ಲೇಖಕ ಸೂರಿ ಹಾರ್ದಳ್ಳಿ ಅವರು ಮೂಲತಃ ಕುಂದಾಪುರ ತಾಲ್ಲೂಕಿನ ಹಾರ್ದಳ್ಳಿಯವರು. ತಂದೆ- ಕೃಷ್ಣದೇವ ಕೆದಿಲಾಯ, ತಾಯಿ- ಶಾರದಮ್ಮ. ಪ್ರಾಥಮಿಕ ಶಿಕ್ಷಣವನ್ನು ಹಾರ್ದಳ್ಳಿಯಲ್ಲಿ, ಹೈಸ್ಕೂಲನ್ನು ಬಿದಕಲ್ ಕಟ್ಟೆ ಮತ್ತು ಪಿ.ಯು.ಸಿ ಯನ್ನು ಶಂಕರ ನಾರಾಯಣ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಬೆಂಗಳೂರಿಗೆ ಬಂದ ಸೂರಿ ಅವರು ವಸತಿಗೃಹವೊಂದರಲ್ಲಿ ಮಾಣಿಯಾಗಿ ಸೇರಿ, ಅಲ್ಲಿಯ ಮಾಲೀಕರ ಪ್ರೋತ್ಸಾಹದೊಂದಿಗೆ ಕಲಿಕೆ ಮುಂದುವರಿಸಿದರು. ಬಿ.ಎ. ಪದವೀಧರರಾದರು-ಬಾಹ್ಯ ವಿದ್ಯಾರ್ಥಿಯಾಗಿ.
ಬಿಸ್ಕತ್ ಕಾರ್ಖಾನೆ ಸೇರಿದಂತೆ ರಾಯಚೂರಿನ ರಾಯಚೂರು ವಾಣಿಯಲ್ಲಿ ಕೆಲಸಕ್ಕೆ ಸೇರಿದರು ಕೊನೆಗೆ ಮೈಕೋ ಉಪಕಾರಗೃಹದಲ್ಲಿ ಕೆಲಸ ಸಿಕ್ಕಿತು. ಪರೀಕ್ಷೆ, ಸ್ಪರ್ಧೆ ಪ್ರತಿನಿತ್ಯದ ಕ್ರಮವಾಗಿದ್ದು, ಎಲ್ಲರನ್ನೂ ಹಿಂದಿಕ್ಕಿ ಬಡ್ತಿ ಪಡೆದು, ಆಡಳಿತ ಸಂವಹನ ವಿಭಾಗದಲ್ಲಿ ಅಧಿಕಾರಿಯಾದರು. ನಾಡಿನ ಎಲ್ಲ ನಿಯತಕಾಲಿಕೆಗಳಲ್ಲೂ ಲೇಖನಗಳನ್ನು ಬರೆದರು. ಟಿ.ವಿ. ಧಾರಾವಾಹಿಗಳ ಸಂಭಾಷಣೆಗಾರರಾಗಿ, ಕಥೆಗಾರರಾಗಿಯೂ ಗುರುತಿಸಿಕೊಂಡರು. ಕಾರ್ಪೋರೇಟ್ ಕಮ್ಯುನಿಕೇಷನ್‌ನಲ್ಲಿ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ತ್ರಸ್ತ, ವಧುಪರೀಕ್ಷೆ-ಕಥಾಸಂಕಲನ; ಸಿನಿಮಾ ಸಿನಿಮಾ, ಹಿತೈಷಿ, ಗಗನ ಸೌಧ-ಕಾದಂಬರಿ; ಹಾಸ್ಯನಾಟಕ-ಬಾಸನ್ನಿಬಾಯ್ಸೋದ್ಹೇಗೆ ? ; ಉಪಾಯೋಪಾಯಗಳು, ಉಗಾದಿಸೀರೆ, ಅನಾಮಧೇಯ ಪತ್ರಗಳು, ಹೆಂಡತಿಯನ್ನು ಪ್ರೀತಿಸಿದರೆ, ಸರ್ಕಾರಿ ಹಾಸ್ಯೋತ್ಸವ-ಹಾಸ್ಯ ಸಂಕಲನಗಳು ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದರು. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಪಡುಕೋಣೆ ರಮಾನಂದ ಪ್ರಶಸ್ತಿ ಸೇರಿದಂತೆ ಹಲವು ಗೌರವ ಗಳು ಸಂದಿವೆ.