ಸುಂದರ್ ರಾಜ್ ಟಿ.ಎಸ್ ಅವರು ಹುಟ್ಟಿದ್ದು, ಬೆಳೆದಿದ್ದು, ಬಿ.ಎಸ್ಸಿ ವರೆಗೆ ಓದಿದ್ದು ಭದ್ರಾವತಿಯಲ್ಲಿ. ಆನಂತರ ಭದ್ರಾ ಜಲಾಶಯ ಯೋಜನೆಯಲ್ಲಿದ್ದು, ಮೈಸೂರು ವಿವಿಯ ಸ್ನಾತಕೋತ್ತರ ಕೇಂದ್ರದಿಂದ ಕೈಗಾರಿಕಾ ರಾಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿ, ಉದ್ಯೋಗಕ್ಕಾಗಿ ಹೈದರಾಬಾದ್ ಗೆ ತೆರಳಿದರು. ಅಲ್ಲಿ 15 ವರ್ಷ ಕಾಲ ವಿವಿಧ ರಾಸಾಯನಿಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ ನಂತರ 2005ರಿಂದ ಸ್ವಂತ ಉದ್ಯಮ ಆರಂಭಿಸಿದರು. ಕೈಗಾರಿಕೆಗಳಲ್ಲಿ ಉಪಯೋಗಿಸುವ ಇಂಧನಗಳ ಕ್ಷಮತೆ ಹೆಚ್ಚಿಸುವ ರಾಸಾಯನಿಕಗಳ ಸಂಶೋಧನೆ, ತಯಾರಿಕೆ, ಮಾರಾಟಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಸುಮಾರು 28 ವರ್ಷಗಳಿಂದ ಹೈದರಾಬಾದಿನಲ್ಲೇ ವಾಸಿಸುತ್ತಿದ್ದಾರೆ.
ಶಾಲಾ ದಿನದಿಂದಲೂ ಪ್ರಬಂಧ, ಕಥೆ, ಕವನ, ಹಾಡು ಬರೆಯುವ ಹವ್ಯಾಸದ ಇವರು ಕಾಲೇಜಿನಲ್ಲಿ ಚರ್ಚೆ, ಭಾಷಣ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಗಿಟ್ಟಿಸಿದ್ದರು. ಕಾಲೇಜು ದಿನಗಳಲ್ಲಿ ಬರೆದ ಕವನಗಳು, ಕಥೆಗಳು, ಕಥಾ ವಿಮರ್ಶೆಗಳು ಪ್ರಜಾವಾಣಿ, ಮಯೂರ, ತರಂಗ, ಮಂಗಳ, ತುಷಾರಗಳಲ್ಲಿ ಪ್ರಕಟವಾಗಿವೆ.
ಮೂವತ್ತು ವರ್ಷಗಳ ಸುದೀರ್ಘ ಅವಧಿಯ ನಂತರ, ಪ್ರಸಿದ್ದ ಚಿತ್ರಗೀತೆಗಳ ಧಾಟಿಯನ್ನು ಅನುಸರಿಸುವಂತಹ ಹಾಡುಗಳನ್ನು ನಗೆಯುಕ್ಕಿಸುವ ಅಣಕು ಹಾಡುಗಳಾಗಿ ಮಾತ್ರವಲ್ಲದೇ ಗಂಭೀರವಾದ ವಸ್ತುಗಳನ್ನು ಆಧರಿಸಿಯೂ ಬರೆಯಬೇಕೆಂದೆನಿಸಿ ಬರೆದ ಹಾಡುಗಳ ಸಂಕಲನ -ಮಸಾಲೆ ಮಂಡಕ್ಕಿ, ಪ್ರಕಟವಾಗಿದೆ.