ಚಂದ್ರಶೇಖರ ಪಾಟೀಲ (ಚಂಪಾ)
'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು.
ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು.
’ನಮಗೆಲ್ಲ ಕಾವ್ಯಲೋಕದ ರಹಸ್ಯಗಳನ್ನು ತೋರಿಸಿಕೊಟ್ಟವರು ಗುರು ವಿ.ಕೃ. ಗೋಕಾಕರು' ಎನ್ನುವ ಚಂಪಾ ಅವರು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಅವರ ಪ್ರಥಮ ಕವನ ಸಂಕಲನ 'ಬಾನುಲಿ' (1960) ಪ್ರಕಟವಾಯಿತು.
ನವ್ಯ ಮಾರ್ಗದಲ್ಲಿ ತಮ್ಮ ಕಾವ್ಯ ಕೃಷಿ ಆರಂಭಿಸಿದ ಅವರು ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ಎಂ.ಎ. (1962) ಪದವೀಧರರು. ತಾವು ಓದಿದ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ 'ಚಂಪಾ' ಅವರು ಗೆಳೆಯರಾದ ಗಿರಡ್ಡಿ ಗೋವಿಂದರಾಜು, ಸಿದ್ದಲಿಂಗ ಪಟ್ಟಣ ಶೆಟ್ಟಿ ಜೊತೆ ಸೇರಿ ’ಸಂಕ್ರಮಣ’ (1964)ಎಂಬ ದ್ವೈಮಾಸಿಕ ಸಾಹಿತ್ಯ ಪತ್ರಿಕೆ ಆರಂಭಿಸಿದರು, 1976 ರವರೆಗೂ 'ಸಂಕ್ರಮಣ'. ಈ ಮೂರು ಜನರ ಸಂಪಾದಕತ್ವದಲ್ಲಿ ಪ್ರಕಟವಾಯಿತು. ನಂತರ ಮುಂದೆ 'ಚಂಪಾ' ಅವರೇ ಅದರ ಜವಾಬ್ದಾರಿ ವಹಿಸಿಕೊಂಡರು. ಐದು ದಶಕಗಳ ಸತತವಾಗಿ ಪ್ರಕಟವಾದ ಹಿರಿಮೆ 'ಸಂಕ್ರಮಣ'ದ್ದು.
ಹೈದರಾಬಾದಿನ ವಿದೇಶಿ ಭಾಷಾ ಕೇಂದ್ರೀಯ ಸಂಸ್ಥೆಯಿಂದ ಇಂಗ್ಲಿಷ್ನಲ್ಲಿ ಡಿಪ್ಲೊಮಾ ಪದವಿ (1969) ಪಡೆದಿರುವ ಅವರು ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ಭಾಷಾಶಾಸ್ತ್ರದಲ್ಲಿ ಎಂ.ಎ. ಪದವಿ ಗಳಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿ, ಛೇರ್ಮನ್ ಆಗಿ ನಿವೃತ್ತರಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಎಡಪಂಥೀಯ ರಾಜಕೀಯ ಸಿದ್ಧಾಂತಗಳಿಗೆ ಬದ್ಧವಾಗಿರುವ ಲೋಹಿಯಾವಾದಿ 'ಚಂಪಾ' ಅವರು ತುರ್ತುಪರಿಸ್ಥಿತಿಯ ದಿನಗಳಲ್ಲಿ, ಅದನ್ನು ಪ್ರತಿಭಟಿಸಿ, ಜೆ.ಪಿ. ಚಳುವಳಿ ಬೆಂಬಲಿಸಿ ಜೈಲುವಾಸ ಅನಿಭವಿಸಿದ್ದಾರೆ. ಗೋಕಾಕ್ ಚಳುವಳಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಅವರು ಕರ್ನಾಟಕದ ಭಾಷಾ ಚಳುವಳಿಯಲ್ಲಿ ಸಕ್ರಿಯ ಪಾತ್ರವಹಿಸುತ್ತಿದ್ದಾರೆ.
More About Author