ಮಿಸ್ರಿ, ನಸ್ರಿ, ರಾಳಜೇನು, ಮೂಲಿಜೇನು, ಕಿರುಜೇನು, ನುಸಿಜೇನು (Tetragonula iridipennis/Indian stingless bee/Dammar bee) ಎಂಬಿತ್ಯಾದಿ ಹೆಸರುಗಳಿಂದ ಕರೆಯುವ ಮುಜಂಟಿ ಜೇನುಕುಟುಂಬಗಳನ್ನು ಗೂಡುಗಳಲ್ಲಿ ಸಾಕಿ, ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿರುವ ಜೇನುತುಪ್ಪವನ್ನು ಉತ್ಪಾದಿಸುವ ಕ್ರಮ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗುತ್ತಿದೆ.
ಈ ಕ್ಷೇತ್ರದಲ್ಲಿ ಕೇರಳ ರಾಜ್ಯವು ಸಾಕಷ್ಟು ಪ್ರಗತಿ ಸಾಧಿಸಿದೆ. ಕರ್ನಾಟಕದಲ್ಲೂ ಅನೇಕರು ಮುಜಂಟಿ ಸಾಕಣೆ ಆರಂಭಿಸಿದ್ದಾರೆ. ವಿಷಮುಕ್ತ ಕೃಷಿ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಹೆಚ್ಚು ಮಹತ್ವದ್ದೆನಿಸಿರುವ ಈ ಜೇನ್ನೊಣಗಳ ಪೋಷಣೆ ವಾಣಿಜ್ಯಿ ದೃಷ್ಟಿಯಿಂದಲೂ ಹೊಸ ಅವಕಾಶಗಳನ್ನು ತೆರೆದಿಟ್ಟಿದೆ. ಆಸಕ್ತಿಯಿದ್ದರೆ ಮಕ್ಕಳಿಂದ ಹಿರಿಯ ವರೆಗೆ ಎಲ್ಲರಿಗೂ ಇದೊಂದು ಒಳ್ಳೆಯ ಹವ್ಯಾಸ. ಉತ್ಸಾಹವಿದ್ದರೆ ಶೂನ್ಯ ವೆಚ್ಚದ ಸ್ಟಾರ್ಟ್ ಅಪ್!
ಮುಜಂಟಿ ಸಾಕಣೆ ಕುರಿತು ಕೇರಳ ಮತ್ತು ಕರ್ನಾಟಕದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ನಡೆಸಿದ ಅಧ್ಯಯನ ಹಾಗೂ ಸ್ವತಃ ಈ ಗೂಡುಗಳನ್ನಿಟ್ಟು ಪಡೆದ ಅನುಭವ ಪುಸ್ತಕ ರೂಪದಲ್ಲಿ ಬಿಂಬಿತವಾಗಿದೆ. ಆಸಕ್ತರಿಗೆ ಇದೊಂದು ಉಪಯುಕ್ತ ಕೈಪಿಡಿಯಾಗುವುದೆಂಬ ಆಶಯ. 25ಕ್ಕೂ ಹೆಚ್ಚು ಅನುಭವ ಕಥನ, 100ಕ್ಕೂ ಅಧಿಕ ಚಿತ್ರಗಳು; 8 ವರ್ಣ ಪುಟಗಳು ಚುಚ್ಚದ ಜೇನು ಸಾಕಣೆಯ ಸಮಗ್ರ ಚಿತ್ರಣವನ್ನು ನೀಡುತ್ತವೆ.
