28 ವರ್ಷಗಳ ಕಾಲ ಗಣಿತ, ವಿಜ್ಞಾನ ಶಿಕ್ಷಕರಾಗಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸುಧೀರ್ಘ ಅನುಭವ ಹೊಂದಿದ ಇವರು ಗಣಿತ, ವಿಜ್ಞಾನ ಬೋಧನೆಯ ಅನುಭವದ ಜೊತೆಗೆ ಮೂಢನಂಬಿಕೆ ಬಗ್ಗೆ ಜಾಗ್ರತಿ ಮೂಡಿಸುವ ಮತ್ತು ವೈಚಾರಿಕತೆ ಬೆಳೆಸುವ, ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಆಸಕ್ತಿ ಹೆಚ್ಚಿಸುವ, ವ್ಯಕ್ತಿತ್ವ ಬೆಳವಣಿಗೆ ಕಾರಣವಾಗುವಂತಹ ಸಾವಿರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಶಾಲೆ, ಕಾಲೇಜು ಎಂಬ ಸಂಸ್ಥೆಗಳು ಸಮಾಜದ ಪ್ರತಿರೂಪದಂತಿರುತ್ತವೆ. ಈ ಹೊತ್ತಿನ ಮಕ್ಕಳ ನಡವಳಿಕೆಯಲ್ಲಿನ ಬದಲಾವಣೆಯ ಪರಿ ಕಂಡಾಗ ಶಿಕ್ಷಕನಿಗೆ ಮುಂದಿನ ಸಮಾಜ ಹೇಗೆ ನಿರ್ಮಾಣ ವಾಗುತ್ತದೆ ಎಂಬ ಸುಳುಹು ಕಂಡು ಬರುತ್ತದೆ ಎಂದು ನಂಬಿ ಕೆಲವು ಲೇಖನಗಳನ್ನು ಬರೆದಿದ್ದಾರೆ. ಅಂತಹ ಸ್ಥತಿಯಲ್ಲಿ ಮಕ್ಕಳನ್ನು ಹೇಗೆ ಬದಲಿಸಬೇಕು ಎನ್ನುವ ಪರಿಹಾರವಿರುವ ಲೇಖನಗಳೂ ಇವೆ. ಎಲ್ಲವನ್ನು ಲೇಖನಗಳಲ್ಲಿ ಹೇಳಲು ಸಾಧ್ಯವಾಗದೆಂಬ ಅರಿವಿನೊಂದಿಗೆ, ಲೇಖನಗಳನ್ನು ಓದಿದ ಮೇಲೆ ಅದಕ್ಕೆ ಪೂರಕವಾದ ಪುಸ್ತಕ ಓದಬೇಕೆಂಬ ಆಸಕ್ತಿ ಹುಟ್ಟಿಸುವ ಕೆಲವು ಲೇಖನಗಳನ್ನು ಬರೆದಿದ್ದಾರೆ. ಇವರು ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿ ನಂತರ ಬಡ್ತಿ ಪಡೆದು ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜಶಾಸ್ತ್ರದ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ವಿಜ್ಞಾನದಂಗಳದಲ್ಲಿ ಎಂಬ ಪುಸ್ತಕವನ್ನು ಪ್ರಕಟಿಸಲಿದ್ದಾರೆ. ಮುದ್ರಣ ಕಾರ್ಯ ಪೂರ್ತಿಯಾಗಿದೆ. ಕವನ ಸಂಕಲನ ಜೋಳಿಗೆಯೊಳಗಿನ ಹೋಳಿಗೆ ಮುದ್ರಣಕ್ಕೆ ಸಿದ್ದವಾಗಿದೆ. ಮತ್ತೊಂದು ವಿಜ್ಞಾನ ಲೇಖನಗಳ ಪುಸ್ತಕವು ಪ್ರಕಟಣೆಗೆ ಸಿದ್ಧವಿದೆ.