About the Author

ಸಿ.ಜಿ. ವಿಜಯಸಿಂಹಾಚಾರ್ಯರು ವಿದ್ವಾಂಸರು, ಸಂಶೋಧಕರು ಹಾಗು ಸಾಹಿತಿಗಳು. ಇವರು ಚನ್ನಪಟ್ಟಣ ಮೂಲದವರಾಗಿದ್ದು, ತಮ್ಮ ವಿದ್ಯಾಭ್ಯಾಸವನ್ನು ಪೇಜಾವರ ಶ್ರೀ ವಿಶ್ವೇಶತೀರ್ಥರಲ್ಲಿ ನಡೆಸಿ ನಂತರ ಬನ್ನಂಜೆ ಗೋವಿಂದಾಚಾರ್ಯರಲ್ಲಿ ಪ್ರಸ್ಥಾನತ್ರಯ ಹಾಗೂ ಉಪನಿಷತ್‌ ಅಧ್ಯಯನವನ್ನು ಮಾಡಿದ್ದಾರೆ. ಇವರು 800 ವರ್ಷಗಳ ಹಿಂದಿನ ಮಧ್ವಾಚಾರ್ಯರ ಹೃಷೀಕೇಶ ತೀರ್ಥೀಯ ಹಾಗೂ ರಘುವರ್ಯತೀರ್ಥೀಯ ಹಸ್ತಪ್ರತಿಗಳ ಅಧ್ಯಯನ, ಮಹಾಭಾರತದ ಶುದ್ಧ ಪಾಠ ಮತ್ತು ಪ್ರಾಚೀನ ತಾಡವಾಲೆಗಳ, ಶಾಸನಗಳ ಅಧ್ಯಯನ, ಸಂರಕ್ಷಣೆ ಹಾಗೂ ಲಿಪ್ಯಂತರಣದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ಜಿಜ್ಞಾಸುಗಳಿಗೆ ಪಾಠ ಮಾಡುವುದನ್ನು ತಮ್ಮ ನಿತ್ಯಕರ್ಮವನ್ನಾಗಿ ಮಾಡಿಕೊಂಡಿದ್ದಾರೆ. ಬೇರೆ ಬೇರೆ ಶಾಖೆಗಳ ವೇದಗಳಿಗೆ ವಿಶೇಷವಾದ ಅರ್ಥವನ್ನು ಹೇಳಿದ್ದಾರೆ. ಇವರು ಈಗಾಗಲೇ ಹಲವಾರು ಗ್ರಂಥಗಳಿಗೆ ಅನುವಾದ, ವ್ಯಾಖ್ಯಾನ, ಟೀಕೆಗಳನ್ನು ರಚಿಸಿದ್ದು, ಅವು ಮುದ್ರಣದ ಹಂತದಲ್ಲಿವೆ. ಮಹಾಭಾರತದ Bhandarkar Oriental Research Institute (BORI) ನಡೆಸಿದ ಸಂಶೋಧನೆಗಳ ಬಗ್ಗೆ ಇವರು ಅಧ್ಯಯನ ನಡೆಸಿ ವಿಮರ್ಶಿಸಿದ್ದಾರೆ. ದಂಡಿಯ ದಶಕುಮಾರಚರಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದು, ಈ ಕೃತಿ ಸಾಹಿತ್ಯಲೋಕ ಪ್ರಕಾಶನದಿಂದ ಪ್ರಕಟಗೊಂಡಿದೆ. ವೇದಾಂತಕ್ಕೆ ಸಂಬಂಧಿಸಿದ ಹಲವಾರು ಸಂಶೋಧಿತಕೃತಿಗಳನ್ನು ಇವರು ಮಠಗಳಲ್ಲಿ ಮತ್ತು ವಿದ್ಯಾಪೀಠಗಳಲ್ಲಿ ಪ್ರಕಟಿಸಿದ್ದಾರೆ. ಮಾಧ್ಯಮಕ್ಷೇತ್ರದಲ್ಲೂ ಅವರ ಅನುಭವ ಹಿರಿದಾಗಿದೆ. ಇವರು ಸುವರ್ಣ ನ್ಯೂಸ್ ಮತ್ತು ಚಂದನ ವಾಹಿನಿ ಸೇರಿದಂತೆ ಹಲವಾರು ಮಾಧ್ಯಮಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬೌದ್ಧ, ಜೈನ, ಇಸ್ಲಾಂ, ಕ್ರೈಸ್ತ ಮತ್ತು ಅನೇಕ ತತ್ತ್ವಶಾಸ್ತ್ರಗಳ ಮೂಲ ಗ್ರಂಥಗಳನ್ನು ಅಧ್ಯಯನ ಮಾಡಿದ್ದಾರೆ. ಜೊತೆಗೆ ಪಾಶ್ಚಾತ್ಯತತ್ವಶಾಸ್ತ್ರದ ಕೃತಿಗಳ ಅಧ್ಯಯನ ನಡೆಸಿ ಸಮರ್ಥವಾಗಿ ವಿಮರ್ಶಿಸಿದ್ದಾರೆ.

ಸಿ.ಜಿ. ವಿಜಯಸಿಂಹ ಆಚಾರ್ಯ