ಸಂಧ್ಯಾ ಹೆಗಡೆ ದೊಡ್ಡಹೊಂಡ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ದೊಡ್ಡ ಹೊಂಡದವರು. ಸಂತೆಗುಳಿ, ಅರೆ ಅಂಗಡಿಯಲ್ಲಿ ಪ್ರಾಥಮಿಕ ಶಿಕ್ಷಣ,ನಂತರ, ಹೊನ್ನಾವರ, ಧಾರವಾಡಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ್ದು, ಶಂಕರ ಮೊಕಾಶಿ ಪುಣೆಕರ್ ಅವರ ಗಂಗವ್ವ ಗಂಗಾಮಾಯಿ ಕೃತಿಯ ಮೇಲೆ ಸಂಪ್ರಬಂಧ ರಚಿಸಿದ್ದಾರೆ, ‘ಆಧುನಿಕ ಕನ್ನಡ ಸಾಹಿತ್ಯ ಮೀಮಾಂಸೆ; ಕಾವ್ಯ’ ಸಂಶೋಧನಾ ಮಹಾಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಪಿಎಚ್.ಡಿ ಪಡೆದಿದ್ದಾರೆ.
ಕಥೆ, ಕವನ, ವಿಮರ್ಶೆ, ಸಂಶೋಧನಾ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಪೂರ್ಣದೆಡೆಗೆ', 'ಅರಿವಿನೆಡೆಗೆ', 'ಕನಸು'ಸಂಪಾದಿತ ಕೃತಿಗಳು. 'ಗುಲಾಬಿ ಕಚ್ಚಿನ ಬಳೆಗಳು' ಕಥಾ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಲೇಖಕರ ಚೊಚ್ಚಲ ಕೃತಿ ಸಹಾಯಧನ, ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಮಲ್ಲಿಕಾ ದತ್ತಿ ಪ್ರಶಸ್ತಿ, ಕೆ. ಎಸ್. ನ ಟ್ರಸ್ಟ್‌ನ ಅಧ್ಯಯನ ಪುರಸ್ಕಾರ ಸಂದಿವೆ. ಸದ್ಯ, ಎನ್. ಎಂ. ಕೆ. ಆರ್. ವಿ. ಮಹಿಳಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಓದು, ಚೆಸ್, ಸಂಗೀತ-ಇವು ಸಂಧ್ಯಾ ಹೆಗಡೆ ಅವರ ನೆಚ್ಚಿನ ಹವ್ಯಾಸಗಳು.