ಕಳೆದೊಂದು ದಶಕದಿಂದ ಕೇರಳದಲ್ಲಂತೂ ಮುಜಂಟಿ ಸಾಕಣೆ ಒಂದು ಕ್ರಾಂತಿಯೇ ಸರಿ. ನೂರು, ಇನ್ನೂರು, ನಾನ್ನೂರು, ಎಂಟುನೂರು, ಸಾವಿರ ಸಂಖ್ಯೆಯಲ್ಲಿ ಈ ಗೂಡುಗಳನ್ನಿಟ್ಟು ವೈಜ್ಞಾನಿಕ ರೀತಿಯಲ್ಲಿ ಪೋಷಣೆ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
‘ಮನೆಗೊಂದು ಮುಜಂಟಿ ಗೂಡು’ ಆ ರಾಜ್ಯದಲ್ಲಿ ಒಂದು ಅಭಿಯಾನದ ರೂಪದಲ್ಲಿ ಸಾಕಾರಗೊಂಡಿದೆ. ಈ ಕ್ಷೇತ್ರದಲ್ಲಿ ಕೃಷಿಕರ ಮಟ್ಟದಲ್ಲಿ ಆಗಿರುವ, ಆಗುತ್ತಿರುವ ಅನುಶೋಧನೆಗಳು ಅಚ್ಚರಿ ಹುಟ್ಟಿಸುತ್ತವೆ. ಹಲವಾರು ಉತ್ಸಾಹಿಗಳು ಮುಜಂಟಿ ಸಾಕಣೆಯ ಅಂತರಂಗ-ಬಹಿರಂಗವನ್ನು ಎಳೆಎಳೆಯಾಗಿ ವಿವರಿಸಿ ವೀಡಿಯೋ ಮಾಡಿ ಯೂಟ್ಯೂಬಿನಲ್ಲಿ ಹರಿಬಿಡುತ್ತಿದ್ದಾರೆ. ಕೇರಳದ ಯಾವುದೋ ಮೂಲೆಯಿಂದ ಜೇನ್ನೊಣಗಳ ಸಮೇತ ಮುಜಂಟಿ ಗೂಡುಗಳು ಕೊರಿಯರ್ ಮೂಲಕ ದೇಶದ ಇನ್ಯಾವುದೋ ಮೂಲೆಗೆ ಸುರಕ್ಷಿತ ಸಾಗಣೆಯಾಗಿ ಹಣ್ಣಿನ ತೋಟದಲ್ಲೋ, ಮನೆಯ ಬಾಲ್ಕನಿ-ವರಾಂಡ-ಉದ್ಯಾನದಲ್ಲೋ ಸ್ಥಾಪನೆಯಾಗುತ್ತಿವೆ.
ಮುಜಂಟಿ ಜೇನು ಕೆ.ಜಿ.ಗೆ ಕನಿಷ್ಠ ಒಂದೂವರೆ ಸಾವಿರದಿಂದ ಗರಿಷ್ಠ ನಾಲ್ಕು ಸಾವಿರ ರೂ. ವರೆಗಿನ ದರದಲ್ಲಿ ಮಾರಾಟವಾಗುತ್ತಿದೆ. ಆದರೂ, ಬೇಡಿಕೆಗೆ ಅನುಗುಣವಾದ ಪೂರೈಕೆ ಆಗುತ್ತಿಲ್ಲ. ಕುಟುಂಬಕ್ಕೆ ಒಂದೂವರೆಯಿಂದ ಎರಡು ಸಾವಿರ ರೂ. ವರೆಗೂ ದರ ಇದೆ. ಮುಜಂಟಿ ಕ್ಷೇತ್ರದಲ್ಲಿಯ ಈ ದಿಢೀರ್ ಉತ್ಕರ್ಷಕ್ಕೆ ಕಾರಣವೇನು ಎಂಬ ಪ್ರಶ್ನೆ ಮೂಡುವುದು ಸಹಜ. ಮುಖ್ಯವಾಗಿ ಮುಜಂಟಿ ಜೇನ್ನೊಣಗಳಿಂದಾಗುವ ಪರಾಗಸ್ಪರ್ಶ ಮತ್ತು ಅದರ ಜೇನಿನ ಔಷಧೀಯ ಗುಣದ ಬಗ್ಗೆ ಹೆಚ್ಚಿನ ಅರಿವು ಮೂಡಿರುವುದೇ ಇದಕ್ಕೆ ಕಾರಣ ಎನ್ನಬಹುದು.
