ಯುವಕವಿ ಸುರೇಶ ಜಿ.ಎಸ್. ಅವರು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಪುಟ್ಟ ಹಳ್ಳಿ ಗರಗದಹಳ್ಳಿ ತಾಂಡ್ಯದಲ್ಲಿ 1984ರ ಜುಲೈ 10ರಂದು ಜನಿಸಿದರು. ತಂದೆ - ಶಂಕರನಾಯ್ಕ, ತಾಯಿ - ಗೌರಿಬಾಯಿ. ತಮ್ಮ ಹುಟ್ಟೂರಿನಲ್ಲೆ ಮೂಲ ಶಿಕ್ಷಣವನ್ನು ಪಡೆದ ಇವರು ಕಾಲೇಜು ಶಿಕ್ಷಣವನ್ನು ತರೀಕೆರೆ ತಾಲೂಕಿನಲ್ಲಿ ಅಭ್ಯಸಿಸಿದರು. ವೃತ್ತಿಯಿಂದ ಶಿಕ್ಷಕ, ಪ್ರವೃತ್ತಿಯಿಂದ ಸಾಹಿತ್ಯಾಸ್ತರು.
ಇವರ ಶೈಕ್ಷಣಿಕ ಸಾಧನೆಗೆ 2011ರಲ್ಲಿ ಕನಕಗಿರಿಯ ವಾಲ್ಮೀಕಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ‘ಕೊಪ್ಪಳ ಜಿಲ್ಲಾ ಉತ್ತಮ ಶಿಕ್ಷಕ' ಪ್ರಶಸ್ತಿ, 2014 ರಲ್ಲಿ ಶಿಕ್ಷಕರ ಕಲ್ಯಾಣನಿಧಿ ವತಿಯಿಂದ 'ಗಂಗಾವತಿ ತಾಲೂಕಾ ಉತ್ತಮ ಶಿಕ್ಷಕ ಪ್ರಶಸ್ತಿ, 2019ರಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಗಂಗಾವತಿ ಇವರಿಂದ `ಗಂಗಾವತಿ ತಾಲೂಕಾ ಉತ್ತಮ ಶಿಕ್ಷಕ ಪ್ರಶಸ್ತಿ, 2020ರಲ್ಲಿ 'ಕೊಪ್ಪಳ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ಹಾಗೂ ಸಾಹಿತ್ಯ ಸೇವೆಗೆ ಗಂಗಾವತಿಯ ಸಿರಿಗನ್ನಡ ಸಾಹಿತ್ಯ ವೇದಿಕೆಯಿಂದ 'ಸಿರಿಗನ್ನಡ ಸಾಹಿತ್ಯ ಸೇವೆ ಪ್ರಶಸ್ತಿ’ ಮುಂತಾದ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಮೂಕ ಮನದ ಮಾತು’ (ಕವನ ಸಂಕಲನ) ಅವರ ಚೊಚ್ಚಲ ಕೃತಿ.