ಆರ್. ಶೇಷಶಾಸ್ತ್ರಿ ಅವರು ಅನುವಾದಿಸಿರುವ ಆತ್ಮಕಥಾ ಸಂಕಲನ ಹಂಪಿಯಿಂದ ಹರಪ್ಪಾದವರೆಗೆ. 2001ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ತೆಲುಗಿನ ಮೊದಲ ಆತ್ಮ ಕಥೆ ಇದು. ತಿರುಮಲ ರಾಮಚಂದ್ರ (೧೯೧೩ ೧೯೯೭) ಆಂಧ್ರ ಪ್ರದೇಶದ ಸಾಹಿತ್ಯ ಲೋಕದಲ್ಲಿ ದೊಡ್ಡ ಹೆಸರು. ಅವರ ಇಡೀ ಬದುಕೇ ಒಂದು ಕೊನೆ ಇಲ್ಲದ ಹುಡುಕಾಟ. ಹುಟ್ಟಿದ್ದು ಹಂಪಿಯಲ್ಲಿ, ವಿದ್ಯಾಭ್ಯಾಸಕ್ಕಾಗಿ ಅಲೆದಾಡಿದ ಪ್ರದೇಶಗಳು ಆನೆಗೊಂದಿ, ತಿರುಪತಿ, ನೆಲ್ಲೂರು, ಚೆನ್ನೈ.. ವಿದ್ಯಾಭ್ಯಾಸ ಪೂರ್ಣ ಗೊಳಿಸಲೆ ಇಲ್ಲ. ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡರು. ತಿರುಚಿನಾಪಳ್ಳಿ ಜೈಲಿನಲ್ಲಿ ಇದ್ದರು. ಕ್ರಾಂತಿಕಾರಿ ಗಳ ಜೊತೆಗೂ ಸಂಪರ್ಕ ಉಂಟಾಗಿ ಸರಕಾರದಿಂದ ತುಂಬಾ ಕಿರುಕುಳಕ್ಕೆ ಒಳಗಾದರು. ಸಂಸ್ಕೃತದಲ್ಲಿ ಪ್ರಾವೀಣ್ಯತೆ ಇದ್ದ ಕಾರಣ ಪುರಾತನ ಗ್ರಂಥಗಳ ಅಭ್ಯಾಸ ಮಾಡುವ, ಅನುವಾದ ಮಾಡುವ ಕೆಲಸ ಅವರದಾಯಿತು. ಚೆನ್ನೈ, ತಂಜಾವೂರು, ಲಾಹೋರ್ ಗಳಲ್ಲಿ ಕೆಲಸ ಮಾಡಿದರು. ಸ್ವಲ್ಪ ಕಾಲ ಅಂದರೆ ಎರಡನೇ ಮಹಾಯುದ್ಧದ ಸಮಯದಲ್ಲಿ ಬಲೂಚಿಸ್ತಾನದ ಚಮನ್ ಮತ್ತು ಕ್ವೆಟ್ಟ ನಗರಗಳಲ್ಲಿ ಇದ್ದರು. ಅಲ್ಲಿಂದ ವಾಪಸ್ ಬರುವಾಗ ಮೊಹೆಂಜೋದಾರೋ ಮತ್ತು ಹರಪ್ಪ ಭೇಟಿ ಕೂಡ ಆಯಿತು. ಹಂಪಿಯಿಂದ ಹರಪ್ಪಾದವರೆಗೆ , ಅವರ ಈ ಆತ್ಮಕಥೆ ಅವರ ಜೀವನದ ಮೊದಲ 30 ವರ್ಷಗಳ ಕಥೆ ಹೇಳುತ್ತದೆ.
©2025 Book Brahma Private Limited.