’ಅಭಿನವ’ದ ಯು.ಆರ್. ಅನಂತಮೂರ್ತಿ ಗೌರವ ಮಾಲಿಕೆಯಲ್ಲಿ ಪ್ರಕಟವಾದ ೧೧ ಪುಸ್ತಕ ಮೊಗಳ್ಳಿಯವರ ’ಜಾತಿ ಮೀಮಾಂಸೆ’. ’ಜಾತಿ ಮೀಮಾಂಸೆ’ ಎಂಬ ಪ್ರಯೋಗ ಮೊದಲು ಬಳಸಿದವರು ಕೇರಳದ ನಾರಾಯಣ ಗುರುಗಳು. ಅರ್ಧ ಭಾಗ ಸಂಸ್ಕೃತದಲ್ಲೂ ಉಳಿದರ್ಧ ಮಲಯಾಳಂ ಭಾಷೆಯಲ್ಲೂ ಇರುವ ಅವರ 'ಜಾತಿ ಮೀಮಾಂಸಾ' ಎಂಬ ಪದ್ಯ ’ಜಾತಿಯೆಂದರೆ ಏನು ಎಂಬುದನ್ನು ಬಹಳ ಸರಳವಾಗಿ ಹಸುವೆಂಬುದು ಗೋವಿನ ಜಾತಿಗೆ ಸೇರುವಂತೆ ಮನುಷ್ಯ ಮನುಷ್ಯ ಜಾತಿಗೆ ಸೇರಿದ್ದಾನೆ' ಎಂದು ವಿವರಿಸುತ್ತದೆ. ತಮ್ಮ ಜೀವನದುದ್ದಕ್ಕೂ ಅವರು ಪ್ರತಿಪಾದಿಸಿದ ಕವಿತೆಯ ಜೊತೆಗೆ ಇದನ್ನು ಗ್ರಹಿಸಿದರೆ ಅವರು ನಡೆಸಿದ ಮಿಮಾಂಸೆಯ ಆಳ ತಿಳಿಯುತ್ತದೆ. ಅದ್ವೈತವನ್ನು ಕೇವಲ ಪಾಶ್ವಿಕ ಪರಿಕಲ್ಪನೆಯನ್ನಷ್ಟೇ ನೋಡದೆ ಮನುಷ್ಯ ಸಮಾನತೆಯ ಮಾರ್ಗವನ್ನಾಗಿ ಅವರು ಕಂಡಿದ್ದರು. ಮೊಗಳ್ಳಿಯವರ ’ಜಾತಿ ಮೀಮಾಂಸೆ’ ಆಧುನಿಕ ಜಾತಿಯ ಅನುಭವಗಳನ್ನು ಆಧುನಿಕ ಸಂದರ್ಭದಲ್ಲಿ ಹಿಡಿದಿಡುತ್ತದೆ. ಇಲ್ಲಿ ಸಾಹಿತ್ಯಕ ಸಂವೇದನೆಯಿಂದ ಆರಂಭಿಸಿ ರಾಜಕೀಯ ಸಂವೇದನೆಯ ತನಕ ವಿಸ್ತರಿಸಿರುವ ಇಲ್ಲಿನ ಬರಹಗಳು ದಲಿತತ್ವವನ್ನು ಕೇಂದ್ರವಾಗಿಟ್ಟುಕೊಂಡು ಜಾತೀಯ ಅನುಭವದ ವಿವಿಧ ಮಜಲುಗಳನ್ನು ವಿಶ್ಲೇಷಣೆಗೆ ಒಳಪಡಿಸುತ್ತವೆ. ಹಿಂದೊಮ್ಮೆ ಅನಂತಮೂರ್ತಿಯವರೇ ಹೇಳಿದಂತೆ `ತಕರಾರಿನ ಕವಿ ಮೊಗಳ್ಳಿ' ಇಲ್ಲಿ ಎತ್ತುವ ತಕರಾರುಗಳು ಆಯಾ ಬರಹದ ಸಂದರ್ಭವನ್ನು ಮಿಲಿ ನಿಂತು ಓದುಗರನ್ನು ಚಿಂತನೆಗೆ ಹಚ್ಚುತ್ತವೆ.
©2024 Book Brahma Private Limited.