ಲೇಖಕಿ ಶಾಂತಾ ಇಮ್ರಾಪುರು ಅವರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುದ್ದೇಬಿಹಾಳಗಲ್ಲಿ ಪೂರ್ಣಗೊಳಿಸಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಿ.ಯು.ಸಿ 5ನೇ ರ್ಯಾಂಕ್ ನಲ್ಲಿ ಉತ್ತೀರ್ಣರಾದರು. ಬಿ.ಎ. ಪದವಿಯನ್ನೂ 7ನೇ ರ್ಯಾಂಕ್ ನಲ್ಲಿ ಪಡೆದರು. ಎಂ.ಎ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಡೆದ ಅವರು ಅಕ್ಕಮಹಾದೇವಿ ಜೀವನ, ಸಾಧನೆ ಕುರಿತು ಪ್ರೌಢ ಪ್ರಬಂಧ ಮಂಡಿಸಿ ಚಿನ್ನದ ಪದಕದೊಡನೆ ಪಿಎಚ್.ಡಿ. ಪದವಿ ಪಡೆದರು. ಈನಂತರ ಧಾರವಾಡದ ಶ್ರೀ ಹುರಕಡ್ಡಿ ಅಜ್ಜ ಸಂಸ್ಥೆಯ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದರು. ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ‍್ಯ ನಿರ್ವಹಿಸಿದ ನಂತರ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ರೀಡರ್ ಆಗಿ, ಪ್ರಾಧ್ಯಾಪಕಿಯಾಗಿ ಕಾರ‍್ಯ ನಿರ್ವಹಿಸಿದ್ದಾರೆ. ಸುಮಾರು 10 ವಿದ್ಯಾರ್ಥಿಗಳಿಗೆ ಪಿಎಚ್.ಡಿ ಹಾಗೂ 10 ಎಂ.ಫಿಲ್. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.
ಮಹಿಳಾ ಅಧ್ಯಯನ, ಅನುಭಾವ ಸಾಹಿತ್ಯ, ವಿಮರ್ಶೆ, ಸಂಶೋಧನೆ, ಆಧುನಿಕ ಸಾಹಿತ್ಯ, ಜನಪದ ಸಾಹಿತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದು ಸುಮಾರು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮಧ್ಯಯುಗದ ಮಹಿಳಾ ಅನುಭಾವಿಗಳನ್ನು ಜಗತ್ತಿನ ಇತರ ಮಹಿಳಾ ಅನುಭಾವಿಗಳೊಂದಿಗೆ ತೌಲನಿಕ ಅಧ್ಯಯನ ನಡೆಸಿ ವಿಮರ್ಶಾತ್ಮಕವಾಗಿ ಮಹಿಳಾಪರ ಒಳನೋಟಗಳನ್ನು ತಿಳಿಸುವ ಕೃತಿಗಳು- ‘ಮಧ್ಯಯುಗದ ಮಹಿಳಾ ಯುಗದ ಸಾಹಿತ್ಯ ಮತ್ತು ಸೃಜನ ಶೀಲತೆ’ ಮತ್ತು ‘ಧರ್ಮ-ಮಹಿಳೆ-ಸಮಾಜ’ ಮುಂತಾದವುಗಳು. ವೈಚಾರಿಕ ವ್ಯಕ್ತಿತ್ವದ ಅನುಭಾವಿ ವಚನಕಾರ್ತಿ ಮುಕ್ತಾಯಕ್ಕನ ಜೀವನ ವ್ಯಕ್ತಿತ್ವವನ್ನು ಪರಿಚಯಿಸುವ ಕೃತಿ ‘ಮುಕ್ತಾಯಕ್ಕ’, ವಚನ ಸಾಹಿತ್ಯದ ವೈಚಾರಿಕ ಅಧ್ಯಯನದಿಂದ ಕೂಡಿರುವ ಇನ್ನೊಂದು ಕೃತಿ ‘ಮರುಳ ಶಂಕರ ದೇವ’. ನಡುಗನ್ನಡ ವಚನಕಾರರನ್ನಷ್ಟೇ ಅಧ್ಯಯನಕ್ಕೆ ಆಯ್ದುಕೊಳ್ಳದೆ ಆಧುನಿಕ ಮಹಿಳಾ ಸಾಹಿತ್ಯದ ಬಗೆಗೂ ವಿಶೇಷವಾಗಿ ಅಧ್ಯಯನ ನಡೆಸಿ ನವೋದಯ ಕಾಲದ ಹಲವಾರು ಲೇಖಕಿಯರ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಮಹಿಳಾ ಅಧ್ಯಯನದ ಮೇಲೆ ರಚಿಸರುವ ಕೃತಿ ‘ಸಾಹಿತ್ಯ – ಸಂವೇದನೆ ’. ಆಧುನಿಕ ಸಾಹಿತ್ಯ ಚರಿತ್ರೆಯಲ್ಲಿ ಅಜ್ಞಾತರಾಗಿ ಉಳಿದಿದ್ದ ಕೆಲ ಮಹಿಳಾ ಸಾಹಿತಿಗಳ ಬಗ್ಗೆ ಅಧ್ಯಯನ ನಡೆಸಿ ರಚಿಸಿರುವ ವ್ಯಕ್ತಿಚಿತ್ರಗಳು ದೇವಾಂಗನಾ ಶಾಸ್ತ್ರಿ, ಸಂತೂಬಾಯಿ ನೀಲಗಾರ, ಶಾರದಾ ಗೋಕಾಕ, ಶಾಂತಾದೇವಿ ಮಾಳವಾಡ, ಡಾ. ಸರೋಜಿನಿ ಶಿಂತ್ರಿ ಮುಂತಾದವುಗಳು. ಜಾನಪದ ಅಧ್ಯಯನದಲ್ಲಿಯೂ ಆಸಕ್ತರಾಗಿದ್ದು ಜಾನಪದ ತ್ರಿಪದಿಗಳು, ಒಡಪುಗಳು, ಗಾದೆಗಳು, ವೈದ್ಯಕೀಯ ವಿಚಾರ ಮುಂತಾದವುಗಳಲ್ಲದೆ ಮಹಿಳಾ ಜಾನಪದ ಅಧ್ಯಯನಕ್ಕೆ ಸಂಬಂಧಿಸಿದಂತೆ ‘ಮಹಿಳಾ ಸಾಹಿತ್ಯ – ಸಂಸ್ಕೃತಿ’, ಅಕ್ಕಮಹಾದೇವಿ ಚರಿತ್ರೆಯನ್ನಾಧರಿಸಿದ ‘ಅಕ್ಕಮಹಾದೇವಿ’ ಸಣ್ಣಾಟ, `ಅಲ್ಲಮ ಪ್ರಭು’ ಸಣ್ಣಾಟಗಳು ಮತ್ತು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಗಾಗಿ ‘ಗಾದೆಗಳು’ ಸಂಪುಟ ಮುಂತಾದವುಗಳನ್ನು ಸಂಪಾದಿಸಿಕೊಟ್ಟಿದ್ದಾರೆ.
ಅಲ್ಲದೇ ಕೇಂದ್ರ ಸಾಹಿತ್ಯ ಅಕಾಡಮಿಗಾಗಿ ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲೆಗಾಗಿ ಎಸ್.ಎಸ್.ಭೂಸನೂರ ಮಠ ರವರನ್ನು ಕುರಿತು ವ್ಯಕ್ತಿ ಚಿತ್ರ ರಚಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಮಧ್ಯಯುಗದ ಮಹಿಳಾ ಅಭಿವ್ಯಕ್ತಿಯ ಚಾರಿತ್ರಿಕ ಅಧ್ಯಯನವನ್ನು ದಾಖಲಿಸುವ ನಿಟ್ಟಿನಲ್ಲಿ ಎಂಟು ನೂರು ವರ್ಷಗಳ ಮಹಿಳಾ ಸಾಹಿತ್ಯ ಪರಂಪರೆಯನ್ನು ಗುರುತಿಸುವ ‘ಮಹಿಳಾ ಸಾಹಿತ್ಯ ಚರಿತ್ರೆ’ ಯ ರಚನೆಯಲ್ಲಿ ಸಹಕರಿಸಿದ್ದಾರೆ. ಇವಲ್ಲದೆ ಆಧುನಿಕ ಕನ್ನಡ ಸಾಹಿತ್ಯದ ಅಧ್ಯಯನದ ವಿಮರ್ಶಾ ಕೃತಿ ‘ಪೂರ್ವಾಪರ’, ಪ್ರೊ. ಲಲಿತಾಂಬ ವೃಷಬೇಂದ್ರಸ್ವಾಮಿಯವರ ಸಮಗ್ರ ಸಾಹಿತ್ಯ ಸಂಪಾದನೆಯ ‘ವಚನಾಂಜಲಿ – ಕಾವ್ಯಾಂಜಲಿ’, ‘ಕಥಾಂಜಲಿ – ಚಿಂತನಾಂಜಲಿ’ ಯ ಎರಡು ಸಂಪುಟಗಳು; ಶಾಂತದೇವಿ ಮಾಳವಾಡ, ಸರೋಜಿನಿ ಶಿಂತ್ರಿ, ಶಿವಲಿಂಗಮ್ಮ ಕಟ್ಟಿ, ಡಾ.ವೀಣಾ ಶಾಂತೇಶ್ವರ ಮುಂತಾದವರುಗಳ ಸಮನ್ವಯ, ವಿಚಾರ ಪತ್ನಿ, ಅಕ್ಕಾ ಕೇಳವ್ವ, ನಿರ್ದಿಗಂತ (ಭಾಗ1-2) ಮುಂತಾದ ಸಮಗ್ರ ಅಧ್ಯಯನ ಕೃತಿಗಳನ್ನು ಸಂಪಾದಿಸಿದ್ದಾರೆ. ಆಡಳಿತಾತ್ಮಕವಾಗಿ ಕರ್ನಾಟಕ ವಿಶ್ವವಿದ್ಯಾಲಯದ ಅಕೆಡಮಿಕ್ ಕೌನ್ಸಿಲ್, ಸೆನೆಟ್, ಸಿಂಡಿಕೇಟ್ ಸದಸ್ಯೆಯಾಗಿ; ಸಂಘ – ಸಂಸ್ಥೆಗಳೊಡನೆ- ಉತ್ತರ ಕರ್ನಾಟಕ ಲೇಖಕಿಯರ ಸಂಘ, ಪ್ರೊ. ಸಂ.ಶಿ. ಭೂಸನೂರುಮಠ ಪ್ರತಿಷ್ಠಾನ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ವಿದ್ಯಾವರ್ಧಕ ಸಂಘ ಮುಂತಾದವುಗಳ ಸದಸ್ಯೆಯಾಗಿ, ಕೋಶಾಧಿಕಾರಿಯಾಗಿ, ಕಾರ‍್ಯಾಧ್ಯಕ್ಷೆಯಾಗಿ ಕಾರ‍್ಯ ನಿರ್ವಹಿಸಿದ್ದಾರೆ. ವಚನ ಸಾಹಿತ್ಯದ ವಿಶೇಷಾದ್ಯಯನಕ್ಕಾಗಿ (2004), ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ಕದಳಿ ಶ್ರೀ ಪ್ರಶಸ್ತಿ (2005), ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಹಿತಿ – ದಂಪತಿ ಸನ್ಮಾನ (2007 ಪತಿ ಡಾ. ಸೋಮಶೇಖರ ಇಮ್ರಾಪುರ), ಮೈಸೂರಿನ ಸುತ್ತೂರ ಶಿವರಾತ್ರೀಶ್ವರ ಮಠ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಗ್ರಂಥ ಪ್ರಶಸ್ತಿ, ಶ್ರೀ ಸಿರಸಂಗಿ ಲಿಂಗರಾಜ ಪ್ರತಿಷ್ಠಾನ ಪ್ರಶಸ್ತಿ; ಅಕ್ಕಮಹಾದೇವಿ (ಸಣ್ಣಾಟ) ಕೃತಿಗೆ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಜ್ಞಾನ – ವಿಜ್ಞಾನ ಪ್ರಶಸ್ತಿ ಮತ್ತು ಅಲ್ಲಮ ಪ್ರಭು (ಸಣ್ಣಾಟ) ಕೃತಿಗೆ ಗ್ರಂಥ ಪ್ರಶಸ್ತಿ; ಪ್ರೊ. ಸ.ಸ.ಮಾಳವಾಡ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.