ಪತ್ರಕರ್ತ, ಲೇಖಕ ತಿಲಕನಾಥ ಮಂಜೇಶ್ವರ ಅವರು ಹುಟ್ಟಿದ್ದು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಬಳಿಯ ಕುಂಜತ್ತೂರು ಗ್ರಾಮದಲ್ಲಿ. ತಂದೆ- ವೆಂಕಪ್ಪ, ತಾಯಿ- ಆನಂದಿ. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದ ಅವರು ತರಂಗ ವಾರ ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದರು. ಆನಂತರದಲ್ಲಿ ತರಂಗದ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕತಾ ಸಂಕಲನಗಳು ‘ಕಿಲಕಿಲನಗೆಯೊಡತಿ’ ಹಾಗೂ ಹೆಜ್ಜೆ ಗುರುತು. ಅವರ ರಾಜೀವ, ಬಿಂಬ ಪಲಾಯನ ಕಾದಂಬರಿಗಳು ನವಭಾರತ ಪತ್ರಿಕೆಯಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟವಾಗಿವೆ. ಅಲ್ಲದೇ ಮರ್ಮರ ಮತ್ತು ಅನುಪಲ್ಲವಿ ಕಾದಂಬರಿಗಳು ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಬಿಡಿ ಬರಹಗಳು ಕರ್ಮವೀರ, ಪ್ರಜಾಮತ, ಯುಗಪುರುಷ, ಲೋಕವಾಣಿ, ಉದಯವಾಣಿ ಮತ್ತು ತುಷಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪತ್ರಿಕೆ, ಸಾಹಿತ್ಯ ಕ್ಷೇತ್ರದ ಜೊತೆಗೆ ಹಲವಾರು ಸಂಘ ಸಂಸ್ಥೆಗಳ ಒಡನಾಟದಲ್ಲಿ ಕೂಡ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ.
ಕಾಸರಗೋಡು ತಾಲ್ಲೂಕು ಕನ್ನಡ ಲೇಖಕರ ಸಂಘಕ್ಕಾಗಿ ವೆಂಕಟರಾಜ ಪುಣಿಂಚಿತ್ತಾಯರೊಡನೆ ‘ಸಾಹಿತ್ಯ ಧ್ವನಿ’ ಸಂಚಿಕೆಯನ್ನು ಸಂಪಾದಿಸಿದ್ದಾರೆ. ಅಲ್ಲದೇ ಸುಪ್ರಸಿದ್ಧ ಕವಿಗಳ ಭಾವಗೀತೆಗಳ ‘ಭಾವಸಂಪದ’ ಮತ್ತು ‘ಭಾವ ಗಂಗೋತ್ರಿ’ಯನ್ನು ದುಂಡಿರಾಜರೊಡನೆ ಮಂಗಳೂರಿನ ಸಾಹಿತ್ಯ ಸಂಘಕ್ಕಾಗಿ ಸಂಪಾದಿಸಿದ್ದಾರೆ. ‘ಗುಣ ಗೌರವ’ ಮತ್ತು ‘ಉಡುಪಿ ಜಿಲ್ಲಾ ಬರಹಗಾರರ ಬಳಗ’ ಅವರ ಇನ್ನಿತರ ಸಂಪಾದಿತ ಕೃತಿಗಳು. ಇದರ ಜೊತೆಗೆ ಭಾವಗಂಗೋತ್ರಿ-ಮಂಗಳೂರು. ಮಂಗಳ ಫಿಲಂ ಸೊಸೈಟಿ -ಮಂಗಳೂರು ಸಂಸ್ಥೆಗಳ ಸ್ಥಾಪಕ ಕಾರ್ಯದರ್ಶಿಯಾಗಿ ಕಾಸರಗೋಡು ತಾಲ್ಲೂಕು ಕನ್ನಡ ಲೇಖಕರ ಸಂಘದ ಸಂಸ್ಥಾಪಕ ಸಹಕಾರ್ಯದರ್ಶಿಯಾಗಿಯೂ ದುಡಿದಿದ್ದಾರೆ. ಅವರ ‘ಹೆಜ್ಜೆ ಗುರುತು’ ಕಥಾ ಸಂಕಲನಕ್ಕೆ ಮತ್ತು ‘ಮರ್ಮರ’ ಕಾದಂಬರಿಗೆ ಬೆಂಗಳೂರಿನ ಪರ್ತಕರ್ತರ ವೇದಿಕೆಯ ಪ್ರಶಸ್ತಿ. ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಟ್ರಸ್ಟಿನ ‘ರುಕ್ಮಿಣಿ ಬಾಯಿ ಸಾಹಿತ್ಯ ಪ್ರಶಸ್ತಿ’ ಮತ್ತು ಕರ್ನಾಟಕ ಜನಸೇವಾ ಸಾಹಿತ್ಯ ಬಳಗ, ಬೀದರ ಇವರು ನೀಡುವ ದಿ. ಮ.ಮಾ ಬೋರಾಳಕರ ಮತ್ತು ದಿ. ಶ್ರೀಕಾಂತ ಪಾಟೀಲರ ನೆನಪಿನ ‘ಕರ್ನಾಟಕ ಜನಸೇವಾ ಸಾಹಿತ್ಯ ಪ್ರಶಸ್ತಿ’ಗಳು ದೊರೆತಿದೆ. ಪತ್ರಿಕಾ ಮಾಧ್ಯಮದ ಸೇವೆಗಾಗ ಹೈದರಾಬಾದ್ ಕರ್ನಾಟಕ ನಾಗರಿಕರ ವೇದಿಕೆ ಬೆಂಗಳೂರು ಮತ್ತು ಸ್ವರಗಂಗಾ ಸಂಗೀತ ಅಕಾಡಮಿ ಹೊಸಪೇಟೆ ಇವರು ನೀಡುವ ‘ಶ್ರೀ ಕೃಷ್ಣದೇವರಾಯ ಪ್ರಶಸ್ತಿ’, ಪತ್ರಿಕಾ ಮಾಧ್ಯಮದ ಸೇವೆಗಾಗಿ ಕಲಾಚೇತನ ಸಾಂಸ್ಕೃತಿಕ ಅಕಾಡಮಿ, ಗದಗ ಇವರ ‘ಕಲಾಚೇತನ ಪ್ರಶಸ್ತಿ’, ‘ತುಳುವೆರೆಂಕುಲು’ ಬೆಂಗಳೂರು ಇವರ ‘ಬಲಿಯೇಂದ್ರ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳು ದೊರೆತಿವೆ.