ಶೈಲಜಾ ಹಾಸನರವರ ಕಾದಂಬರಿ ಪತ್ತೇದಾರಿ ಕಾದಂಬರಿ ಏನು ದಾಹ, ಯಾವ ಮೋಹ. ಪತ್ರಿಕೆಯಲ್ಲಿ ಧಾರವಾಹಿ ರೂಪದಲ್ಲಿ ಬಂದ ಕಥೆ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಲು ಪುಸ್ತಕ ರೂಪ ತಳೆದಿರುವುದು ಮುಖಪುಟವೇ ಪರಿಚಯಿಸಿತು.ಓದು ಮೊದಲಾಯ್ತು.ತೀರಾ ಸಾಮಾನ್ಯರು ಮಾತನಾಡುವ ಸರಳ ಭಾಷಾಪ್ರಯೋಗ (ಅಸಹಜ ಎಂದೆನಿಸಿದ್ದು ನಿಜವೇ- ಸಾಹಿತಿಗಳು ಭಾಷಾಪಾಂಡಿತ್ಯವೇ ಸಾಹಿತ್ಯ ಪ್ರಾವೀಣ್ಯತೆ ಎಂದು ತೋರ್ಪಡಿಸುತ್ತಾರೆ), ಮಾಮೂಲಿ ಮನುಷ್ಯರು ಮಾತನಾಡುವಂತೆ ಕಥೆ ಸಾಗಿದೆ. ಕಥಾ ನಾಯಕ ಸ್ನೇಹಿತರೊಂದಿಗೆ ಮಡಿಕೇರಿಗೆ ಪ್ರವಾಸ - ಮುಖಪುಟದಲ್ಲೇ ಪತ್ತೇದಾರಿ ಕಾದಂಬರಿ ನಮೂದನೆ, ಓದುಗಳಾಗಿ ಕಾದಂಬರಿಗಾರ್ತಿಯಾಗಿ ಕೆಲವು ಊಹಾಪೂಹಗಳನ್ನು ಮನಸಲ್ಲಿ ಹುಟ್ಟಿಹಾಕಿತು, ಅದರಂತೆ ಕೆಲವು ಎಣಿಸಿದ ತಿರುವುಗಳು ಕಥೆಯಲ್ಲಿ ಸಿಕ್ಕಾಗಿ ಎಣಿಕೆ ಸರಿಯಾದದ್ದಕ್ಕೆ ನನ್ನ ಬೆನ್ನುತಟ್ಟಿಕೊಂಡೆ. ಮಡಿಕೇರಿಯ ಪ್ರವಾಸಿತಾಣಗಳು ಹುಡುಗರ ಜಾಲಿ ಟ್ರಿಪ್ ಕಣ್ಣಮುಂದೆ ಹಾದುಹೋಯ್ತು, ಮಡಿಕೇರಿ ಮಂಜಲ್ಲಿ ಮಿಂದು ಮೈಮರೆತಾಗ ಎದುರಾದ ನಾಯಕನ ಗೆಳೆಯನ ಸಾವು ಸಪ್ಪೆಯಾಗಿದ್ದ ಕಥೆಗೆ ಮಸಾಲೆ ತರುತ್ತದೆ, ನಂತರ ಸಾವಿನ ಹಿಂದಿನ ರಹಸ್ಯ ಭೇದಿಸಲು ಹೊರಟಾಗ ಬಿಚ್ಚಿಕೊಳ್ಳುವ ಕಥೆ, ಅನುಮಾನದ ಹುತ್ತ ಸೊಗಸಾಗಿ ನಮ್ಮನ್ನು ಕಥೆಯೊಂದಿಗೆ ಓದಿಸಿಕೊಂಡು ಸಾಗುತ್ತದೆ. ಮಲೆನಾಡು ಎಸ್ಟೇಟ್ದಾರರ ಶೋಕಿ ಜೀವನ ಕಣ್ಣುಕಟ್ಟುತ್ತದೆ. ಹಣದ ದಾಹ ಹೆಣ್ಣಿನ ಮೋಹ ಶ್ರೀಮಂತಿಕೆಯ ಅಮಲು ಒಬ್ಬ ಮನುಷ್ಯನನ್ನು ಯಾವ ಮಟ್ಟಕ್ಕೆ ಇಳಿಸಬಹುದು, ಜನರ ಕಣ್ಣಲ್ಲಿ ಎಷ್ಟು ಕನಿಷ್ಠ ಮಾಡಬಹುದು ಎಂಬುದರ ಆಳ ಪರಿಚಯಿಸುತ್ತದೆ. ಕಥೆ ಹೋದಂತೆ ಬಿಚ್ಚಿಕೊಳ್ಳುವ ರಹಸ್ಯಗಳು ಬೆಚ್ಚಿಬೀಳಿಸಿದಕ್ಕಿಂತ ಅಯ್ಯೋ ಪಾಪ ಎಂಬ ಅನುಕಂಪದ ಅಲೆ ಎಬ್ಬಿಸುತ್ತವೆ, ಕಥೆಯ ಅಂತ್ಯ ಉಫ್ ಎಂದು ಉಸಿರುಬಿಡುತ್ತಾ ಉಬ್ಬೇರಿಸುತ್ತದೆ. ಸಂಬಂಧಗಳ ಸಂಘರ್ಷ ಉಸಿರುಬಿಗಿ ಇಡಿದು ಓದುವಂತೆ ಮಾಡುತ್ತದೆ. ಕಥೆಯಲ್ಲಿ ಬರುವ ಅನೇಕ ಪಾತ್ರಗಳು ಕಥೆಗೆ ಜೀವತುಂಬುತ್ತದೆ. “ಮೋಹ” ಕಾದಂಬರಿಯ ಎಳೆಯಂತೆ ಇಲ್ಲಿಯೂ ಗಂಡಸಿನ ಹುಚ್ಚುತನದಿಂದ ನೊಂದ ಕುಟುಂಬದ ನೋವಿನ ಚಾಯೆ ಲೇಖಕಿಯ ಮನಸ್ಸನ್ನು ಕೊಂಚ ಪರಿಚಯಿಸಿತು. ಹೆಣ್ಣಿನ ಸಂಕಷ್ಟಗಳು ಸಹನೆ ಗಂಡಿನ ದರ್ಪ ಎರಡೂ ಕಾದಂಬರಿಯ ಮೂಲ ವಿಷಯ. ಕೆಲವೊಂದು ಭಾಗದಲ್ಲಿ ಕೆಲವು ಸನ್ನಿವೇಶಗಳು ಕುತೂಹಲಕರವಾಗಿದೆ . ಒಂದು ಸಿನಿಮಾದಂತೆ ಮಡಿಕೇರಿ ಎಸ್ಟೇಟ್ನಲ್ಲಿ ಒಂದು ಕೊಲೆಯ ಸುತ್ತ ಸಾಗುವ ಕಥೆ ಮನಕಲಕುತ್ತಾ ಸಿನಿಮೀಯವಾಗಿ ಕಣ್ಮುಂದೆ ತರುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ.
©2025 Book Brahma Private Limited.