯಲ್ಲಿ ಯೋಚಿಸತೊಡಗುತ್ತಾಳೆ. ತಾನು ಎಲ್ಲರಂತೆ ಸಾಮಾನ್ಯರಲ್ಲಿ ಸಾಮಾನ್ಯವಾಗಿ ಬದುಕದೆ ಒಂದು ಹೊಸ ಹಾಗೂ ಕೆಳಸ್ತರದ ಜನರನ್ನು ಮೇಲುಪದರಕ್ಕೆ ಒಯ್ಯುವ ಕನಸನ್ನು ಕಾಣುತ್ತ, ಅದಕ್ಕಾಗಿ ಪ್ರಯತ್ನವನ್ನೂ ಮಾಡುತ್ತಾಳೆ.
ಮಣ್ಣಲ್ಲಿ ಮಣ್ಣಿನಂತೆ ಬದುಕುತ್ತಿರುವ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವ, ಪತಿಯ, ಅವನ ಕುಟುಂಬದ ಜನರ ದಬ್ಬಾಳಿಕೆಯಲ್ಲಿ ಉಸಿರೆತ್ತದೆ ಬಾಳುತ್ತಿರುವ ಮಹಿಳೆಯರನ್ನು ಅಕ್ಷರಸ್ಥರನ್ನಾಗಿಯೂ, ಸ್ವಾವಲಂಬಿಗಳನ್ನಾಗಿಯೂ ಮಾಡುವ ಕನಸು ಕಂಡವಳ, ಅವರ ಬಣ್ಣಗೆಟ್ಟ ಬದುಕಿನಲ್ಲಿ ಆತ್ಮಗೌರವದ ಬಣ್ಣವನ್ನು ತುಂಬಲು ಶ್ರಮಿಸಿ, ಅವರಿಗಾಗಿ ತನ್ನ ಜೀವನವನ್ನೇ ಮೀಸಲಾಗಿರಿಸಿದ ಯುವತಿಯ ಕಥೆಯಿದು. ಅವಳ ಬದುಕಿನಲ್ಲೂ ಎಲ್ಲರಂತೆ ವಸಂತವು ಕಾಲಿಡುತ್ತದೆ. ಅವಳ ಕನಸುಗಳನ್ನು ತನ್ನ ಕಣ್ಣಿನಿಂದ ಕಾಣುವ ಯುವಕನ ಪರಿಚಯವಾಗುತ್ತದೆ. ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಆದರೆ ದೈವಕ್ಕೆ ಆದು ಒಪ್ಪಿಗೆಯಾಗುವುದಿಲ್ಲ. ಇಡಿಯ ಜೀವನದಲ್ಲಿ ಆ ಪ್ರೇಮ ವಸಂತದ ಆಯುಷ್ಯವು ಕೇವಲ ಕೆಲವೇ ಕ್ಷಣಗಳದಾಗಿ ಉಳಿಯುತ್ತದೆ. ಮುಂದೆ ಅವಳು ತನ್ನ ಇಡಿಯ ಜೀವನವನ್ನು ಜನಸೇವೆಗಾಗಿಯೇ ಮುಡಿಪಾಗಿಡುತ್ತಾಳೆ.
ತನ್ನ ಪ್ರಿಯಕರ ಸೌಮಿತ್ರನು ಕಂಡ ಕನಸುಗಳನ್ನು ನನಸಾಗಿಸುವತ್ತ ದಾಪುಗಾಲು ಇಡುತ್ತಾಳೆ. ಅನಾಥ ಮಗು ಚುಕ್ಕಿಯನ್ನು ದತ್ತು ತೆಗೆದುಕೊಳ್ಳುವುದಲ್ಲದೆ ಇನ್ನೂ ಅನೇಕ ಅನಾಥ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಹೊರುತ್ತಾಳೆ. ಜೀವನದಲ್ಲಿ ಅನೇಕ ಪ್ರಸಂಗಗಳಲ್ಲಿ ನಾವು ನಡೆದ ದಾರಿಗೂ ನಡೆಯಬೇಕಾದ ದಾರಿಗೂ ಬಹಳ ಅಂತರವಾಗಿ, ಹೊಸ ತಿರುವನ್ನೇ ಪಡೆಯಬೇಕಾದ ಸಂದರ್ಭವೂ ಎದುರಾಗುತ್ತದೆ. ಇಂಥ ಸಂದರ್ಭಗಳಲ್ಲಿ ಮನುಷ್ಯನು ಹಳೆಯದನ್ನು ಮರೆತು ಹೊಸ ಮಾರ್ಗವನ್ನು ತನ್ನದಾಗಿಸಿಕೊಳ್ಳುವುದು ಸುಲಭವಾದದ್ದೇನಲ್ಲ. ಅದು ಮತ್ತೊಂದು ಜನ್ಮವನ್ನು ಪಡೆದಂತೆಯೇ! ಇಂಥ ಅನೇಕ ತಿರುವುಗಳನ್ನು ಎದುರಿಸಿದ ಈ ಕಾದಂಬರಿಯ ನಾಯಕಿ ಮುಕ್ತಾಳಿಗೆ ಮತ್ತೆ ಮತ್ತೆ ಹೊಸತು ಜನ್ಮ ವೆತ್ತಿದ ಅನುಭವವಾಗುವುದು ಸಹಜ! ಇದು ಕಾದಂಬರಿಯ ಕಥಾವಸ್ತು. ನಾಯಕಿ ಮುಕ್ತಾ ಸಾಮಾನ್ಯಳಿಂದ ಅಸಾಮಾನ್ಯಳಾಗಿ ಬೆಳೆಯುವ ಪ್ರಕ್ರಿಯೆ ಇಲ್ಲಿದೆ.
©2024 Book Brahma Private Limited.