ಜತೆಜತೆಯಲ್ಲೆ ಇದನ್ನು ಶಾಸ್ತ್ರೀಯವಾಗಿ ಸಾಕುವ ವಿಧಿವಿಧಾನಗಳನ್ನು ಕಂಡುಕೊಂಡಿರುವುದು ಕೂಡ ಈ ರಂಗದ ಬೆಳವಣಿಗೆಗೆ ಸಹಕಾರಿಯಾಯಿತು. ಮುಜಂಟಿಯ ವೈಶಿಷ್ಟ್ಯ ಮತ್ತು ಅನುಕೂಲಗಳನ್ನು ಹೀಗೆ ಪಟ್ಟಿ ಮಾಡಬಹುದು: ಇತರ ಜೇನ್ನೊಣಗಳಂತೆ ಮುಜಂಟಿ ಜೇನ್ನೊಣಗಳು ಚುಚ್ಚುವುದಿಲ್ಲ; ಹೀಗಾಗಿ ಮಕ್ಕಳಿಂದ ಹಿರಿಯರ ವರೆಗೆ ಯಾರೂ ಆತಂಕಪಡಬೇಕಿಲ್ಲ. ಮುಜಂಟಿ ರಾಣಿ ನೊಣಕ್ಕೆ ಹಾರಲಾಗುವುದಿಲ್ಲ. ಆದ್ದರಿಂದ ತೊಡುವೆಯಂತೆ ರಾಣಿಯನ್ನನುಸರಿಸಿ ಕುಟುಂಬ ಪರಾರಿಯಾಗುವ ಸಂಭವವಿಲ್ಲ. ಇನ್ನೊಂದು ಅರ್ಥದಲ್ಲಿ, ಒಮ್ಮೆ ಗೂಡಿನಲ್ಲಿಟ್ಟ ಮುಜಂಟಿ ಕುಟುಂಬ ಬಹುತೇಕ ನಶಿಸಿಹೋಗುವುದಿಲ್ಲ. ಕುಟುಂಬ ಬಲಿಷ್ಠವಾದಾಗ ಕೃತಕ ಪಾಲು ಮಾಡದಿದ್ದರೆ ಹೊಸ ಗೈನಿಯೊಂದಿಗೆ (ಜೋಡಿಯಾಗದ ಹೊಸ ರಾಣಿ) ಪಾಲಾಗಿ ಹೊರಹೋಗುವ ಕುಟುಂಬ ಹೆಚ್ಚು ದೂರ ಕ್ರಮಿಸದೆ ಅದೇ ಪರಿಸರದಲ್ಲಿ ನೆಲೆಸುತ್ತದೆ. ಇದರಿಂದ ನಿಮ್ಮ ಮನೆಯ ಸುತ್ತಮುತ್ತವೆ/ತೋಟದೊಳಗೆಯೆ ಮುಜಂಟಿ ಕುಟುಂಬಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಪರಾಗ-ಮಕರಂದಕ್ಕಾಗಿ ಇವು ಕ್ರಮಿಸುವ ದೂರ ತೀರ ಕಮ್ಮಿ. ತೊಡುವೆ 2-3 ಕಿ.ಮೀ. ಹೋಗುವುದಿದ್ದರೆ ಮುಜಂಟಿ ಕೇವಲ 300 ರಿಂದ 800 ಮೀಟರ್ ಒಳಗೆಯೆ ಹಾರಾಡುತ್ತವೆ. ಆದ್ದರಿಂದ ನೀವು ಬೆಳೆಸುವ ಹಣ್ಣಿನ ಮರಗಳು, ತರಕಾರಿ ಹಾಗೂ ವಿವಿಧ ಬೆಳೆಗಳಲ್ಲಿ ಹೆಚ್ಚಿನ ಪರಾಗಸ್ಪರ್ಶ ಏರ್ಪಡುವುದು ಹಾಗೂ ಫಲೋತ್ಪನ್ನಗಳ ಇಳುವರಿ ಹೆಚ್ಚುವುದು ನಿಶ್ಚಿತ.
ತಾರಸಿ ತೋಟ ಮಾಡಿರುವವರಿಗೆ ಇದರಿಂದ ಹೆಚ್ಚಿನ ಪ್ರಯೋಜನ. ತರಕಾರಿಗಳಲ್ಲಿ ಪರಾಗಸ್ಪರ್ಶ ಏರ್ಪಡಲು ಮುಜಂಟಿಯೆ ಪ್ರಮುಖ ಮಾಧ್ಯಮ.ಈ ಜೇನ್ನೊಣಗಳು ಸಣ್ಣಾತಿ ಸಣ್ಣ ಹೂವುಗಳಿಂದ ಪರಾಗ-ಮಕರಂದ ಸಂಗ್ರಹಿಸುತ್ತವೆ. ಬಹುತೇಕ ಔಷಧೀಯ ಸಸ್ಯಗಳು-ಗಿಡಮೂಲಿಕೆಗಳು ಸಣ್ಣಸಣ್ಣ ಹೂವುಗಳನ್ನು ಹೊಂದಿವೆ. ಜೇನ್ನೊಣಗಳು ಅವುಗಳಿಂದ ಮಕರಂದ ಸಂಗ್ರಹಿಸಿ ತಯಾರಿಸುವ ಜೇನಿಗೆ ವಿಶೇಷ ಔಷಧೀಯ ಗುಣ. ಹೆಚ್ಚಿನ ಪರಾಗಸ್ಪರ್ಶದಿಂದಾಗಿ ಪರಿಸರ-ಜೀವವೈವಿಧ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆಗಾಗ ಕುಟುಂಬ ಪರೀಕ್ಷಿಸುವ ಅಗತ್ಯವಿಲ್ಲ. ಜೇನು ತೆಗೆಯುವ ಅಥವಾ ಕುಟುಂಬವನ್ನು ಪಾಲುಮಾಡುವ ಸಂದರ್ಭದಲ್ಲಷ್ಟೆ ಗೂಡನ್ನು ತೆರೆದರೆ ಸಾಕು.
ತಲೆಬಿಸಿಯಿಲ್ಲದ ನಿರ್ವಹಣೆ! ಕುಟುಂಬವನ್ನು ನಿಸರ್ಗದಲ್ಲಿ ನಾವೇ ಹುಡುಕಿಕೊಳ್ಳಬಹುದು. ಗೂಡನ್ನು ನಾವೇ ತಯಾರಿಸಿಕೊಳ್ಳಬಹುದು. ಶೂನ್ಯ ವೆಚ್ಚದಲ್ಲಿ ಆರಂಭಿಸಬಹುದಾದ ಕಸುಬು ಇದು. ತೊಡುವೆಯಂತೆ ಮುಜಂಟಿಗೆ ಮೇಣದ ಹಾಳೆ ಅಳವಡಿಸುವ ಪ್ರಮೇಯವಿಲ್ಲ. ಗೂಡಿನಿಂದ ಜೇನು ತೆಗೆಯುವುದಕ್ಕೆ ಯಂತ್ರದ ಅಗತ್ಯವಿಲ್ಲ.ತೊಡುವೆಯನ್ನು ತೀವ್ರವಾಗಿ ಬಾಧಿಸುತ್ತಿರುವ ಥಾಯ್ ಸ್ಯಾಕ್ಬ್ರೂಡ್ ಸೋಂಕಿನ ಆತಂಕವಿಲ್ಲ. ಮುಜಂಟಿ ಕುಟುಂಬಗಳನ್ನು ಸುಲಭವಾಗಿ ಪಾಲುಮಾಡಿ ನಮಗೆ ಬೇಕಾದಷ್ಟು ಕುಟುಂಬಗಳನ್ನು ನಾವೇ ಅಭಿವೃದ್ಧಿಪಡಿಸಬಹುದು. ಗೂಡುಗಳ ಸಾಗಾಟ ಸುಲಭ. ಕುಟುಂಬ ಸಮೇತ ಕೊರಿಯರ್ ಮೂಲಕವೂ ಕಳಿಸಬಹುದು. ಹವ್ಯಾಸವಾಗಿಯೂ ಸೂಕ್ತ. ಪೇಟೆ ಮನೆಗಳಲ್ಲೂ ಸಾಕಬಹುದು. ಆಪ್ತರಿಗೆ ನೀಡಬಹುದಾದ ಅಮೂಲ್ಯ ಉಡುಗೊರೆಯೂ ಹೌದು. ಸದ್ಯ ಈ ಜೇನು ಕುಟುಂಬಗಳಿಗೂ, ಜೇನುತುಪ್ಪಕ್ಕೂ ಒಳ್ಳೆಯ ಬೇಡಿಕೆ ಇರುವುದರಿಂದ ವಾಣಿಜ್ಯಿಕವಾಗಿಯೂ ಮಹತ್ವದ್ದು.
ಚುಚ್ಚದ ಜೇನು ಎಲ್ಲರಿಗೂ ಅಚ್ಚುಮೆಚ್ಚು
ಯಾರಿಗೂ ಕಡಿಯದ ಅಪರೂಪದ ಮುಜಂಟಿ ಜೇನು (ಮಿಸ್ರಿ ಜೇನು) ಸಾಕಣೆಯ ಬಗ್ಗೆ ಲೇಖಕರು ಅಧ್ಯಯನ ನಡೆಸಿ ತಮ್ಮ ಅನುಭವ ಕಥನವನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಇದರಲ್ಲಿ ಮೂರು ಭಾಗಗಳಿವೆ. ಮೊದಲ ಭಾಗದಲ್ಲಿ ತುಳಸಿ ಸೇರಿ ಹಲವಾರು ಔಷಧಿ ಸಸ್ಯಗಳ ಮಕರಂದ ಹೀರಿ ಉತ್ಕೃಷ್ಟ ಜೇನು ತುಪ್ಪ ನೀಡುವ ಮುಜಂಟಿ ತಳಿ ಜೇನಿನ ವೈಶಿಷ್ಟ್ಯ ಮತ್ತು ಅನುಕೂಲ, ಎರಡನೇ ಭಾಗದಲ್ಲಿ ಕೇರಳದಲ್ಲಿ ಮುಜಂಟಿ ಜೇನು ಕೃಷಿಯಲ್ಲಿ ಆಗಿರುವ ಕ್ರಾಂತಿ, ಮೂರನೇ ಭಾಗದಲ್ಲಿ ಕರ್ನಾಟಕದಲ್ಲೂ ಮುಜಂಟಿಯಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಸವಿವರವಾಗಿದೆ. ಕರ್ನಾಟಕ ಮತ್ತು ಕೇರಳದಲ್ಲಿ ಮುಜಂಟಿ ಜೇನು ಸಾಕಣೆ ಮಾಡುತ್ತಿರುವ ಯಶಸ್ವಿ ಸಾಕಣೆದಾರರ ಯಶೋಗಾಥೆ ಕುರಿತು ಉಪಯುಕ್ತ ಮಾಹಿತಿ ಇದರಲ್ಲಿದೆ. ಹೊಸದಾಗಿ ಜೇನು ಸಾಕಣೆ ಆರಂಭಿಸುವವರಿಗೂ ಇದು ಒಂದು ಕೈಪಿಡಿಯಂತಿದೆ.
ಕೃಪೆ : ಪ್ರಜಾವಾಣಿ (2020 ಮಾರ್ಚಿ 22)
©2025 Book Brahma Private Limited.