ಡಾ. ರಾಜಶ್ರೀ ಕಿಶೋರ ಅವರು 'ಕನ್ನಡ ತತ್ವಪದಕಾರರ ಸಾಹಿತ್ಯಧಾರೆ'ಯ ಮೂಲಕ ತತ್ವಪದಗಳ ಸಂಕಲನ ಸಾಹಿತ್ಯವನ್ನು ಉತ್ತಮ ಕಾಣಿಕೆ ನೀಡಿದ್ದಾರೆ. ತತ್ವಪದಗಳ ಸಾಹಿತ್ಯಕತೆ ಮತ್ತು ಸಾಧನಾತ್ಮಕ ಕತೆಗಳ ಇಮ್ಮಗ್ಗುಲುಗಳನ್ನು ಈ ಸಂಗ್ರಹ ಕಾಪಾಡಿಕೊಂಡಿದೆ. ಇಲ್ಲಿ ಒಟ್ಟು ಗೂಡಿಸಲ್ಪಟ್ಟಿರುವ ಬಹುತೇಕ ರಚನೆಗಳು ರಾಯಚೂರಿನ ಸುತ್ತಮುತ್ತಲ ಸೀಮೆಯವರಾದರೂ ಇತರ ಪ್ರದೇಶಗಳ ಜನಪ್ರಿಯ ರಚನೆಗಳನ್ನು ಒಳಗೊಂಡಿದೆ. ಉದಾಹರಣಗೆ ಶರೀಫರ, ಸಣ್ಣಪ್ಪನವರ ರಚನೆಗಳು ಪ್ರಾದೇಶಿಕ ಮಿತಿಯನ್ನು ದಾಟಿ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ಹೊಂದಿವೆ. ಸಂಸ್ಕೃತ ರಚನೆಯೂ ಇಲ್ಲಿ ಸೇರಿದೆ. ತತ್ವಪದಗಳು ಭಾಷೆಯಲ್ಲಿ ಅಚ್ಚಕನ್ನಡದ ರಚನೆಗಳಾದರೂ ಅವುಗಳ ವಸ್ತುಗಳ ಹರಿವು ಭಾರತೀಯವಾದುದು. ಈ ವಿಶಾಲ ದೃಷ್ಟಿ ಪ್ರಸ್ತುತ ಸಂಗ್ರಹಕ್ಕೆ ಪ್ರೇರಣೆ ನೀಡಿದೆ. ಇಡೀ ಭಾರತದ ಅವಧೂತ ಪರಂಪರೆಗಳ ಮುಖವಾಣಿಯಾಗಿ ಭಾರತೀಯ ಸಮಾಜದ ಸಮಸ್ತ ವರ್ಗ ಗಳನ್ನು ಆತುಕೊಂಡ ತತ್ವಪದ ಪರಂಪರೆ ಇಹ-ಪರ, ಜೀವ-ಶಿವ, ತಾನು-ಇದಿರು, ಪ್ರಾದೇಶಿಕ ಸಮಸ್ತ ಹೀಗೆ ಎಲ್ಲಾ ವೈರುದ್ಯ ಬಿಂದುಗಳನ್ನೂ ಒಂದು ಮಹಾನ್ ಸಮನ್ವಯ ಸಂಸ್ಕೃತಿಯ ದ್ಯೋತಕವೆನ್ನುವುದನ್ನು ಈ ಕೃತಿ ಸಾರಿ ಸಾರಿ ಇಂದಿನ ಒಡಕು ಕೆಡಕುಗಳ ಸಮಾಜಕ್ಕೆ ಸಂಜೀವಿನಿಯಂತಿದೆ ಎಂದು ಎಚ್.ಎಸ್. ಶಿವಪ್ರಕಾಶ್ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.