ಕನಕದಾಸರ ಒಟ್ಟು ಕೃತಿ ಕೀರ್ತನೆಗಳನ್ನು ಜಾನಪದೀಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲಾಗಿ ರೂಪಿತವಾದ ಕೃತಿ ಲೇಖಕ ನದಾಫ್ ಎಚ್.ಎಚ್ ಹತ್ತಿಮತ್ತೂರ ಅವರ ‘ಕನಕದಾಸರ ಕೃತಿಗಳು’. ಈ ಮಹಾ ಪ್ರಬಂಧವು ಒಟ್ಟು ಎಂಟು ಅಧ್ಯಾಯಗಳನ್ನು ಒಳಗೊಂಡಿದ್ದು ಮೊದಲನೇ ಅಧ್ಯಾಯದಲ್ಲಿ ಕನ್ನಡ ಸಾಹಿತ್ಯ ಮತ್ತು ಜಾನಪದ ಅಂತರ್ ಸಂಬಂಧವನ್ನು ಕುರಿತು ಚರ್ಚಿಸಲಾಗಿದೆ. ಸಾಹಿತ್ಯ ಮತ್ತು ಜಾನಪದ ನಡುವಿನ ಸಂಬಂಧ ಹೇಗೆ ಪರಸ್ಪರ ಪೂರಕವಾಗಿವೆ ಎಂಬ ಅಂಶವನ್ನು ಇಲ್ಲಿ ಗುರುತಿಸಲಾಗಿದೆ. ಎರಡನೆಯ ಅಧ್ಯಾಯವು ಕನಕದಾಸರ ಜೀವನ ಕಾಲ ಮತ್ತು ಮತ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ. ಐತಿಹಾಸಿಕ ವ್ಯಕ್ತಿಯೊಬ್ಬನ ಜೀವನ ಚರಿತ್ರೆ ಐತಿಹ್ಯ ಮತ್ತು ದಂತ ಕಥೆಗಳಾಗಿ ಮಾರ್ಪಾಡುಗೊಳ್ಳುವುದರ ಹಿಂದಿನ ಅಂಶಗಳನ್ನು ಇಲ್ಲಿ ಚರ್ಚಿಸಲಾಗಿದೆ. ಮೂರನೆಯ ಅಧ್ಯಾಯದಲ್ಲಿ ಕನಕದಾಸರ ಎಲ್ಲ ಕೃತಿಗಳ ವಸ್ತು ಮತ್ತು ಆಶಯಗಳನ್ನು ಪರಿಚಯಿಸಿಕೊಡಲಾಗಿದೆ. ಕನಕದಾಸರ ಭಾಷಾಶೈಲಿಯನ್ನು ವಿವರಿಸುವಲ್ಲಿ ಕನಕದಾಸರು ದೇಶಿ ಕವಿಯಾದುದರಿಂದ ಜನಪದ ಕಾವ್ಯಮೀಮಾಂಸೆಯ ಹಿನ್ನೆಲೆಯಲ್ಲಿ ಅವರ ಕೃತಿಗಳನ್ನು ಅಧ್ಯಯನ ಮಾಡಲಾಗಿದೆ. ಅವರ ಕೃತಿ ಕೀರ್ತನೆಗಳಲ್ಲಿ ಹಾಸುಹೊಕ್ಕಾಗಿರುವ ಜನಪದ ಗೀತ ಸಂಪ್ರದಾಯಗಳ ಶೈಲಿಯ ನಮೂನೆಗಳನ್ನು ಗುರುತಿಸಿ ವಿವರಿಸಲಾಗಿದೆ. ಕನಕದಾಸರ ಕೃತಿಗಳಲ್ಲಿ ಅಡಕವಾಗಿರುವ ಸಮಾಜ ವಿಡಂಬನೆಯ ವೈಚಾರಿಕತೆಯ ಅಂಶಗಳನ್ನು, ಮೌಲ್ಯ ಪ್ರಸಾರಣೆಗಳನ್ನು ಮತ್ತು ಅನುಭಾವವನ್ನು ವಿವರಿಸಲಾಗಿದೆ. ಒಟ್ಟಾರೆಯಾಗಿ ಹರಿದಾಸ ಸಾಹಿತ್ಯದಲ್ಲಿ ವಿಭಿನ್ನ ಆಲೋಚನೆ ಮತ್ತು ಧೋರಣೆಗಳನ್ನಿರಿಸಿಕೊಂಡ ಕನಕದಾಸರ ಕೃತಿಗಳನ್ನು ಜಾನಪದೀಯ ನೆಲೆಯಲ್ಲಿ ಅಭ್ಯಾಸ ಮಾಡಲಾಗಿದೆ.
©2024 Book Brahma Private Limited.