ಶರತ್ ಕಲ್ಕೋಡ್ (1946) ಕನ್ನಡ ಸಾಹಿತ್ಯ ಹಾಗೂ ಪತ್ರಿಕೋದ್ಯಮಗಳೆರಡರಲ್ಲೂ ಗಣನೀಯ ಸೇವೆ ಸಲ್ಲಿಸುತ್ತಿರುವವರು, ಮೂಲತಃ ಮಲೆನಾಡಿನವರು. ಮಂಗಳೂರಿನ ಮಂಗಳಗಂಗೋತ್ರಿಯಲ್ಲಿ ಕನ್ನಡ ಎಂ.ಎ. ಪದವಿ ಪಡೆದವರು. 1981ರಲ್ಲಿ ಮಂಗಳೂರಿನ 'ಸಂತೋಷ' ಮಾಸಪತ್ರಿಕೆಯ ಸಂಪಾದಕ ಮಂಡಳಿಗೆ ಸೇರಿ, ಪತ್ರಿಕಾ ಜೀವನವನ್ನು ಆರಂಭಿಸಿದ ಶರತ್ ಕಲ್ಕೋಡ್, ಮುಂದೆ ಮಣಿಪಾಲದ 'ತರಂಗ' ಪತ್ರಿಕೆಯಲ್ಲಿ 9 ವರ್ಷ, ಬೆಂಗಳೂರಿನ 'ಸುಧಾ' - 'ಮಯೂರ' ಪತ್ರಿಕೆಗಳ ಸಹಾಯಕ ಸಂಪಾದಕರಾಗಿ ಸುಮಾರು ಹದಿನೆಂಟು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ನಂತರವೂ, “ಉಷಾಕಿರಣ', 'ಓ ಮನಸೇ' ಪತ್ರಿಕೆಗಳಲ್ಲಿ ಕೆಲವು ವರ್ಷ ಕಾರ್ಯನಿರ್ವಹಿಸಿ, ಈಗ ಬರವಣಿಗೆ ಹಾಗೂ ಕೃಷಿಯನ್ನೇ ಬದುಕಿನ ಪ್ರಮುಖ ಉದ್ಯೋಗ ಆಗಿಸಿಕೊಂಡಿದ್ದಾರೆ. ಅವರ 'ಕಾಡೇಗೂಡೇ' ಕಾದಂಬರಿ, 'ಮಾಸ್ತಿ ಪ್ರಶಸ್ತಿ ವಿಜೇತ ಕೃತಿ, ಕವಿ, ಕತೆಗಾರರೂ ಆಗಿರುವ ಶರತ್ ಕಲ್ಕೋಡ್ ಇತರ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.