ಶಾರದಾ ಅವರು ಮೂಲತಃ ಶಿವಮೊಗ್ಗದವರು. ತಂದೆ- ಜೆ.ಎಲ್. ರಂಗಾಭಟ್ಟರು, ತಾಯಿ- ಮಹಾಲಕ್ಷ್ಮಮ್ಮ. ಶಿಶು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿಗೈದಿರುವ ಲೇಖಕಿ ಶಾರದಾ ವಿ. ಮೂರ್ತಿ.
ಕಥೆ, ಕವನ, ಕಾದಂಬರಿ, ನಾಟಕ, ಪ್ರಬಂಧಗಳ ರಚನೆಯಿಂದ ಮಕ್ಕಳ ಮನೋವಿಕಾಸಕ್ಕೆ ಕಾಣ್ಕೆ ನೀಡಿದ್ದಾರೆ. ಓದಿನ ಹಂತದಲ್ಲೇ ಶಿಶುಸಾಹಿತ್ಯದೆಡೆಗೆ ಆಕರ್ಷಿತರಾದವರು. ಬರವಣಿಗೆ ಫಲಿಸುತ್ತಲೇ ಅದನ್ನೇ ಉಸಿರಾಗಿಸಿ ಕೊಂಡವರು.
ಬೆಳ್ಳಿಚುಕ್ಕಿ, ಸ್ನೇಹಸೌರಭ, ಅನನ್ಯ, ಅರ್ಥ, ಮಿಡಿದ ಹೃದಯ, ಗೆಲುವು, ಆಂತರ್ಯ, ನಿರ್ಧಾರ ಮತ್ತಿತರ ಕಾದಂಬರಿಗಳನ್ನು ರಚಿಸಿದ್ದಾರೆ. ದಿಶ, ಮೌಲ್ಯ, ಹೊಂಬೆಳಗು, ಬಾಂಧವ್ಯ, ಶೋಧ, ಬೇರು, ಹಾಗೂ ಅನುಬಂಧ ಕಥಾ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಮಾತಾಡಿ ಗೊಂಬೆಗಳೆ, ಸ್ವಾತಂತ್ರ್ಯ ಸಂಭ್ರಮ ನಾಟಕ, ವೈವಿಧ್ಯ, ಸಮರಸದ ಹಾದಿಯಲಿ ಲೇಖನಗಳ ಸಂಗ್ರಹ ರಚಿಸಿದ್ದಾರೆ. ಹಲವು ಕವನ-ಕಥಾ ಸ್ವರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಕಸಾಪ ದತ್ತಿನಿಧಿ ಪ್ರಶಸ್ತಿ, ಲೇಖಕಿಯರ ಸಂಘದ ದತ್ತಿನಿಧಿ ಪ್ರಶಸ್ತಿ ಇನ್ನಿತರ ಗೌರವಗಳು ಲಭಿಸಿವೆ.