ಗುಜರಾತಿ ಲೇಖಕ ಕಾಕಾಸಾಹೇಬ ಕಾಲೇಲಕರ ಅವರ ಕೃತಿಯ ಕನ್ನಡಾನುವಾದ ‘ಜೀವನಲೀಲೆ’. ಈ ಕೃತಿಯನ್ನು ಹಿರಿಯ ಲೇಖಕ ಸಾಲಿ ರಾಮಚಂದ್ರರಾಯರು ಕನ್ನಡೀಕರಿಸಿದ್ದಾರೆ. 1970ರಲ್ಲಿ ಪ್ರಥಮ ಮುದ್ರಣಗೊಂಡಿದ್ದ ಈ ಕೃತಿ 2021ರಲ್ಲಿ ಮರುಮುದ್ರಣಗೊಂಡಿದೆ. ಕಾಕಾಸಾಹೇಬ ಕಾಲೇಲಕರರು ಗುಜರಾತಿ, ಮರಾಠಿ ಮತ್ತು ಹಿಂದೀ-ಹಿಂದೂಸ್ತಾನಿಗಳಲ್ಲಿ ಖ್ಯಾತಿವೆತ್ತ ಲೇಖಕರು. ಅವರು ಮಹಾತ್ಮಗಾಂಧಿಯವರ ಸಹಚರರು ಮತ್ತು ಅತ್ಯಂತ ಪ್ರವಾಸ ಪ್ರಿಯರು. ಅವರ ವ್ಯಕ್ತಿತ್ವವನ್ನು ಪ್ರತಿನಿಧಿಸುವ ಲಲಿತ ಪ್ರಬಂಧಗಳ ಈ ಸಂಗ್ರಹದಲ್ಲಿ ಅವರು ಭಾರತದ ಪ್ರಮುಖ ನದಿಗಳ, ಜಲಪ್ರಪಾತಗಳ ಮತ್ತು ಸಮುದ್ರತೀರಗಳ ಸುಂದರ ಶಬ್ದ-ಚಿತ್ರಗಳನ್ನು ಮೂಡಿಸಿದ್ದಾರೆ. ತಾವು ಪ್ರಕೃತಿಯಲ್ಲಿ ಕಾಣುವ ಸಂಗತಿಗಳ, ವಿಶೇಷತಃ ಜಲಾಶಯಗಳ ಸೌಂದರ್ಯವನ್ನು ಕಾಲೇಲಕರರು ಬಹು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಭೂತಕಾಲೀನ ಸಂಸ್ಮರಣಗಳಿಂದ ಬಣ್ಣಗೊಳಿಸಿ ಪೌರಾಣಿಕ ಕಥೆಗಳಿಂದ ಮೆರುಗು ಕೊಟ್ಟು ಅವನ್ನು ಸಾಹಿತ್ತ್ಯಿಕ ಉದಾಹರಣೆಗಳಿಂದ ಬೆಳಗಿಸಿದ್ದಾರೆ. ಮಹಾಭಾರತದಲ್ಲಿ ನದಿಗಳು ವಿಶ್ವದ ಮಾತೆಯರೆಂದು ಕರೆಯಲ್ಪಟ್ಟಿವೆ. ಕಾವ್ಯಾತ್ಮಕವಾದ ಗದ್ಯದಲ್ಲಿ ಅವುಗಳಿಗೆ ಲೇಖಕರು ಅರ್ಪಿಸಿದ ಶದ್ಧಾಂಜಲಿಯನ್ನು ಇಲ್ಲಿ ಕಾಣಬಹುದು. ಮೂಲತಃ ಗುಜರಾತಿಯಲ್ಲಿದ್ದ ಈ ಪುಸ್ತಕವನ್ನು ಸಾಹಿತ್ಯ ಅಕಾಡೆಮಿಯು ಇತರ ಭಾರತೀಯ ಭಾಷೆಗಳಲ್ಲಿ ಅನುವಾದಕ್ಕೆ ಉತ್ಕೃಷ್ಟ ಕೃತಿಯೆಂದು ಆರಿಸಿತು. ಹಿಂದೀ, ಬಂಗಾಲಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಇದು ಈಗಾಗಲೇ ಅನುವಾದಿತವಾಗಿದೆ. ನಗೀನದಾಸ ಪರೇಖ ಅವರು ಈ ಗ್ರಂಥಕ್ಕೆ ಮಹತ್ತ್ವ ಪೂರ್ಣವಾದ ವಿವರಣಾತ್ಮಕ ಅನುಬಂಧಗಳನ್ನು ಸಿದ್ಧಪಡಿಸಿದ್ದಾರೆ. ಶ್ರೀ ಸಾಲಿ ರಾಮಚಂದ್ರರಾಯರು ಇದನ್ನು ಕನ್ನಡಕ್ಕೆ ಪರಿವರ್ತಿಸಿದ್ದಾರೆ.
©2024 Book Brahma Private Limited.