ಡಾ. ಸುಬ್ರಹ್ಮಣ್ಯ ಸಿ. ಕುಂದೂರು ಅವರು ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಸಮೀಪದ ಹೇರೂರಿನವರು. ಸಂಶೋಧನೆ, ಸಾಹಿತ್ಯ ಬರೆಹದ ಜೊತೆಯಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕ್ರಿಯಾಶೀಲರು. ಆಳ್ವಾಸ್ ಕಾಲೇಜಿನಿಂದ ಪದವಿಯನ್ನು ಮತ್ತು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಕನ್ನಡ ಮತ್ತು ಚರಿತ್ರೆ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರಾದ ಇವರು ಡಾ. ಅಮರೇಶ ನುಗಡೋಣಿ ಅವರ ಮಾರ್ಗದರ್ಶನಲ್ಲಿ “ವಸಾಹತು ಕಾಲಘಟ್ಟದ ಕನ್ನಡ ಕಥಾ ಸಾಹಿತ್ಯದಲ್ಲಿ ಸ್ಥಳೀಯ ಪ್ರಜ್ಞೆಯ ತಾತ್ವಿಕ ಶೋಧ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ.
ರಾಷ್ಟ್ರೀಯ ಅರ್ಹತ ಪರೀಕ್ಷೆಗಳಾದ ಎನ್‌ಇಟಿ, ಎಸ್‌ಎಲ್‌ಇಟಿಯಲ್ಲಿ ಅರ್ಹತೆಯನ್ನು ಪಡೆದಿರುವ ಇವರು ಪ್ರಸ್ತುತ ಮಂಗಳೂರಿನ ಬಿಜಿಎಸ್ ಪದವಿ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ವಿಚಾರಗೋಷ್ಠಿಯಲ್ಲಿ ಪ್ರಬಂಧ ಮಂಡನೆಯ ಜೊತೆಗೆ ಅನೇಕ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಚರ್ಚೆಯಲ್ಲಿ ಭಾಗಿಯಾಗಿದ್ದಲ್ಲದೆ, ರಾಜ್ಯದ ಬಹುಭಾಗದಲ್ಲಿ ಉಪನ್ಯಾಸ ನೀಡುವ ನೆಲೆಯಲ್ಲಿ ಸಕ್ರಿಯರು. ಸಂತ ಆಗ್ನೆಸ್ ಪದವಿ ಕಾಲೇಜು ಹಾಗೂ ನಿಟ್ಟೆಯ ಸ್ವಯತ್ತ ವಿವಿಯ ಬಿಒ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪ್ರಾಮಾಣಿಕ ಶ್ರಮ ಜೀವಿಯಾಗಿ ಗುರುತಿಸಿಕೊಂಡ ಇವರಿಗೆ ಚರ್ಚಾ ಸ್ಪರ್ಧೆಯಲ್ಲಿ ನಾಲ್ಕು ಬಾರಿ ರಾಜ್ಯ ಪ್ರಶಸ್ತಿ, ಭಾಷಣ ಸ್ಪರ್ಧೆಯಲ್ಲಿ ಎರಡು ಬಾರಿ ರಾಜ್ಯಪ್ರಶಸ್ತಿ, ಪ್ರಜಾವಾಣಿಯ ವಾರ್ಷಿಕ ಯುವ ಪ್ರಶಸ್ತಿ 2020, ಲಿಲ್ಲಿ ರಾಮದಾಸ ಪ್ರಭು ಸಾಹಿತ್ಯ ಗೌರವ, ಕೊಪ್ಪ ತಾಲೂಕು ಕನ್ನಡ ರಾಜ್ಯೋತ್ಸವ ಗೌರವ 2022, ಜೆಸಿಐ ಮಲ್ನಾಡ್ ಗೌರವ, ಹು.ವಾ.ಶ್ರೀ ಅವರ ಗೌರವ ಹುಲ್ಲೆ 2017, ವಿದ್ಯಾಗಣಪತಿ ಸೇವಾ ಸಮಿತಿಯ ಗೌರವ, ಕುಂದೂರು2017, ಕೆಐಒಸಿಎಲ್ ಗೌರವ, ಕರ್ನಾಟಕ ವ್ಯಂಗ್ಯಚಿತ್ರ ಕಲಾ ಮಾಧ್ಯಮದ ಚಿತ್ರಕಾವ್ಯ ಪ್ರಶಸ್ತಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರಿನ ಸ್ವಾಮೀಜಿಯವರಿಂದ ಗೌರವ ಸನ್ಮಾನ, ಅಪೂರ್ವ ಜ್ಞಾನರತ್ನ ಪ್ರಶಸ್ತಿ, ಯುವಸಾಧಕ ಪ್ರಶಸ್ತಿ ಹೀಗೆ ಹತ್ತು ಹಲವು ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿದೆ.