ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಮಲ್ಲೂರು ಗ್ರಾಮದಲ್ಲಿ 06 -11- 1997ರಲ್ಲಿ ಜನಿಸಿದ ಇವರು ವೃತ್ತಿಯಲ್ಲಿ ಪತ್ರಕರ್ತರಾಗಿದ್ದಾರೆ. ಉದಯವಾಣಿ, ಪ್ರಜಾಪ್ರಗತಿ, ಬೆವರಹನಿ ಪತ್ರಿಕೆಗಳಲ್ಲಿ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಬೆಂಕಿಯ ಬಲೆ ದಿನಪತ್ರಿಕೆ, ಪಬ್ಲಿಕ್ ಆಪ್ ಮತ್ತು ಪಬ್ಲಿಕ್ ವೈಬ್ ಎಂಬ ಡಿಜಿಟಲ್ ನ್ಯೂಸ್ ಆಪ್‌ಗಳಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಾರಣ, ಸಿನಿ ಸಾಹಿತ್ಯ, ವಿಮರ್ಶೆ, ಕಥೆ, ಲೇಖನ, ವಿಶ್ಲೇಷಣೆ, ಹಾಡು, ಕ್ರಿಕೆಟ್ ಇವರ ಹವ್ಯಾಸಗಳು. ಬರವಣಿಗೆಯೇ ಇವರ ಮೂಲ ವೃತ್ತಿ. ಇಲ್ಲಿಯವರೆಗೆ ಇವರು ೧೫೦ಕ್ಕೂ ಹೆಚ್ಚು ಲೇಖನಗಳು, ೬೦ಕ್ಕೂ ಹೆಚ್ಚು ಕವಿತೆಗಳು, ೨೫ಕ್ಕೂ ಹೆಚ್ಚು ಕಥೆಗಳು, ೩೦ಕ್ಕೂ ಹೆಚ್ಚು ಚುಟುಕು ಸಾಹಿತ್ಯ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬರವಣಿಗೆಯನ್ನು ಮುಂದುವರೆಸಿದ್ದಾರೆ. ಇವರ ಬರಹಗಳು ರಾಜ್ಯಮಟ್ಟದ ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಇವರು ಪದವಿ ಓದುವಾಗ ‘ವೈಯುಎಸ್’ ಎಂಬ ತಂಡ ಕಟ್ಟಿಕೊಂಡು ಸುಮಾರು ೨೦ಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದರು. ಯೂಟ್ಯೂಬ್‌ಗಳಲ್ಲಿ ಪ್ರಸಾರವಾಗಿರುವ ಇವರ ಹಾಡುಗಳು ಜನಮನ್ನಣೆಯನ್ನೂ ಗಳಿಸಿವೆ. ಇತ್ತೀಚೆಗೆ ‘ಮೈತ್ರಿ ಬಳಗ ತುಮಕೂರು' ಎನ್ನುವ ಸ್ನೇಹಿತರ ಗುಂಪಿನಲ್ಲಿ ಸಕ್ರಿಯಗೊಂಡು ಸರ್ಕಾರಿ ಶಾಲೆಗಳು ಅಂಗನವಾಡಿಗಳ ಸೇವಾಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದಾರೆ. “ಕ್ಯಾಂಪಸ್ ಕಹಾನಿ” ಇವರ ಚೊಚ್ಚಲ ಪುಸ್ತಕ.